Kannada News Photo gallery RBI MPC August Meet; RBI Governor Shaktikanta Das hold 3 days meet from August 6; Read more in Kannada
RBI MPC August Meet: ಇಂದು ಆರ್ಬಿಐ ಎಂಪಿಸಿ ಸಭೆ ಆರಂಭ; ಬಡ್ಡಿದರ ಇಳಿಕೆ ಸಾಧ್ಯತೆ ಸದ್ಯಕ್ಕಿಲ್ಲ: ವರದಿ
ನವದೆಹಲಿ, ಆಗಸ್ಟ್ 6: ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆಸುತ್ತದೆ. ಇದರಲ್ಲಿ ರಿಪೋ, ರಿವರ್ಸ್ ರಿಪೋ ಇತ್ಯಾದಿ ದರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಬಾರಿಯ ಸಭೆ ಇಂದು ಆರಂಭವಾಗಿದೆ. ಆಗಸ್ಟ್ 8, ಗುರುವಾರ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಲಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...
1 / 6
ಆರ್ಬಿಐನ ಹಣಕಾಸು ನೀತಿ ಸಮಿತಿ ಅಥವಾ ಎಂಪಿಸಿ ಸಭೆ ಇಂದು ಆಗಸ್ಟ್ 6 ಆರಂಭವಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಈ ಕಮಿಟಿಯಲ್ಲಿ ಆರ್ವರು ಸದಸ್ಯರಿದ್ದಾರೆ. ಇವರಲ್ಲಿ ಮೂವರು ಆರ್ಬಿಐಗೆ ಸೇರಿದವರಾಗಿದ್ದರೆ, ಇನ್ನು ಮೂವರು ಹೊರಗಿನವರಾಗಿದ್ದಾರೆ. ಆಗಸ್ಟ್ 8ರಂದು ಸಭೆ ಮುಕ್ತವಾಗಲಿದ್ದು, ಗವರ್ನರ್ ಅವರ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ತಿಳಿಸಲಿದ್ದಾರೆ.
2 / 6
ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಹಣಕಾಸು ನೀತಿ ಬಗ್ಗೆ ನಿಷ್ಕರ್ಷೆ ನಡೆಯುತ್ತದೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಮತ್ತು ಆರ್ಥಿಕತೆಯ ಸರಾಗ ಓಟಕ್ಕೆ ಅನುವು ಮಾಡಿಕೊಳ್ಳಬಲ್ಲಂತಹ ಸೂಕ್ತ ಕ್ರಮವನ್ನು ಅವಲೋಕಿಸಲಾಗುತ್ತದೆ. ಅಂತೆಯೇ, ರಿಪೋ ದರ, ರಿವರ್ಸ್ ರಿಪೋ ದರ ಇತ್ಯಾದಿ ಬಗ್ಗೆ ಈ ಎಂಪಿಸಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ದೇಶದ ಹಣದುಬ್ಬರ ಮತ್ತು ಆರ್ಥಿಕತೆಯ ಪ್ರಸಕ್ತ ಸ್ಥಿತಿ ಮತ್ತು ಭವಿಷ್ಯದ ಸ್ಥಿತಿ ಹೇಗಿದೆ ಎನ್ನುವ ಅವಲೋಕನ ಕೂಡ ನಡೆಯುತ್ತದೆ.
3 / 6
ವರದಿಗಳ ಪ್ರಕಾರ ರಿಪೋ ದರದಲ್ಲಿ ಈ ಬಾರಿಯು ಬದಲಾವಣೆ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಶೇ. 6.5ರಷ್ಟಿರುವ ದರವೇ ಮುಂದುವರಿಯಬಹುದು. 2022ರ ಮೇನಲ್ಲಿ ಶೇ. 4ರಷ್ಟು ಮಾತ್ರವೇ ರಿಪೋ ದರ ಇದ್ದದ್ದು. ಹಣದುಬ್ಬರ ಅತಿಯಾಗಿದ್ದರಿಂದ ರಿಪೋ ದರ ಹೆಚ್ಚಳ ಶುರುವಾಯಿತು. 2023ರ ಫೆಬ್ರುವರಿಯವರೆಗೆ ಸತತವಾಗಿ ಹೆಚ್ಚಳವಾಗಿ ಶೇ. 6.5 ತಲುಪಿತು. ಒಂದೂವರೆ ವರ್ಷ ಕಾಲ ಇದೇ ದರ ಅಸ್ತಿತ್ವದಲ್ಲಿದೆ.
