Kannada News Photo gallery The lemon crop that supported the farmer, Sale at good price even in rainy season, Vijayapura News in Kannada
ರೈತನ ಕೈಹಿಡಿದ ಲಿಂಬೆ ಬೆಳೆ; ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟ
ವಿಜಯಪುರ ಜಿಲ್ಲೆಯ ಲಿಂಬೆ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಪ್ರತಿ ಮಳೆಗಾಲದಲ್ಲಿಯೂ ಕನಿಷ್ಟ ದರ ಲಿಂಬೆಗೆ ಇರುತ್ತಿತ್ತು. ಸುಮಾರು ಒಂದು ಸಾವಿರ ಲಿಂಬೆ ಇರುತ್ತಿದ್ದ ಮೂಟೆ ಮಳೆಗಾಲದಲ್ಲಿ 1000 ರಿಂದ 1200 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಕಷ್ಟಪಟ್ಟು ಬೆಳೆದು ಕೂಲಿಯಾಳುಗಳ ಖರ್ಚು ಸಹ ಮಳೆಗಾಲದಲ್ಲಿ ಲಿಂಬೆಗೆ ಬರುತ್ತಿರಲಿಲ್ಲ. ಆದರೂ ಫಸಲು ಬಿಡಬಾರದೆಂಬ ಕಾರಣದಿಂದ ಕಡಿಮೆ ದರಕ್ಕೆ ಮಾರಾಟ ಮಾಡುವುದು ಬೆಳೆಗಾರರಿಗೆ ಅನಿವಾರ್ಯವಾಗಿತ್ತು. ಈ ಬಾರಿ ಲಿಂಬೆಗೆ ಡಿಮ್ಯಾಂಡ್ ಬಂದಿದ್ದು, ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.
1 / 6
ಲಿಂಬೆಯ ನಾಡು ಎಂದು ವಿಜಯಪುರ ಜಿಲ್ಲೆಯನ್ನು ಕರೆಯಲಾಗುತ್ತದೆ. ಇಲ್ಲಿ ಲಿಂಬೆ, ದ್ರಾಕ್ಷಿ, ದಾಳಿಂಬೆ ಹಾಗೂ ಸೀತಾಫಲ ಸೇರಿದಂತೆ ಉತ್ತಮ ಹಣ್ಣುಗಳನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಪ್ರದೇಶದಲ್ಲಿ ಲಿಂಬೆ ಬೆಳೆಯುವ ಜಿಲ್ಲೆ ಇದಾಗಿದೆ. ವಿಜಯಪುರ ಜಿಲ್ಲೆಯಲ್ಲಿ 12,789 ಕ್ಕೂ ಆಧಿಕ ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆಯನ್ನು ಬೆಳೆಯಲಾಗುತ್ತಿದೆ. ಇಂತ ಲಿಂಬೆಗೆ ಮಳೆಗಾಲದಲ್ಲಿ ಉತ್ತಮ ದರ ಇರುವುದಿಲ್ಲ.
2 / 6
ಮಾರುಕಟ್ಟೆಗಳಲ್ಲಿ ಒಂದು ಸಾವಿರ ಲಿಂಬೆ ಇರುವ ಮೂಟೆ 1000 ದಿಂದ 1200 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿತ್ತು. ಕಳೆದ 20 ವರ್ಷಗಳ ಸರಾಸರಿ ತೆಗೆದಾಗ ಪ್ರತಿ ವರ್ಷ ಜೂನ್ನಿಂದ ಫೆಬ್ರವರಿವರೆಗೂ 800 ರಿಂದ 1200 ರೂಪಾಯಿಗೆ ಮಾತ್ರ ಲಿಂಬೆ ಮಾರಾಟವಾದ ದಾಖಲೆಗಳಿವೆ. ಆದರೆ, ಈ ಬಾರಿ ಲಿಂಬೆ ಬೆಳೆಗಾರರ ಅದೃಷ್ಟ ಖುಲಾಯಿಸಿದೆ ಎನ್ನಬಹುದು.
3 / 6
ಈ ಬಾರಿಯ ಮಳೆಗಾಲದಲ್ಲೂ ಲಿಂಬೆಗೆ ಉತ್ತಮ ದರ ಬಂದಿದೆ. ಒಂದು ಸಾವಿರ ಲಿಂಬೆಯ ಮೂಟೆ 3000 ರಿಂದ 5000 ಕ್ಕೂ ಆಧಿಕ ಬೆಲೆಗೆ ಮಾರಾಟವಾಗುತ್ತಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಹಿಂದೆ ಇಂತಹ ದರ ಇರಲಿಲ್ಲ. ಈ ವರ್ಷ ಮಾತ್ರ ನಾವು ಮಳೆಗಾಲದಲ್ಲಿ ಉತ್ತಮ ದರ ಕಂಡಿದ್ದೇವೆ. ದರ ಹೆಚ್ಚಳದಿಂದ ಲಿಂಬೆ ಬೆಳೆಯುವ ನಮಗೆ ಖುಷಿಯಾಗಿದೆ ಎಂದು ರೈತರು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀರಿನ ಕೊರತೆಯಿಂದ ನಮಗೆ ಫಸಲು ಕಡಿಮೆ ಬಂದಿದೆ. ಹಾಗಾಗಿ ಕಡಿಮೆ ಇಳುವರಿ ಬಂದಿದ್ದರಿಂದ ದರ ಏರಿಕೆಯಾಗಿದೆ. ಈಗ ಹೆಚ್ಚಿನ ದರಕ್ಕೆ ಲಿಂಬೆ ಮಾರಾಟವಾಗುತ್ತಿರೋದು ಅನಕೂಲವೆಂದಿದ್ದಾರೆ.
