- Kannada News Photo gallery Record Milk Yields: Devanahalli Hosts State-Level Cow Competition and Calf Show
ಹಾಲು ಕರೆಯುವ ಸ್ಪರ್ಧೆ: 20-25 ಲೀಟರ್ ಹಾಲು ಕೊಡುವ ಹಸುಗಳನ್ನ ನೋಡಿ ದಂಗಾದ ಜನ
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಅತಿ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನ ನಡೆಯಿತು. ಗೋಪಾಲಕರ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಭಾಗವಹಿಸಿ, ಲೀಟರ್‌ಗಟ್ಟಲೆ ಹಾಲು ಕರೆಯುವ ಸಾಮರ್ಥ್ಯ ಪ್ರದರ್ಶಿಸಿದರು. ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ವಿಜೇತ ರೈತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
Updated on:Jan 19, 2026 | 9:06 PM

ಅದು ನಿತ್ಯ ಯುವಕರು ಆಟವಾಡುವ, ಹಿರಿಯರು ವಾಕಿಂಗ್ ಮಾಡುವ ಮೈದಾನ. ಆದರೆ ಆ ಮೈದಾನಕ್ಕೆ ಕಳೆದ ಮೂರು ದಿನಗಳಿಂದ ಜನರ ಬದಲಿಗೆ ಜಾನುವಾರುಗಳು ಎಂಟ್ರಿಕೊಟ್ಟಿವೆ. ಏಕೆಂದರೆ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ನಡೆಯುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಜಾನುವಾರುಗಳು ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗೋಪಾಲಕರ ಸಂಘದ ವತಿಯಿಂದ ಕಳೆದ ಮೂರು ದಿನಗಳಿಂದ ರಾಜ್ಯ ಮಟ್ಟದ ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಸ್ವಯಂ ಪ್ರೇರಿತವಾಗಿ ತಮ್ಮ ಹಸುಗಳೊಂದಿಗೆ ಸ್ಪರ್ಧೆಗೆ ಆಗಮಿಸಿದ್ದರು. ಜೊತೆಗೆ ರೈತರೆಲ್ಲಾ ಮೈದಾನದಲ್ಲೇ ಹಸುಗಳನ್ನ ಮೇಯಿಸುತ್ತಾ ಕಾಲ ಕಳೆದಿದ್ದು, ಸಂಜೆ ವೇಳೆ ಜಡ್ಜ್ಗಳ ಮುಂದೆಯೇ ಪ್ರತಿ ಹಸುವಿನಿಂದ ಕರೆದ ಲೀಟರ್ ಗಟ್ಟಲೆ ಹಾಲು ಅಳತೆ ಮಾಡಿದರು.

ಹಾಲು ಕರೆಯುವ ಸ್ಪರ್ಧೆಗಾಗಿ ವಿವಿಧ ಮೂಲೆಗಳಿಂದ ಬಂದ ರೈತರಿಗೆ ಉಳಿದುಕೊಳ್ಳಲು ಹಾಗೂ ಹಸುವಿಗೆ ಮೇವಿನ ವ್ಯವಸ್ಥೆ ಮಾಡಿದ್ದು, ನೂರಾರು ಜನರು ವಿವಿಧ ತಳಿಗಳ ಹಸುಗಳನ್ನ ನೋಡಿ ಸಂತಸಪಟ್ಟರು. ರೈತರು ಸ್ಥಳೀಯರ ಮುಂದೆಯೇ ಕರೆದ ಹಾಲನ್ನ ಕ್ಯಾನ್ಗಳಿಗೆ ಹಾಕಿ ಅಳತೆ ಮಾಡಿದ್ದು, ಒಂದೊಂದು ಹಸು 20 ರಿಂದ 25 ಲೀಟರ್ವರೆಗೂ ಹಾಲು ಕರೆಯುವ ಮೂಲಕ ನೋಡುಗರು ಬೆರಗಾದರು.

ಇನ್ನು ಮೊದಲ ಬಹುಮಾನ ಗೆದ್ದ ಹೆಚ್ಚು ಹಾಲು ಕರೆದ ರೈತರಿಗೆ ಒಂದೂವರೆ ಲಕ್ಷ ರೂ ಹಣ ಹಾಗೂ ಟ್ರೋಫಿ, ಎರಡನೇ ಬಹುಮಾನವಾಗಿ ಒಂದು ಲಕ್ಷ ರೂ ಹಣ ಮತ್ತು ಮೂರನೇ ಬಹುಮಾನವಾಗಿ 75 ಸಾವಿರ ರೂ ಹಣವನ್ನ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ನೀಡುವ ಮೂಲಕ ರೈತರನ್ನ ಪ್ರೋತ್ಸಾಹಿಸಿದರು. ವಿನೂತನ ಸ್ಪರ್ಧೆ ಕಂಡು ಜನರು ನಿಬ್ಬೆರಗಾದರು.
Published On - 9:01 pm, Mon, 19 January 26