ಚಾಂಪಿಯನ್ಸ್ ಟ್ರೋಫಿಗೆ 6 ಪ್ರಮುಖ ವೇಗಿಗಳು ಅಲಭ್ಯ
Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಶುರುವಾಗಲಿದೆ. ಈ ಟೂರ್ನಿಗೆ ಮೂರು ತಂಡಗಳ ಆರು ಪ್ರಮುಖ ವೇಗಿಗಳು ಅಲಭ್ಯರಾಗಿದ್ದಾರೆ. ಇನ್ನು ಪಾಕಿಸ್ತಾನ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಗಾಯಗೊಂಡಿದ್ದು, ಟೂರ್ನಿ ಆರಂಭಕ್ಕೂ ಮುನ್ನ ಗುಣಮುಖರಾಗದಿದ್ದರೆ ಅವರು ಸಹ ಹೊರಗುಳಿಯಬಹುದು.
Updated on:Feb 12, 2025 | 2:35 PM

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹಲವು ಆಟಗಾರರು ಹೊರಗುಳಿದಿದ್ದಾರೆ. ಹೀಗೆ ಹಿಂದೆ ಸರಿದ ಆಟಗಾರರಲ್ಲಿ ವೇಗಿಗಳೇ ಪ್ರಮುಖರು. ಅದರಲ್ಲೂ ಬಹುತೇಕ ತಂಡಗಳ ಪ್ರಮುಖ ಬೌಲರ್ಗಳು ಗಾಯಗೊಂಡಿದ್ದು, ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ವೇಗಾಸ್ತ್ರಗಳನ್ನು ಎದುರು ನೋಡುವಂತಿಲ್ಲ. ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಪ್ರಮುಖ ವೇಗಿಗಳು ಯಾರೆಂದು ನೋಡುವುದಾದರೆ...

ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಪಾದದ ನೋವಿನ ಕಾರಣ ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಜೆರಾಲ್ಡ್ ಕೋಟ್ಝಿ: ಸೌತ್ ಆಫ್ರಿಕಾ ತಂಡದ ಬಲಗೈ ವೇಗದ ಬೌಲರ್ ಜೆರಾಲ್ಡ್ ಕೋಟ್ಝಿ ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ತೊಡೆಸಂದು ಬಿಗಿತದ ಸಮಸ್ಯೆಯಿಂದ ಬಳಲುತ್ತಿರುವ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವುದಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಅನ್ರಿಕ್ ನೋಕಿಯ: ಸೌತ್ ಆಫ್ರಿಕಾ ತಂಡದ ವೇಗದ ಬೌಲರ್ ಅನ್ರಿಕ್ ನೋಕಿಯ ಕೂಡ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಕಾರಣ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಜೋಶ್ ಹ್ಯಾಝಲ್ವುಡ್: ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಕಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಮುಂಬರುವ ಐಸಿಸಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ: ಬೆನ್ನು ನೋವಿನ ಸಮಸ್ಯೆಯ ಕಾರಣ ಜಸ್ಪ್ರೀತ್ ಬುಮ್ರಾ ಸಹ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಬುಮ್ರಾ ಅವರ ಅಲಭ್ಯತೆಯು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ.
Published On - 2:32 pm, Wed, 12 February 25



