4 / 6
ವಿಜಯಪುರ ಜಿಲ್ಲೆಯ ಲಿಂಬೆ ಉತ್ತಮ ಗುಣಮಟ್ಟದ್ದು, ಹೆಚ್ಚು ದಿನ ಬಾಳಿಕೆ ಬರುವ ಹಾಗೂ ಹೆಚ್ಚು ರಸ ಇರುವ ಗುಣ ಹೊಂದಿದೆ. ಇತ್ತೀಚೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಮಾನ್ಯತೆ ಕೂಡ ಸಿಕ್ಕಿದೆ. ಜಿಲ್ಲೆಯ ಲಿಂಬೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ನೀಡಬೇಕೆಂದು ಕಳೆದ 2022 ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ತಮಿಳುನಾಡಿನ ಚೆನೈಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿ ಹಲವಾರು ಮಾಹಿತಿಗಳನ್ನು ಪಡೆದು, ಪರೀಕ್ಷೆ ಮಾಡಿದ ಬಳಿಕ 2023 ರಲ್ಲಿ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಮಾನ್ಯತೆ ( ಜಿಐ ) ನೀಡಿದ್ದರು.
5 / 6
ಜಿಲ್ಲೆಯ ಕಾಗ್ಜಿ ನಿಂಬೆ ಜಿಐ ಟ್ಯಾಗ್ ಮಾನ್ಯತೆಗೆ ಪಾತ್ರವಾಗಿದೆ. ಜಿಐ ಟ್ಯಾಗ್ ಪಡೆದ ಕಾರಣ ವಿದೇಶಗಳಿಂದಲೂ ವಿಜಯಪುರ ಜಿಲ್ಲೆಯ ಲಿಂಬೆಗೆ ಬೇಡಿಕೆ ಹೆಚ್ಚಿದೆ. ಸೌದಿ ಅರೇಬಿಯಾ, ವಿಯೇಟ್ನಾಂ ಸೇರಿದಂತೆ ಇತರೆ ದೇಶಗಳಿಂದ ವಿಜಯಪುರ ಜಿಲ್ಲೆಯ ಲಿಂಬೆಗೆ ಬೇಡಿಕೆ ಬಂದಿದೆ. ಪ್ರತಿ ವರ್ಷ ಈ ಸಮಯದಲ್ಲಿ ಕಡಿಮೆ ಬೆಲೆ ಇರುತ್ತಿತ್ತು. ಜಿಐ ಟ್ಯಾಗ್ ಪಡೆದಿದ್ದರಿಂದ ಅನ್ಯ ದೇಶಗಳಿಂದ ಲಿಂಬೆಗೆ ಆರ್ಡರ್ ಬರುತ್ತಿವೆ. ಹಾಗಾಗಿ ಲಿಂಬೆಯ ದರ ಏರಿಕೆಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
6 / 6
ಸದ್ಯ ಮಳೆಗಾಲವಿದ್ದರೂ ಜಿಲ್ಲೆಯ ಲಿಂಬೆ ಹೆಚ್ಚಿದ ದರಕ್ಕೆ ಮಾರಾಟವಾಗುತ್ತಿದೆ. ಕಡಿಮೆ ಇಳುವರಿ ಒಂದು ಕಾರಣವಾದರೆ, ಅದಕ್ಕಿಂತ ಪ್ರಮುಖವಾಗಿ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್ ಸಿಕ್ಕಿರೋದು ಜಾಗತೀಕ ಮಟ್ಟದಲ್ಲಿ ವಿಜಯಪುರದ ಲಿಂಬೆ ಪ್ರಖ್ಯಾತಿಗೆ ಪಾತ್ರವಾಗಿದೆ. ಈ ಕಾರಣದಿಂದ ವಿವಿಧ ದೇಶಗಳಿಂದ ಇಲ್ಲಿಯ ಲಿಂಬೆಗೆ ಬೇಡಿಕೆ ಬಂದಿದೆ. ಉತ್ತಮ ದರ ಬಂದಿದ್ದು, ಲಿಂಬೆಯ ಬೆಳೆಗಾರರಿಗೆ ಲಾಟರಿ ಹೊಡೆದಂತಾಗಿದೆ. ಇದೇ ರೀತಿ ಹೆಚ್ಚಿನ ದರ ಸ್ಥಿರವಾಗಿರಲಿ ಎನ್ನುತ್ತಿದ್ದಾರೆ ಲಿಂಬೆ ಬೆಳೆಗಾರರು.