
ಮಾಧ್ವ ಸಂಪ್ರದಾಯದಂತೆ ಹಣೆಗೆ ತಿಲಕವಿಟ್ಟು, ಕೊರಳಲ್ಲಿ ತುಳಸಿ ಮಣಿ ಮಾಲೆ, ನವಿಲು ಗರಿಯ ಪೇಟ ಧರಿಸಿದ್ದ ನರೇಂದ್ರ ಮೋದಿ, ಭಗವದ್ಗೀತೆಯ 15ನೇ ಅಧ್ಯಾಯದಲ್ಲಿರುವ ಪುರುಷೋತ್ತಮ ಯೋಗವನ್ನು ಪಠಿಸಿದರು. ಲಕ್ಷ ಕಂಠದಲ್ಲಿ ಮೊಳಗಿದ ಗೀತಾ ಪಾರಾಯಣ ಮೈರೋಮಾಂಚನ ಗೊಳಿಸುವಂತಿತ್ತು.

ಪುತ್ತಿಗೆ ಶ್ರೀಗಳು ಪ್ರಧಾನಿ ಮೋದಿಯನ್ನ ಸ್ವಾಗತಿಸುತ್ತಾ, ಸಂಸ್ಕೃತದಲ್ಲೇ ಹಾಡಿ ಹೊಗಳಿದರು. ನರೇಂದ್ರ ಮೋದಿ ಸಾಕ್ಷಾತ್ ಅರ್ಜುನ. ಅರ್ಜುನನ ಅವತಾರ. ವಿಶ್ವದ ನಾಯಕ ಅಂತಾ ಸುಗುಣೇಂದ್ರ ಶ್ರೀಗಳು ಕೊಂಡಾಡಿದರು. ಅಲ್ಲದೆ ರಾಷ್ಟ್ರ ರಕ್ಷಣೆಯ ದೀಕ್ಷೆ ನೀಡಿ, ಘೋಷ ಮಂತ್ರಗಳೊಂದಿಗೆ ರಕ್ಷಾ ಕವಚವನ್ನು ತೊಡಿಸಿದರು.

ಲಕ್ಷ ಕಂಠ ಗೀತಾ ಪಾರಾಯಣ ಬಳಿಕ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಕೃಷ್ಣನೂರಿಗೆ ಬಂದಿದ್ದು ನನ್ನ ಪರಮ ಸೌಭಾಗ್ಯ. ಇವತ್ತು ಶ್ರೀಕೃಷ್ಣ, ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಉಡುಪಿಗೆ ಎಂಟ್ರಿ ಕೊಡ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ರೋಡ್ ಶೋ ಮೂಲಕ ಕೃಷ್ಣ ಮಠಕ್ಕೆ ಆಗಮಿಸಿದ ಮೋದಿಗೆ ರಸ್ತೆಯುದ್ಧಕ್ಕೂ ಹೂಮಳೆಯ ಸ್ವಾಗತ ಸಿಕ್ಕಿತು. ಹುಲಿವೇಷ ಕುಣಿತ, ವಿವಿಧ ಕಲಾ ತಂಡಗಳು ಮೋದಿಗೆ ಸ್ವಾಗತ ಕೋರಿದವು.

ಶ್ರೀಕೃಷ್ಣ ಮಠದ ಮಹಾದ್ವಾರದಲ್ಲಿ ಮೋದಿಗೆ ಪೂರ್ಣ ಕುಂಭ ಸ್ವಾಗತ ದೊರೆಯಿತು. ಬಳಿಕ ಮಧ್ವ ಸರೋವರಕ್ಕೆ ತೆರಳಿದ ಮೋದಿ ತೀರ್ಥ ಪ್ರೋಕ್ಷಣೆ ಮಾಡಿ ಮಠದೊಳಗೆ ಪ್ರವೇಶಿಸಿದರು. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ದರ್ಶನ ಪಡೆದುಕೊಂಡರು.

ಆ ಬಳಿಕ ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನಕನ ಕಿಂಡಿಗೆ ಸ್ವರ್ಣ ಲೇಪನ ಮಾಡಲಾಗಿದ್ದು, ಸ್ವತಃ ಮೋದಿಯೇ ಉದ್ಘಾಟನೆ ಮಾಡಿದರು. ಚಿನ್ನ ಲೇಪಿತ ಕನಕನ ಕಿಂಡಿ ಮೂಲಕ ಮುಖ್ಯಪ್ರಾಣ ದೇವರು, ಗರುಡ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ರೋಡ್ ಶೋ ವೇಳೆ, ವಿದ್ಯಾರ್ಥಿ ಪರೀಕ್ಷಿತ್ ಆಚಾರ್ ಎಂಬವರು ವಿಶೇಷ ರೀತಿಯಲ್ಲಿ ಮೋದಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷಿತ್ ಅವರು ಕೈಯಾರೆ ಪ್ರಧಾನಿ ಮೋದಿ ಮತ್ತು ಅವರ ತಾಯಿಯವರ ಸುಂದರ ಭಾವಚಿತ್ರವನ್ನು ರಚಿಸಿ ತಂದಿದ್ದು, ಗಮನ ಸೆಳೆಯಿತು.