- Kannada News Photo gallery Special Puja to Shanimahatma, the famous Chikka Madhura, Devotees flock to the first Saturday of Shravan month, Bengaluru rural News in kannada
ಇತಿಹಾಸ ಪ್ರಸಿದ್ದ ಚಿಕ್ಕ ಮಧುರೆ ಶನಿಮಹಾತ್ಮನಿಗೆ ವಿಶೇಷ ಪೂಜೆ; ಶ್ರಾವಣ ಮಾಸದ ಮೊದಲ ಶನಿವಾರಕ್ಕೆ ಹರಿದು ಬಂದ ಭಕ್ತರು
ಶನಿವಾರ ಬಂತೆಂದರೆ ಬೆಳ್ಳಂ ಬೆಳಗ್ಗೆ ಭಕ್ತರು ದೇವಾಲಯಗಳತ್ತ ಬರುವುದು ಸಹಜ. ಇನ್ನು ಶ್ರಾವಣ ಮಾಸದ ಮೊದಲ ಶನಿವಾರ ಅಂದರೆ ಹೇಳಬೇಕಾ, ವಿಶೇಷ ಪೂಜೆ ಜೊತೆಗೆ ಅಲಂಕಾರ ಕಾಮನ್. ಹೀಗಾಗೆ ಇಂದು ಸಹ ಶ್ರಾವಣ ಮಾಸದ ಮೊದಲ ಶನಿವಾರದ ಪ್ರಯುಕ್ತ ಭಕ್ತರ ದಂಡೆ ಹರಿದು ಬಂದಿದ್ದು, ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ದರ್ಶನ ಪಡೆದು ಬೂಂದಿ ಪಾಯಸ ಸವಿದು ಪುನೀತರಾದರು.
Updated on: Aug 10, 2024 | 7:00 PM

ದೇವಾಲಯದ ಆವರಣದಲ್ಲಿ ದರ್ಶನಕ್ಕಾಗಿ ಉದ್ದುದ್ದ ಕ್ಯೂ ನಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಸಾವಿರಾರು ಜನ ಭಕ್ತರು. ವಿಶೇಷ ಹೂವಿನ ಅಲಂಕಾರದ ಜೊತೆಗೆ ಪೂಜೆ ಅಭಿಷೇಕದಿಂದ ಭಕ್ತರಿಗೆ ದರ್ಶನ ನೀಡುತ್ತಿರುವ ಶನಿಮಹಾತ್ಮ. ಮತ್ತೊಂದೆಡೆ ಶ್ರಾವಣ ಮಾಸದ ಮೊದಲ ಶನಿವಾರ ಬೂಂದಿ ಪಾಯಸ ಸವಿದು ಉಘೇ ಉಘೇ ಅಂತಿರುವ ಭಕ್ತಾಧಿಗಳು.

ಹೌದು, ಅಂದಹಾಗೆ ಇಂದು ಶ್ರಾವಣ ಮಾಸದ ಮೊದಲ ಶನಿವಾರದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಚಿಕ್ಕ ಮಧುರೆ ಶನಿಮಹಾತ್ಮನ ಸನ್ನಿಧಿಗೆ ಭಕ್ತರ ದಂಡೆ ಹರಿದು ಬಂದಿತ್ತು.

ಶ್ರಾವಣ ಮಾಸದ ಮೊದಲ ಶನಿವಾರ ಶನಿಮಹಾತ್ಮನ ದರ್ಶನ ಪಡೆದರೆ ಒಳ್ಳೆಯದು ಎಂದು ಅನಾಧಿಕಾಲದಿಂದಲೂ ಚಿಕ್ಕ ಮಧುರೆ ಶನಿಮಹಾತ್ಮನ ಸನ್ನಿಧಿಗೆ ಸಾವಿರಾರು ಜನ ಭಕ್ತರು ಬರುತ್ತಿದ್ದು, ಇಂದು ಸಹ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.

ಜೊತೆಗೆ ಶ್ರಾವಣ ಶನಿವಾರವಾದ ಕಾರಣ ಬೆಳಗ್ಗೆಯಿಂದಲೆ ದೇವಾಲಯದಲ್ಲಿ ವಿಶೇಷ ಪೂಜೆಯನ್ನ ಹಮ್ಮಿಕೊಂಡಿದ್ದು, ದೇವಾಲಯದ ಆರವಣದಲ್ಲಿ ವಿಶೇಷ ಹೂ ಮತ್ತು ಹಣ್ಣುಗಳಿಂದ ಮಾಡಿದ್ದ ಅಲಂಕಾರ ಭಕ್ತರನ್ನ ಸೆಳೆಯಿತು.

ಶ್ರಾವಣ ಮಾಸದಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಗ್ರಾಮಾಂತರ ಮತ್ತು ಮಾಗಡಿ ಕಡೆಯಿಂದಲು ಶನಿಮಹಾತ್ಮನ ಸನ್ನಿಧಿಗೆ ಭಕ್ತರು ಬರುವ ಕಾರಣ ದೇವಾಲಯದಲ್ಲಿ ಮಳೆ ಮತ್ತು ಬಿಸಿಲಿಂದ ಅಡ್ಡಿಯಾಗದಂತೆ ಶೀಟ್ಗಳನ್ನ ಹಾಕಿ ಸರತಿ ಸಾಲಿಗೆ ಮೂಲ ಸೌಕರ್ಯಗಳನ್ನ ಮಾಡಿದರು.

ಜೊತೆಗೆ ಶನಿವಾರ ಭಕ್ತರು ಉಪವಾಸದಲ್ಲಿ ದೇವಸ್ಥಾನಕ್ಕೆ ಬರ್ತಾರೆ ಎಂದು ದೇವಾಲಯದ ಬಳಿ ಅನ್ನಸಂತರ್ಪಣೆಯನ್ನು ಮಾಡಿದ್ದು, ಬೂಂದಿ ಪಾಯಸ, ಮಜ್ಜಿಗೆ, ಅನ್ನ ಸಾಂಬಾರ್ನ್ನು ಭಕ್ತರು ಸವಿದರು. ಇನ್ನು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಕೆಲ ಕಾಲ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳನ್ನ ಕಳಿಸಲು ಪೊಲೀಸರು ಹರಸಾಹಸ ಪಟ್ಟರು.

ಒಟ್ಟಾರೆ ಶ್ರಾವಣ ಮಾಸದ ಮೊದಲ ಶನಿವಾರ ವಿವಿಧ ಮೂಲೆಗಳಿಂದ ಭಕ್ತರ ದಂಡೆ ದೇವಸ್ಥಾನದತ್ತ ಆಗಮಿಸಿ ದೇವರ ದರ್ಶನ ಪಡೆಯುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುವ ಮೂಲಕ ಭಕ್ತಿ ಬಾವವನ್ನ ಮೆರೆದಿದಂತೂ ಸುಳ್ಳಲ್ಲ.




