- Kannada News Photo gallery Congress Janandolana public meeting in Mysuru: Security tighten in city, Kannada news
ಕಾಂಗ್ರೆಸ್ ಜನಾಂದೋಲನ ಸಮಾವೇಶ: ಪೊಲೀಸ್ ಭದ್ರಕೋಟೆಯಾದ ಮೈಸೂರು
ಮೈಸೂರು, ಆಗಸ್ಟ್ 9: ಮುಡಾ ಹಗರಣ ಖಂಡಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಟಕ್ಕರ್ ಕೊಡಲು ಮತ್ತು ದಾಖಲೆಗಳನ್ನು ಜನರ ಮುಂದಿಡುವುದಕ್ಕಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಮೈಸೂರಿನಲ್ಲಿ ಬೃಹತ್ ಜನಾಂದೋಲನ ಸಮಾವೇಶ ಆಯೋಜಿಸಿದೆ. ಸಮಾವೇಶದ ಕಾರಣ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮೈಸೂರಿನಾದ್ಯಂತ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದೆ.
Updated on: Aug 09, 2024 | 10:26 AM

ಮೈಸೂರಿನಲ್ಲಿ ನಾಲ್ವರು ಡಿಐಜಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ 36 ಡಿವೈಎಸ್ಪಿ, 77 ಇನ್ಸ್ಪೆಕ್ಟರ್ಸ್, 175 ಪಿಎಸ್ಐ, ಜಿಲ್ಲೆಯ 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಹೊರ ಜಿಲ್ಲೆಯ 1500 ಪೊಲೀಸರು, 60 ಕೆಎಸ್ಆರ್ಪಿ ತುಕಡಿ, 20 ಸಿಎಆರ್ ತುಕಡಿ, 500 ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಜತೆಗೆ, ಸಮಾವೇಶದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.

ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶದ ಪ್ರಯುಕ್ತ ಮೈಸೂರು ನಗರದಲ್ಲಿ ‘ಕೈ’ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್ ಶಾಸಕರ ಫ್ಲೆಕ್ಸ್‌ಗಳು ಎಲ್ಲೆಡೆ ಕಾಣಿಸುತ್ತಿವೆ.

ಈ ನಡುವೆ ವಿಭಿನ್ನ ಫ್ಲೆಕ್ಸ್ ಮೈಸೂರಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಹೆಚ್.ಡಿ.ದೇವೇಗೌಡ ಕುಟುಂಬದ ಭೂ ಕಬಳಿಕೆ ಪಕ್ಷಿನೋಟದ ಫ್ಲೆಕ್ಸ್ ಅನ್ನು ಕಾಂಗ್ರೆಸ್ ಅಳವಡಿಸಿದೆ. ಅದರಲ್ಲಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾಹಿತಿ ಇವೆ. ಹೆಚ್ಡಿಕೆ ನಿವೇಶನಕ್ಕೆ ಮುಡಾಗೆ ನೀಡಿರುವ ಅರ್ಜಿಯ ಕಾಪಿ ಕೂಡ ಇದೆ. ಹೆಚ್ಡಿಡಿ ಕುಟುಂಬ ಪಡೆದಿದ್ದಾರೆ ಎನ್ನಲಾದ ನಿವೇಶನಗಳ ಮಾಹಿತಿ ಇದೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶಕ್ಕಾಗಿ ಎರಡು ಬೃಹತ್ ವೇದಿಕೆಗಳು ಸಿದ್ಧವಾಗಿವೆ. ಕಣ್ಣು ಹಾಯಿಸದ ಕಡೆಗಳಲೆಲ್ಲಾ ಬ್ಯಾನರ್‌ಗಳು ಪೋಸ್ಟರ್‌ಗಳು ಕಾಣಿಸುತ್ತಿವೆ. ಲಕ್ಷಾಂತರ ಜನರನ್ನು ಸೇರಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ.



















