Tokyo Olympics 2020 | ಬೌಟ್​ ಸೋತಿದ್ದೇನೆಂದು ನಂಬಲು ಸಾಧ್ಯವಾಗಲೇ ಇಲ್ಲ, ಜಡ್ಜ್​ಗಳ ಕಳಪೆ ತೀರ್ಪಿನಿಂದಾಗಿ ಸೋಲಬೇಕಾಯಿತು: ಮೇರಿ ಕೋಮ್

ತಮ್ಮ 51 ಕೆಜಿ ಫ್ಲೈವೇಟ್ ಪ್ರೀ ಕ್ವಾರ್ಟರ್ ಫೈನಲ್ ಬೌಟ್​ನಲ್ಲಿ ಮೂರು ಸುತ್ತುಗಳ ಪೈಕಿ ಎರಡರಲ್ಲಿ ಗೆದ್ದರೂ ಎದುರಾಳಿಯನ್ನು ವಿಜಯೀ ಎಂದು ಘೋಷಿಸಿದ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ (ಐಒಸಿ) ಟಾಸ್ಕ್​ ಫೋರ್ಸ್​ ತೀರ್ಪನ್ನು ‘ಕಳಪೆ‘ ಎಂದು ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ. ಹಣಕಾಸಿನ ದುರ್ವ್ಯವಹಾರದ ಆರೋಪದಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯನ್ನು (ಎಐಬಿಎ) ಐಒಸಿ ಸಸ್ಪೆಂಡ್ ಮಾಡಿರುವುದರಿಂದ ಟೊಕಿಯೋ ಒಲಂಪಿಕ್ಸ್​ನಲ್ಲಿ ಬಾಕ್ಸಿಂಗ್ ಸ್ಪರ್ಧೆಗಳನ್ನು ಟಾಸ್ಕ್ ಫೋರ್ಸ್ ಆಯೋಜಿಸುತ್ತಿದೆ. ‘ಅವರ ನಿರ್ಣಯ ನನಗೆ ಅರ್ಥವಾಗುತ್ತಿಲ್ಲ. ಟಾಸ್ಕ್ […]

Tokyo Olympics 2020 | ಬೌಟ್​ ಸೋತಿದ್ದೇನೆಂದು ನಂಬಲು ಸಾಧ್ಯವಾಗಲೇ ಇಲ್ಲ, ಜಡ್ಜ್​ಗಳ ಕಳಪೆ ತೀರ್ಪಿನಿಂದಾಗಿ ಸೋಲಬೇಕಾಯಿತು: ಮೇರಿ ಕೋಮ್
ಮೇರಿ ಕೋಮ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2021 | 12:37 AM

ತಮ್ಮ 51 ಕೆಜಿ ಫ್ಲೈವೇಟ್ ಪ್ರೀ ಕ್ವಾರ್ಟರ್ ಫೈನಲ್ ಬೌಟ್​ನಲ್ಲಿ ಮೂರು ಸುತ್ತುಗಳ ಪೈಕಿ ಎರಡರಲ್ಲಿ ಗೆದ್ದರೂ ಎದುರಾಳಿಯನ್ನು ವಿಜಯೀ ಎಂದು ಘೋಷಿಸಿದ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ (ಐಒಸಿ) ಟಾಸ್ಕ್​ ಫೋರ್ಸ್​ ತೀರ್ಪನ್ನು ‘ಕಳಪೆ‘ ಎಂದು ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ಹೇಳಿದ್ದಾರೆ. ಹಣಕಾಸಿನ ದುರ್ವ್ಯವಹಾರದ ಆರೋಪದಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯನ್ನು (ಎಐಬಿಎ) ಐಒಸಿ ಸಸ್ಪೆಂಡ್ ಮಾಡಿರುವುದರಿಂದ ಟೊಕಿಯೋ ಒಲಂಪಿಕ್ಸ್​ನಲ್ಲಿ ಬಾಕ್ಸಿಂಗ್ ಸ್ಪರ್ಧೆಗಳನ್ನು ಟಾಸ್ಕ್ ಫೋರ್ಸ್ ಆಯೋಜಿಸುತ್ತಿದೆ. ‘ಅವರ ನಿರ್ಣಯ ನನಗೆ ಅರ್ಥವಾಗುತ್ತಿಲ್ಲ. ಟಾಸ್ಕ್ ಫೋರ್ಸ್​ಗೆ ಏನಾಗಿದೆ? ಐಒಸಿಗೆ ಏನಾಗಿದೆ?’ ಎಂದು ಪಿಟಿಐಗೆ ಪೋನ್​ ಮೂಲಕ ನೀಡಿದ ಸಂದರ್ಶನದಲ್ಲಿ ಮೇರಿ ಕೋಮ್​ ಹೇಳಿದ್ದಾರೆ.

