
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಫಿಟ್‌ನೆಸ್ ಸಮಸ್ಯೆಯಿಂದಾಗಿ ಕಳೆದ 2026ರ ಆವೃತ್ತಿಯಿಂದ ಹೊರಗುಳಿದಿದ್ದ 45 ವರ್ಷದ ಧೋನಿಯ ಐಪಿಎಲ್ ನಿರ್ಗಮನದ ಕುರಿತು ಉಳಿದ ತಂಡಗಳು ಕೂಡ ಪ್ರತಿಕ್ರಿಯಿಸಿದ್ದು, ತಲಾ ಮೂಡಿಸಿದ್ದ ಛಾಪನ್ನು ಸ್ಮರಿಸಿವೆ.
ಸುಮಾರು ಎರಡು ದಶಕಗಳ ಸುದೀರ್ಘ ಪಯಣ, ಟ್ರೋಫಿಗಳ ಸರಮಾಲೆ, ಮರೆಯಲಾಗದ ಕ್ಷಣಗಳು, ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟ ರೋಚಕ ಪಂದ್ಯಗಳು ಹಾಗೂ ಎಂದಿಗೂ ವಿಚಲಿತವಾಗದ ಶಾಂತ ಸ್ವಭಾವದ ಮೂಲಕ ನೀವು ನಿರ್ಮಿಸಿದ ಅದ್ಭುತ ಪರಂಪರೆ. ಪ್ರತಿಯೊಂದು ತಂಡದ ಬಣ್ಣದಲ್ಲೂ ಗುರುತಿಸಿಕೊಂಡಿರುವ ಅಭಿಮಾನಿಗಳಿಗೆ ನೀವು ನೀಡಿದ ಸಂತೋಷಕ್ಕೆ, ಆಟವನ್ನು ಮುನ್ನಡೆಸಿದ ನಿಮ್ಮ ಅದ್ಭುತ ಶೈಲಿಗೆ ಹೃತ್ಪೂರ್ವಕ ಧನ್ಯವಾದಗಳು, ಮಾಹಿ ಭಾಯ್! ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರತಿಕ್ರಿಯಿಸಿದೆ.
ನೀವು ನಮ್ಮೊಂದಿಗಿರುವುದನ್ನು ನಾವು ಯಾವಾಗಲೂ ಸಹಜವೆಂದೇ ಭಾವಿಸಿದ್ದೆವು. ಮಾಹಿ ಭಾಯ್, ನೀವಿಲ್ಲದೆ ಐಪಿಎಲ್ ಎಂದಿಗೂ ಮೊದಲಿನಂತಿರಲು ಸಾಧ್ಯವಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪೋಸ್ಟ್ ಮಾಡಿದೆ.
ಧೋನಿ ನಿವೃತ್ತಿ ಬಗ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದು, ಹೆಲಿಕಾಪ್ಟರ್ ಕೊನೆಯ ಬಾರಿಗೆ ಲ್ಯಾಂಡ್ ಆಗುತ್ತಿದೆ. ವಿದಾಯ, ಮಾಹಿ! ಎಂದು ಬರೆದುಕೊಂಡಿದೆ.
ತಲಾ ಯುಗ ಎಂದಿಗೂ ಮುಗಿಯುವುದಿಲ್ಲ. ಪಾತ್ರವಷ್ಟೇ ಬದಲಾಗುತ್ತದೆ ಎಂದು ಲಕ್ನೋ ಸೂಪರ್ ಜೈಂಟ್ಸ್ ಪೋಸ್ಟ್ ಮಾಡಿದ್ದು, ಹಿರಿಯ ಕ್ರಿಕೆಟ್ ಆಟಗಾರನಿಗೆ ಧನ್ಯವಾದ ಹೇಳಿದೆ. ಇನ್ನು ಯಾವುದೇ ಸಂದೇಶ ಬರೆದುಕೊಳ್ಳದೆ ಕೇವಲ ರೋಹಿತ್ ಶರ್ಮಾ ಮತ್ತು ಧೋನಿ ಇರುವ ಫೋಟೋ ಹಂಚಿಕೊಂಡಿರುವ ಮುಂಬೈ ಇಂಡಿಯನ್ಸ್ ನೀಲಿ ಮತ್ತು ಹಳದಿ ಹೃದಯದ ಎಮೋಜಿ ನಡುವೆ ಸ್ನೇಹದ ಗುರುತು ಹಾಕಿ ಎಕ್ಸ್ ಪೋಸ್ಟ್ ಮಾಡಿದೆ.
Published On - 5:07 pm, Tue, 17 November 26