4 / 6
ರಿಪೋ ದರ ಯಾಕೆ ಮುಖ್ಯ? ರಿಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳಿಗೆ ಅಗತ್ಯಬಿದ್ದಾಗ ಆರ್ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ಈ ಬಡ್ಡಿದರಗಳಿಗೆ ಅನುಗುಣವಾಗಿ ಬ್ಯಾಂಕುಗಳೂ ಕೂಡ ತಮ್ಮ ಗ್ರಾಹಕರಿಗೆ ಬಡ್ಡಿದರ ಪರಿಷ್ಕರಿಸಬಹುದು. ಹಣದುಬ್ಬರ ಹೆಚ್ಚಾದಾಗ ಅದಕ್ಕೆ ಕಡಿವಾಣ ಹಾಕಲು ಆರ್ಬಿಐ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ಬಡ್ಡಿದರ ಹೆಚ್ಚಿಸುವುದು. ಬಡ್ಡಿದರ ಹೆಚ್ಚಿಸಿದರೆ ಜನರು ಹೆಚ್ಚು ಹಣ ಬಳಸೋದಿಲ್ಲ. ಇದರಿಂದ ವೆಚ್ಚ ತಗ್ಗುತ್ತದೆ. ಪರಿಣಾಮವಾಗಿ ಹಣದುಬ್ಬರ ಕಡಿಮೆ ಆಗುತ್ತದೆ. ಇದು ಲಾಜಿಕ್.
5 / 6
ಈ ಬಾರಿ ರಿಪೋ ದರ ಕಡಿತ ಯಾಕಾಗಲ್ಲ? ಭಾರತದ ಹಣದುಬ್ಬರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಶೇ. 4.9ರಷ್ಟಿದೆ. ಈ ಸಂದರ್ಭದಲ್ಲಿ ಬಡ್ಡಿದರ ಇಳಿಸಿದರೆ ಹಣದುಬ್ಬರ ಮತ್ತೆ ಹೆಚ್ಚಾಗಬಹುದು ಎನ್ನುವ ಆತಂಕ ಇದೆ. ಆಹಾರವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಮುಂಬರುವ ಕೆಲ ತಿಂಗಳಲ್ಲಿ ಅದು ಯಶಸ್ವಿಯಾದರೆ ಡಿಸೆಂಬರ್ನೊಳಗೆ ಆರ್ಬಿಐ ಬಡ್ಡಿದರ ಕಡಿಮೆಗೊಳಿಸಬಹುದು.
6 / 6
ಬಡ್ಡಿದರ ಯಾಕೆ ಕಡಿಮೆಗೊಳಿಸಬೇಕು? ಬಡ್ಡಿದರ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಆರ್ಥಿಕತೆಯ ಗಾಲಿಚಕ್ರಗಳ ಓಟಕ್ಕೆ ಅಡಚಣೆ ಆಗುತ್ತದೆ. ಇವು ಸಲೀಸಾಗಿ ಸಾಗಬೇಕಾದರೆ ಬಡ್ಡಿದರ ಕಡಿಮೆ ಮಟ್ಟದಲ್ಲಿರಬೇಕು. ಜನರಿಗೆ ಖರ್ಚು ಮಾಡಲು ಸುಲಭವಾಗಿ ಹಣ ಸಿಗುವಂತಿರಬೇಕು. ಹೀಗಾಗಿ, ಆರ್ಬಿಐ ಬಹಳ ಎಚ್ಚರಿಕೆಯಿಂದ ಎಲ್ಲಾ ಪರಿಸ್ಥಿತಿಯನ್ನೂ, ಸಾಧ್ಯಾಸಾಧ್ಯತೆಯನ್ನೂ ಅವಲೋಕಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆಗಸ್ಟ್ 8ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಕುತೂಹಲವಂತೂ ಇದೆ.