ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಪುಸ್ತಕದಲ್ಲಿ ನಾಯಿಯ 4 ವಿಶೇಷ ಗುಣಗಳನ್ನು ಉಲ್ಲೇಖಿಸಿದ್ದಾರೆ. ಒಬ್ಬ ವ್ಯಕ್ತಿಯು ಈ ಗುಣಗಳನ್ನು ಅಳವಡಿಸಿಕೊಂಡರೆ, ಅವನು ತನ್ನ ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ನಾಯಿ ಒಂದು ಸಾಕುಪ್ರಾಣಿ ಆಗಿ ಮನುಷ್ಯರ ಜೊತೆಗೆ ಜೀವಿಸುತ್ತದೆ. ದಿನನಿತ್ಯದ ಜೀವನದಲ್ಲಿ ನಾವು ಅದನ್ನು ನೋಡುತ್ತಿದ್ದರೂ ಅದರಿಂದ ಏನನ್ನೋ ಕಲಿಯಬಹುದು ಎಂಬ ಬಗ್ಗೆ ಯೋಚಿಸಿರುವುದಿಲ್ಲ. ಆದರೆ, ಚಾಣಕ್ಯ ಹೇಳಿರುವಂತೆ ನಾಯಿಯಿಂದಲೂ ಕಲಿಯಬಹುದಾದ ಅಂಶಗಳಿವೆ. ಅದೇನು ಎಂದು ನೋಡೋಣ.
ಚಾಣಕ್ಯ ತಿಳಿಸುವಂತೆ, ಒಬ್ಬ ವ್ಯಕ್ತಿಯು ಹಸಿವಿನ ಸಮಯದಲ್ಲಿ ಏನು ಪಡೆಯುತ್ತಾನೋ ಅವನು ಅದನ್ನು ಪ್ರೀತಿಸಬೇಕು. ಏಕೆಂದರೆ ಆಹಾರವು ನಮ್ಮ ದೇಹದ ಅಗತ್ಯವನ್ನು ಪೂರೈಸುವ ಬಹುಮುಖ್ಯ ಸಾಧನವಾಗಿದೆ. ಆದರೆ, ಮನುಷ್ಯರಲ್ಲಿ ಆ ತೃಪ್ತಿ ಎಂಬುದೇ ಬಹಳ ಕಡಿಮೆ. ಮನುಷ್ಯ ಎಂಥಾ ಹಸಿವೆ ಇದ್ದರೂ ಸಾಮಾನ್ಯ ಆಹಾರಕ್ಕೆ ತೃಪ್ತಿ ಪಡುವ ಬದಲು ರುಚಿಯ ಹಿಂದೆ ಓಡುತ್ತಲೇ ಇರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಆತ ನಾಯಿಯಿಂದ ಸಂತೃಪ್ತಿ ಹೊಂದುವುದನ್ನು ಕಲಿಯಬೇಕು. ನಾಯಿ ಹಸಿವಿನ ಸಮಯದಲ್ಲಿ ಆಹಾರವನ್ನು ತೃಪ್ತಿಯಿಂದ ತಿನ್ನುತ್ತದೆ.
ನಿದ್ರೆಯ ಸಮಯದಲ್ಲಿಯೂ ನಾಯಿ ತುಂಬಾ ಎಚ್ಚರವಾಗಿ ಇರುತ್ತದೆ. ಸಣ್ಣ ಶಬ್ದದ ನಂತರವೂ ನಾಯಿ ಎಚ್ಚರಗೊಳ್ಳುತ್ತದೆ. ಆದರೆ ಮನುಷ್ಯ ಇಂತಹ ಎಚ್ಚರ ಹೊಂದಿರುವುದಿಲ್ಲ. ಬಹುತೇಕ ಬಾರಿ ಮನುಷ್ಯ ಗಾಢ ನಿದ್ರೆಯಲ್ಲಿ ಇರುತ್ತಾನೆ. ಆದರೆ, ಮನುಷ್ಯನೂ ಸಣ್ಣ ಎಚ್ಚರವಾದರೂ ಹೊಂದಿದ್ದರೆ ಅಗತ್ಯ ಇದ್ದಾಗ ತಕ್ಷಣಕ್ಕೆ ಎಚ್ಚರಗೊಳ್ಳಬಹುದು. ಈ ಗುಣ ನಾಯಿಯಲ್ಲಿದೆ.
ಎಲ್ಲರಿಗೂ ತಿಳಿದಿರುವಂತೆ ನಿಷ್ಠೆಗೆ ಹೆಸರಾದ ಪ್ರಾಣಿ ನಾಯಿ. ಮನುಷ್ಯ ನಾಯಿಯಿಂದ ನಿಷ್ಠೆಯನ್ನು ಕಲಿಯಬೇಕು ಎನ್ನುತ್ತಾನೆ ಚಾಣಕ್ಯ. ನಾಯಿ ತನ್ನ ಜೊತೆಗಾರರಿಗೆ ಎಂದೂ ಮೋದ ಮಾಡುವುದಿಲ್ಲ. ಅದಕ್ಕಾಗಿ ಅದು ಪ್ರಾಣ ಕೊಡಲೂ ಸಿದ್ಧ ಇರುತ್ತದೆ. ಒಬ್ಬಾತ ತನ್ನ ಪ್ರೀತಿಪಾತ್ರರಿಗೆ ಹಾಗೆಯೇ ನಿಷ್ಠರಾಗಿ ಇರಬೇಕು. ನಂಬಿಕೆಯನ್ನು ಎಂದೂ ಮುರಿಯಬಾರದು.
ನಾಯಿಗೆ ನಿರ್ಭಯತೆಯ ಗುಣವಿದೆ. ಯಾವುದೇ ಸಮಸ್ಯೆ ಬಂದಾಗ ತಕ್ಷಣ ಅದು ಅದನ್ನು ಎದುರಿಸಲು ಮುಂದಾಗುತ್ತದೆ. ಈ ಗುಣಗಳನ್ನು ಸಹ ಮನುಷ್ಯ ಕಲಿಯಬೇಕು. ಪ್ರತಿಕೂಲ ಸಂದರ್ಭಗಳನ್ನು ಸಹ ನಮಗೆ ಅನುಗುಣವಾಗಿ ಹೊಂದಿಸಿಕೊಳ್ಳಲು, ಎದುರಿಸಲು ಕಲಿಯಬೇಕು.
Published On - 8:28 am, Thu, 7 April 22