‘ನಾನು ಸಹ ಟಾಸ್ಕ್ ಫೋರ್ಸ್ ಸದಸ್ಯಳಾಗಿದ್ದೆ. ಸ್ಪರ್ಧೆಗಳು ಸುಸೂತ್ರವಾಗಿ ನಡೆಯಲು ನಾನು ಅವರಿಗೆ ಸಲಹೆಗಳನ್ನು ನೀಡುತ್ತಾ ಬೆಂಬಲ ಒದಗಿಸುತ್ತಿದ್ದೆ. ಅದರೆ ಅವರು ನನಗೆ ಮಾಡಿರುವುದು ಏನು?’ ಎಂದು ಮೇರಿ ಹೇಳಿದ್ದಾರೆ.

ಹಲವಾರು  ಬಾರಿ ಏಷ್ಯನ್ ಮತ್ತು ವಿಶ್ವ ಚಾಂಪಿಯನ್​ಶಿಪ್​ ಗೆದ್ದಿರುವ 38-ವರ್ಷ ವಯಸ್ಸಿನ ಮೇರಿ ಒಲಂಪಿಕ್ಸ್​ನಲ್ಲಿ ತಮ್ಮ ಎರಡನೇ ಪದಕ ಗೆಲ್ಲುವ ಸನ್ನಾಹದಲ್ಲಿದ್ದರು. 2012 ರ ಲಂಡನ್ ಒಲಂಪಿಕ್ಸ್​ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಗುರುವಾರದಂದು ಸ್ಪರ್ಧೆ ಮುಗಿದ ನಂತರ ಡೋಪಿಂಗ್ ಟೆಸ್ಟ್​ಗೆ ಕರೆದುಕೊಂಡ ಸಮಯದಲ್ಲೂ ತನಗೆ ವಸ್ತುಸ್ಥತಿಗೆ ಮರಳಲು ಸಾಧ್ಯವಾಗಿರಲಿಲ್ಲ ಎಂದು ಮೇರಿ ಕೋಮ್ ಹೇಳಿದ್ದಾರೆ.

‘ರಿಂಗ್​ನಲ್ಲಿದ್ದಾಗ ನಾನು ಖುಷಿಯಾಗಿದ್ದೆ ಮತ್ತು ಅದರಿಂದ ಹೊರಬಂದಾಗಲಲೂ ನಾನು ಖುಷಿಯಾಗಿಯೇ ಇದ್ದೆ. ಯಾಕೆಂದರೆ ಬೌಟ್​ ಗೆದ್ದ ವಿಶ್ವಾಸ ನನ್ನಲ್ಲಿತ್ತು. ನನ್ನನ್ನು ಡೋಪಿಂಗ್ ಟೆಸ್ಟ್​ಗೆ ಕರೆದೊಯ್ದಾಗಲೂ ಸಂತೋಷ ಮರೆಯಾಗಿರಲಿಲ್ಲ. ಸಾಮಾಜಿಕ ಜಾಲತಾಣ ನೋಡಿದ ನಂತರ ಮತ್ತು ನನ್ನ ಕೋಚ್ ಛೋಟೆ ಲಾಲ್ ಯಾದವ್ (ನನಗೆ ಅವರು ಎರಡೆರಡು ಬಾರಿ ಸೋತಿರುವ ವಿಷಯ ಹೇಳಿದರು) ಹೇಳಿದ ನಂತರವೇ ನಾನು ಸೋತಿರುವುದು ಖಚಿತವಾಯಿತು,’ ಎಂದು ಆಕೆ ಹೇಳಿದ್ದಾರೆ.

