Updated on: Mar 05, 2022 | 4:04 PM
ಭಾರತದ ಅನೇಕ ಸೆಲೆಬ್ರಿಟಿಗಳ ಜೊತೆಗೆ ಶೇನ್ ವಾರ್ನ್ ಅವರು ಒಡನಾಟ ಹೊಂದಿದ್ದರು. ಕ್ರಿಕೆಟ್ ಲೋಕದ ತಾರೆಯಾಗಿ ಮಿಂಚಿದ್ದ ಅವರು ಐಪಿಎಲ್ ಮೂಲಕ ಭಾರತದಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದರು. ನಟಿ ಶಿಲ್ಪಾ ಶೆಟ್ಟಿ ಕೂಡ ಶೇನ್ ವಾರ್ನ್ ಜೊತೆ ಆಪ್ತವಾಗಿದ್ದರು.
ಶೇನ್ ವಾರ್ನ್ ನಿಧನಕ್ಕೆ ಶಿಲ್ಪಾ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ಸ್ಪಿನ್ ದಿಗ್ಗಜನ ಜೊತೆ ಕಳೆದ ಕೆಲವು ಅಪರೂಪದ ಕ್ಷಣಗಳನ್ನು ನೆನಪಿಸುವಂತಹ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಶೇನ್ ವಾರ್ನ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಕಮೆಂಟ್ಗಳ ಮೂಲಕ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಶೇನ್ ವಾರ್ನ್ ಮೃತಪಟ್ಟರು ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಮನರಂಜನಾ ಲೋಕದ ಘಟಾನುಘಟಿಗಳು ಕೂಡ ಶೇನ್ ವಾರ್ನ್ ಅವರಿಗೆ ಅಭಿಮಾನಿಗಳಾಗಿದ್ದರು. ಬಾಲಿವುಡ್ನ ಅನೇಕ ತಾರೆಯರಿಗೆ ಶೇನ್ ವಾರ್ನ್ ಎಂದರೆ ಅಚ್ಚುಮೆಚ್ಚು.
ಶೇನ್ ವಾರ್ನ್ ನಿಧನದಿಂದ ಹಿಂದಿ ಚಿತ್ರರಂಗದ ಅನೇಕರಿಗೆ ನೋವಾಗಿದೆ. ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ವರುಣ್ ಧವನ್, ರಣವೀರ್ ಸಿಂಗ್, ಶಿಬಾನಿ ದಂಡೇಕರ್, ಹುಮಾ ಖುರೇಶಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶ್ರೇಷ್ಠ ಸ್ಪಿನ್ನರ್ ನಿಧನಕ್ಕೆ ಕಂಬನಿ ಮಿಡಿದ್ದಾರೆ.
‘ಲೆಜೆಂಡ್ಗಳು ಸದಾ ಜೀವಂತವಾಗಿರುತ್ತಾರೆ’ ಎಂದು ಹೇಳಿರುವ ಶಿಲ್ಪಾ ಶೆಟ್ಟಿ ಅವರು ಶೇನ್ ವಾರ್ನ್ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ಶೇನ್ ವಾರ್ನ್ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.