
ಅಕ್ಟೋಬರ್ 8ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಣೆ ಮಾಡಿದರು. ನಟ ರಿಷಬ್ ಶೆಟ್ಟಿ ಅವರು ‘ಬೆಸ್ಟ್ ಆ್ಯಕ್ಟರ್’ ನ್ಯಾಷನಲ್ ಅವಾರ್ಡ್ ಪಡೆದರು.

‘ಕಾಂತಾರ’ ಚಿತ್ರದಲ್ಲಿನ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದ್ದಾರೆ. ಈ ಖುಷಿಯಲ್ಲಿ ರಿಷಬ್ ಅವರು ಅಭಿಮಾನಿಗಳನ್ನು ನೆನಪಿಸಿಕೊಂಡಿದ್ದಾರೆ.

‘ಈ ಗೌರವ ನಮ್ಮದಲ್ಲ ನಿಮ್ಮದು. ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗಿದ್ದು ಕಾಂತಾರವೆಂಬ ಕನಸನ್ನು ನನಸಾಗಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರೀತಿಗೆ ಸದಾ ಕೃತಜ್ಞರಾಗಿ ಇರುತ್ತೇವೆ’ ಎಂದು ರಿಷಬ್ ಶೆಟ್ಟಿ ಅವರು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಣವಾದ ‘ಕಾಂತಾರ’ ಸಿನಿಮಾಗೆ ವಿಜಯ್ ಕಿರಂಗದೂರು ಅವರು ಬಂಡವಾಳ ಹೂಡಿದ್ದಾರೆ. ಅವರು ಕೂಡ ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಕಾಂತಾರ’ ಪ್ರೀಕ್ವೆಲ್ಗೂ ಅವರು ಹಣ ಹೂಡುತ್ತಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಕುಂದಾಪುರದಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದ ಮೇಲೆ ಪ್ರೇಕ್ಷಕರು ಸಖತ್ ಭರವಸೆ ಇಟ್ಟುಕೊಂಡಿದ್ದಾರೆ. 2025ರಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.