‘ಇದಕ್ಕೆ ಮೊದಲು ಈ ಹುಡುಗಿಯನ್ನು (ವೆಲೆನ್ಸಿಯಾ) ನಾನು ಎರಡು ಬಾರಿ ಸೋಲಿಸಿದ್ದೇನೆ. ರೆಫರಿ ಆಕೆಯ ಕೈ ಮೇಲೆ ಎತ್ತಿದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ನಾನು ಸೊತಿದ್ದೇನೆ ಅಂತ ನನಗೆ ಅನಿಸಲೇ ಇಲ್ಲ ಎಂದು ಪ್ರಮಾಣ ಮಾಡಿ ಹೇಳತ್ತೇನೆ, ನನಗೆ ಅಷ್ಟು ಭರವಸೆಯಿತ್ತು,’ ಎಂದು ಮೇರಿ ಹೇಳಿದ್ದಾರೆ.

ಐವರು ನಿರ್ಣಾಯಕರ ಪೈಕಿ ನಾಲ್ವರು ವೆಲೆನ್ಸಿಯಾ ಪರ 10-9 ರ ತೀರ್ಪು ನೀಡಿದ್ದರಿಂದ ಮೇರಿ ಮೊದಲ ಸುತ್ತಿನಲ್ಲಿ 1-4 ಹಿಂದಿದ್ದರೂ ಮುಂದಿನ ಎರಡು ಸುತ್ತುಗಳಲ್ಲಿ ಮೂವರು ನಿರ್ಣಾಯಕರು ಮೇರಿ ಪರ ತೀರ್ಪು ನೀಡಿದರು. ಆದರೆ ಒಟ್ಟಾರೆ ಸ್ಕೋರ್​ಲೈನ್ ಅಂತಿಮವಾಗಿ ವೆಲೆನ್ಸಿಯಾ ಪರವೇ ಇತ್ತು. ಮೇರಿ ಬೌಟನ್ನು ಗೆಲ್ಲಬೇಕಿದ್ದರೆ ಕೊನೆಯ ಸುತ್ತಿನಲ್ಲಿ 4-1 ರ ತೀರ್ಪು ಪಡೆಯಬೇಕಿತ್ತು.

‘ಇನ್ನೂ ಕೆಟ್ಟ ಸಂಗತಿಯೆಂದರೆ, ರಿವ್ಯೂ ಅಥವಾ ಪ್ರೊಟೆಸ್ಟ್ ಸಲ್ಲಿಸಲು ವ್ಯವಸ್ಥೆಯೇ ಇಲ್ಲ. ನಿರ್ಣಾಯಕರು ಎಸಗಿದ ತಪ್ಪು ಜಗತ್ತು ನೋಡಬೇಕು ಎನ್ನುವುದು ನನ್ನ ಇಚ್ಛೆಯಾಗಿತ್ತು.ಅವರದ್ದು ಅತಿರೇಕವೆಂದೇ ನಾನು ಭಾವಿಸುತ್ತೇನೆ,’ ಎಂದು ಆಕೆ ಹೇಳಿದ್ದಾರೆ.

‘ಎರಡನೇ ಸುತ್ತು ಅವಿರೋಧವಾಗಿ ನನ್ನ ಪರ ಆಗಬೇಕಿತ್ತು, ಆದರೆ ಅದ್ಹೇಗೆ ಅದು 3-2 ಆಯಿತು? ಅಲ್ಲಿ ನಡೆದದ್ದು ಊಹಗೆ ನಿಲುಕದ್ದು,’ ಎಂದು ಮೇರಿ ಹೇಳಿದ್ದಾರೆ.

ಮೇರಿ ಕೋಮ್​ ಅವರು ಬಿಟಿಎಫ್​ 10 ಸದಸ್ಯ ಅಥ್ಲೀಟ್​ ರಾಯಭಾರಿಗಳ ಗುಂಪಿನ ಸದಸ್ಯರಾಗಿದ್ದು ಏಷ್ಯನ್ ಬ್ಲಾಕ್​ ಅನ್ನು ಆಕೆ ಪ್ರತನಿಧಿಸುತ್ತಾರೆ. ಈ ಗುಂಪಿನಲ್ಲಿ, ಎರಡು ಬಾರಿ ಒಲಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಉಕ್ರೇನಿನ ವಾಸಿಲ್ ಲಮಚೆಂಕೊ ಸಹ ಇದ್ದಾರೆ.

