ಭಾರತದಲ್ಲಿರುವ ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಗಮನಾರ್ಹ ಸ್ಥಾನ ಪಡೆದಿದೆ. ಹೆಚ್ಚಿನ ಹಣ ವಹಿವಾಟು ಯುಪಿಐ ಮೂಲಕವೇ ಆಗುತ್ತದೆ. ನಿತ್ಯವೂ ನೂರಾರು ಕೋಟಿ ರೂ ಹಣದ ವಹಿವಾಟು ಯುಪಿಐನಿಂದ ನಡೆಯುತ್ತದೆ. 50 ಕೋಟಿಗೂ ಹೆಚ್ಚು ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಪಾವತಿ ವ್ಯವಸ್ಥೆ ಸಾಧ್ಯವಾದಷ್ಟೂ ಸುರಕ್ಷಿತವಾಗಿರುವುದು ಮುಖ್ಯ.
ನಮ್ಮ ಸ್ಮಾರ್ಟ್ಫೋನ್ಗಳಲ್ಲಿರುವ ಬಯೋಮೆಟ್ರಿಕ್ ಫೀಚರ್ ಮೂಲಕ ಯುಪಿಐ ಪೇಮೆಂಟ್ ಅನ್ನು ದೃಢಪಡಿಸುವಂತಹ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜೊತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಇದೇನಾದರೂ ವ್ಯವಸ್ಥೆ ಜಾರಿಗೆ ಬಂದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಬಹುದು. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಐಡಿ ಇರುತ್ತದೆ. ಅದನ್ನು ಬಳಸಿ ಯುಪಿಐ ಪೇಮೆಂಟ್ ಮಾಡಬಹುದು. ಐಫೋನ್ ಇದ್ದರೆ ಅದರಲ್ಲಿರುವ ಫೇಸ್ ಐಡಿ ಬಳಕೆ ಮಾಡಬಹುದು.
ಯುಪಿಐ ಹಣವನ್ನು ಲಪಟಾಯಿಸಲಾಗುತ್ತಿರುವ ನೂರಾರು ಪ್ರಕರಣಗಳು ದೇಶಾದ್ಯಂತ ನಿತ್ಯ ವರದಿ ಆಗುತ್ತಿರುತ್ತದೆ. ಹಣ ಪಾವತಿಸುವುದಾಗಿ ಹೇಳಿ ಯುಪಿಐ ವಿವರಗಳನ್ನು ಪಡೆಯುವ ವಂಚಕರ ಮಾತುಗಳನ್ನು ನಂಬಿ ಬಹಳಷ್ಟು ಜನರು ಹಣ ಸ್ವೀಕರಿಸುವ ಬದಲು ವಂಚಕರಿಗೆ ಹಣ ಕಳುಹಿಸಿರುವುದುಂಟು. ಇಂಥ ತಪ್ಪುಗಳನ್ನು ತಡೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಸಹಾಯವಾಗಬಹುದು.
ಮುಂಬರುವ ದಿನಗಳಲ್ಲಿ ಯುಪಿಐ ಪಾವತಿಗೆ ದೃಢೀಕರಣ ನೀಡಲು ಪಿನ್ ನಂಬರ್ ಬದಲು ಬಯೋಮೆಟ್ರಿಕ್ ಐಡಿ ಅಥವಾ ಫೇಸ್ ಐಡಿ ಬಳಕೆ ಹೆಚ್ಚಾಗಬಹುದು. ಎನ್ಪಿಸಿಐ ಈ ನಿಟ್ಟಿನಲ್ಲಿ ಗಂಭೀರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಫೋನ್ ಪೆ, ಪೇಟಿಎಂ, ಗೂಗಲ್ ಪೇ ಮೊದಲಾದ ಪೇಮೆಂಟ್ ಪ್ಲಾಟ್ಫಾರ್ಮ್ಗಳು ಯುಪಿಐ ಪಾವತಿಗೆ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಬೇಕಾಗಬಹುದು.