
ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೊ ಕಬಡ್ಡಿ ಲೀಗ್ ಸೀಸನ್ 8 ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಭಾನುವಾರದಿಂದ ಆರಂಭವಾಗಿರುವ ಹರಾಜು ಪ್ರಕ್ರಿಯೆ ಮೂರು ದಿನಗಳ ಕಾಲ ನಡೆಯಲಿದೆ. 2ನೇ ದಿನ ನಡೆದ ಹರಾಜಿನಲ್ಲಿ ಅನುಭವಿ ಆಟಗಾರ ಪ್ರದೀಪ್ ನರ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ.

ಹೌದು, ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಸೋಮವಾರ ನಡೆದ ಹರಾಜಿನಲ್ಲಿ 1 ಕೋಟಿ 65 ಲಕ್ಷ ರೂಪಾಯಿ ನೀಡಿ ಯುಪಿ ಯೋಧ ಫ್ರಾಂಚೈಸಿ ಪ್ರದೀಪ್ರನ್ನು ಖರೀದಿಸಿದೆ. ಇದಕ್ಕೂ ಮುನ್ನ ಹರಿಯಾಣ ಸ್ಟೀಲರ್ಸ್ ಪ್ರೋ ಕಬಡ್ಡಿ ಸೀಸನ್ 6 ರಲ್ಲಿ ಮೋನು ಗೋಯಟ್ ಅವರನ್ನು 1.51 ಕೋಟಿಗೆ ಖರೀದಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದುಬಾರಿ ದಾಖಲೆ ಪ್ರದೀಪ್ ಪಾಲಾಗಿದೆ.

ಪಿಕೆಎಲ್ನ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಪ್ರದೀಪ್ಗಾಗಿ ಹರಾಜಿನಲ್ಲಿ ಭರ್ಜರಿ ಪೈಪೋಟಿ ಕಂಡು ಬಂದಿತ್ತು. 30 ಲಕ್ಷ ಬೇಸ್ ಪ್ರೈಸ್ ಹೊಂದಿದ್ದ ಅನುಭವಿ ಆಟಗಾರನನ್ನು ಮೊದಲು ತೆಲುಗು ಟೈಟಾನ್ಸ್ ತಂಡ 1.20 ಕೋಟಿಗೆ ಬಿಡ್ ಮಾಡಿತು. ಬಳಿಕ ಅನೇಕ ತಂಡಗಳು ನರ್ವಾಲ್ ಅವರನ್ನು ಖರೀದಿಸಲು ಆಸಕ್ತಿ ತೋರಿದವು. ಆದಾಗ್ಯೂ, ಯುಪಿ ಯೋಧ 1.65 ಕೋಟಿ ನೀಡಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರದೀಪ್ ನರ್ವಾಲ್ ಹೊರತಾಗಿ ಎರಡನೇ ದಿನದಂದು ಸಿದ್ಧಾರ್ಥ್ ದೇಸಾಯಿ ಅವರನ್ನು ತೆಲುಗು ಟೈಟಾನ್ಸ್ 1.30 ಕೋಟಿಗಳಿಗೆ FBM ಕಾರ್ಡ್ ಬಳಸಿ ಖರೀದಿಸಿತು. ಈ ಹಿಂದೆ ಪ್ರದೀಪ್ ನರ್ವಾಲ್ ಪಟ್ನಾ ಪೈರೇಟ್ಸ್ ತಂಡದ ಪರ ಸೀಸನ್ 3, 4 ಮತ್ತು 5 ರಲ್ಲಿ ಪ್ರಶಸ್ತಿಯನ್ನು ಗೆದಿದ್ದರು.

ಹಾಗೆಯೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಇದುವರೆಗೆ 1160 ರೈಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆ ಕೂಡ ಪ್ರದೀಪ್ ಹೆಸರಿನಲ್ಲಿದೆ. ಇದಲ್ಲದೇ ಅತೀ ಹೆಚ್ಚು ಸೂಪರ್ 10 ಅಂಕ ಪಡೆದಿರುವ ದಾಖಲೆ ಕೂಡ ಪ್ರದೀಪ್ ಹೆಸರಿನಲ್ಲಿದೆ. ಅವರು ಇದುವರೆಗೆ 59 ಸೂಪರ್ 10 ಗಳನ್ನು ಪಾಯಿಂಟ್‌ಗಳನ್ನು ಸಂಪಾದಿಸಿದ್ದಾರೆ.