‘ಒಬ್ಬ ಅಥ್ಲೀಟ್​​ಗೆ ಕೇವಲ ಒಂದು ನಿಮಿಷದಲ್ಲಿ ಎಲ್ಲವೂ ನಾಶವಾಯಿತು. ನನಗಾಗಿರುವುದು ದುರಾದೃಷ್ಟವೇ, ನಿರ್ಣಯದ ಬಗ್ಗೆ ಬಹಳ ನಿರಾಶಳಾಗಿದ್ದೇನೆ, ಎಂದು ಮೇರಿ ಹೇಳಿದ್ದಾರೆ.

40ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಒಲಂಪಿಕ್ಸ್​ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲವಾದರೂ ಟೋಕಿಯೋ ಆವೃತ್ತಿಯೊಂದಿಗೆ ಕಣಕ್ಕೆ ವಿದಾಯ ಹೇಳಲು ಮೇರಿ ತಯಾರಿಲ್ಲ.

‘ಸ್ವದೇಶಕ್ಕೆ ವಾಪಸ್ಸಾದ ನಂತರ ನಾನು ಬ್ರೇಕ್ ತೆಗೆದುಕೊಂಡು ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತೇನೆ, ಆದರೆ ಯಾವ ಕಾರಣಕ್ಕೂ ನಾನು ಬಾಕ್ಸಿಂಗ್ ಗುಡ್​ಬೈ ಹೇಳುತ್ತಿಲ್ಲ. ನನ್ನ ಅದೃಷ್ಟ ಪರೀಕ್ಷಿಸಲು ಕ್ರೀಡೆಯಲ್ಲಿ ಮುಂದುವರಿಯುತ್ತೇನೆ,’ ಎಂದು ಮೇರಿ ಹೇಳಿದರು.

ಐಒಸಿಯಿಂದ ಮಾನ್ಯತೆ ವಾಪಸ್ಸು ಪಡೆಯಲು ಎಐಬಿಎ ಪ್ರಯತ್ನಿಸುತ್ತಿದೆ. ಹೊಸ ಅಧ್ಯಕ್ಷ ಉಮತ್ ಕ್ರಮ್ಲೆವ್ ಅವರ ಅಡಿಯಲ್ಲಿ ಅಡಳಿತಾತ್ಮಕ ಘಟಕವನ್ನು ರೂಪಿಸಿಕೊಂಡಿರುವ ಅದು ಕ್ರೀಡೆಯಲ್ಲಿ ಕೆಲ ಬದಲಾವಣೆಗಳನ್ನು ಸಹ ಪ್ರಸ್ತಾಪಿಸಬೇಕೆಂದುಕೊಂಡಿದೆ. ಬೌಟ್ ರಿವ್ಯೂ ಪದ್ಧತಿ ಅವುಗಳಲ್ಲಿ ಒಂದಾಗಿದ್ದು ಬಾಕ್ಸರ್​ಗಳಿಗೆ ತನ್ನ ದೂರು ದುಮ್ಮಾನಗಳನ್ನು ಸಲ್ಲಿಸಲು ಇದು ನೆರವಾಗಲಿದೆ.

‘ಅದನ್ನು ಇಲ್ಲಿ ಮಾಡುವುದು ಸಾಧ್ಯವಿಲ್ಲ. ಅದು ಜಾರಿಯಲ್ಲಿದ್ದರೆ ನಾನು ಖಂಡಿತವಾಗಿಯೂ ಪ್ರತಿಭಟನೆ ಸಲ್ಲಿಸುತ್ತಿದ್ದೆ,’ ಎಂದು ಮೇರಿ ಹೇಳಿದ್ದಾರೆ.

ಇದನ್ನೂ ಓದಿ: Tokyo Olympics 2020: ಟೊಕಿಯೋ ಉಷ್ಣಾಂಶದಿಂದ ಬಸವಳಿದ ಮೆಡ್ವೆಡೆವ್, ಕೋರ್ಟ್​ನಲ್ಲಿ ತಾನು ಸತ್ತರೆ ಅದಕ್ಕೆ ಯಾರು ಜವಾಬ್ದಾರಿ ಅಂತ ಅಂಪೈರ್​ನನ್ನು ಕೇಳಿದರು!