
ನೀವು ಶ್ವಾನ ಪ್ರಿಯರನ್ನ ಎಲ್ಲೆಡೆ ನೋಡೀರ್ತಿರಾ. ಅದ್ರಲ್ಲೂ ವಿಶೇಷ ತಳಿಯ ಶ್ವಾನಗಳನ್ನ ಸಾಕುವುದು ಟ್ರೆಂಡ್ ಆಗಿದೆ. ಎಷ್ಟೆ ಶ್ವಾನ ಪ್ರಿಯ ಆಗಿದ್ರೂ ಐದರಿಂದ ಹತ್ತು ಶ್ವಾನಗಳನ್ನ ತಮ್ಮ ಮನೆಯಲ್ಲಿ ಸಾಕಬಹುದು. ಆದರೆ ಇಲ್ಲೊಂದು ಕುಟುಂಬ ಲೋಕಲ್ ತಳಿಯ ಬರೋಬ್ಬರಿ 287 ಶ್ವಾನಗಳನ್ನ ಸಾಕಿದ್ದು, ತಮ್ಮ ಇಡಿ ಜೀವನವನ್ನ ಶ್ವಾನಕ್ಕಾಗಿ ಮಿಸಲಿಟ್ಟಿದ್ದಾರೆ.

ಕಾಣಲು ಚೆಂದ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರುವ ಶ್ವಾನಗಳನ್ನ ತಮ್ಮ ಮನೆ ಹಾಗೂ ಫಾರ್ಮ ಹೌಸ್ನಲ್ಲಿ ಸಾಕಿರ್ತಾರೆ. ಆದರೆ ಬಿದಿಯಲ್ಲಿ ಒಂದು ಬಿಸ್ಕೇಟ್ಗಾಗಿ ಪರದಾಡುತ್ತಿದ್ದ ಹತ್ತಾರು ಶ್ವಾನಗಳನ್ನು ತಿರುಗಿಯೂ ನೋಡಲ್ಲ. ಇನ್ನೂ ಕೈ ಕಾಲು ಇಲ್ಲದೆ ದೈಹಿಕ ದೌರ್ಬಲ್ಯ ಹೊಂದಿದ ಶ್ವಾನಕಂಡ್ರೆ ಕಲ್ಲು ಹೊಡೆದು ಓಡಿಸುತ್ತಾರೆ. ಆದರೆ ಈ ಕುಟುಂಬ ನೀವು ಇದುವರೆಗೂ ನೋಡಿರದ, ಬೇರೆ ಶ್ವಾನ ಪ್ರಿಯರಿಗಿಂತ ಭಿನ್ನವಾಗಿದೆ.

ಈ ಶ್ವಾನಗಳೆಲ್ಲವೂ ಜೀವನ ಮರಣದ ಮಧ್ಯ ಹೋರಾಟ ಮಾಡುತ್ತಿದ್ದ ಶ್ವಾನಗಳು. ಹೌದು.. ರಸ್ತೆಯಲ್ಲಿ ಅಪಘಾತಕ್ಕೊಳಗಾಗಿರುವ, ಅನಾರೋಗ್ಯಕ್ಕೆ ತುತ್ತಾಗಿರುವ, ದೈಹಿಕ ದೌರ್ಬಲ್ಯ ಹೊಂದಿರುವ, ದೇಹದ ಒಂದು ಭಾಗಕ್ಕೆ ಹುಳುಗಳಿಂದ ಬಾಧಿತ ಆಗಿರುವ ಹೀಗೆ ಸಾವಿನ ದವಡೆಯಲ್ಲಿ ಸಿಲುಕಿ ಪರದಾಡ್ತಾ ಬಿದಿ ಬದಿಯಲ್ಲಿ, ನಿರ್ಜನ ಪ್ರದೇಶದಲ್ಲಿ ಹಾಗೂ ಕಾಡಿನಲ್ಲಿ ಪರದಾಡುತ್ತಿದ್ದ ಶ್ವಾನಗಳಿವೆ.

ವಿಶೇಷ ಅಂದರೆ ಮೂಲತಃ ಟಿಬೇಟಿಯನ್ ಸಮುದಾಯಕ್ಕೆ ಸೇರಿರುವ ಎಂಜಿನ್ ಕುಟುಂಬ. ಕಳೆದ ಹತ್ತಾರು ವರ್ಷಗಳಿಂದ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ತಮ್ಮ ಊರಿನ ಸುತ್ತಾ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ, ರೋಗಕ್ಕೆ ತುತ್ತಾಗಿರುವ ಒಂದಿಷ್ಟು ಶ್ವಾನಗಳು ಇದ್ದಲ್ಲಿಯೇ ಹೋಗಿ ಆಹಾರ ಹಾಗೂ ಉಪಚಾರ ಕೊಡುತ್ತಿದ್ದರು. ಇದನ್ನ ಕಂಡ ಅನೇಕರು ಸಮಸ್ಯೆಕ್ಕೊಳಗಾದ ಶ್ವಾನಗಳ ಬಗ್ಗೆ ಇವರಿಗೆ ಮಾಹಿತಿ ಕೊಡಲಾಂಭಿಸಿದ್ದಾರೆ.

ತಾವು ಜೀವನ ಪರ್ಯಂತ ದುಡಿದ ಅಲ್ಪ ಹಣ ಹಾಗೂ ದಾನಿಗಳ ಸಹಕಾರದಿಂದ ಒಂದು ಏಕರೆ ಜಮೀನನ್ನು ಖರೀದಿ ಮಾಡಿ. ಅದರಲ್ಲಿಯೇ ಒಂದು ಮನೆ ಕಟ್ಟಿಕೊಂಡು ಶ್ವಾನಗಳನ್ನು ಸಾಕಲಾರಂಭಿಸಿದ್ದು, ಇವತ್ತಿನವರೆಗೂ ಸುಮಾರು 287 ಶ್ವಾನಗಳನ್ನ ಸಾಕಿದ್ದಾರೆ.

ಅನಾರೋಗ್ಯಕ್ಕೊಳಗಾದ ಶ್ವಾನಗಳಿಗೆ ಚಿಕಿತ್ಸೆಯನ್ನ ಇವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕೊಡುತ್ತಾರೆ. ಅಲ್ಲದೆ ನಿತ್ಯ 75 ಕೆ.ಜಿಯ ಅಕ್ಕಿಯ ಅನ್ನ ಮಾಡಿ ಶ್ವಾನಗಳಿಗೆ ಊಣಬಡಿಸಲಾಗುತ್ತೆ. ಅದರ ಜೊತೆಗೆ ಆಗಾಗ ಮೊಟ್ಟೆಯನ್ನ ಶ್ವಾನಗಳಿಗೆ ನೀಡಲಾಗುತ್ತೆ.

ತಮ್ಮ ಜೀವನ ಕಟ್ಟಿಕೊಳ್ಳಲು ಬಂದ ಟಿಬೇಟಿಯನ್ ಕುಟುಂಬ, ತಮ್ಮ ಜೀವನದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ, ಸುಮಾರು 287 ಶ್ವಾನಗಳ ಜೀವ ಉಳಿಸಿರುವ ಇವರು. ನಿತ್ಯ ಶ್ವಾನಗಳ ಉಪಚಾರದಲ್ಲೇ ಕಾಲ ಕಳೆಯುತ್ತಿರುವ ಇವರ ಶ್ವಾನ ಪ್ರೇಮ ನಿಜಕ್ಕೂ ಶ್ಲಾಘನೀಯ.
Published On - 7:30 pm, Wed, 12 February 25