
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬ ಇಂದು ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಅಧಿಕೃತ ಬಂಗಲೆಯಲ್ಲಿ ಭೇಟಿ ಮಾಡಿದರು. ಈ ವೇಳೆ ಮೋದಿ ಜೆಡಿ ವ್ಯಾನ್ಸ್ ಅವರನ್ನು ಅಪ್ಪುಗೆಯ ಮೂಲಕ ಸ್ವಾಗತಿಸಿದರು.

ಅಮೆರಿಕ-ಚೀನಾ ವ್ಯಾಪಾರ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ಉಭಯ ನಾಯಕರ ನಡುವಿನ ಸಭೆ ನಡೆಯಿತು. ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಂದು ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಗಮನ ಹರಿಸಲಾಯಿತು

ವ್ಯಾನ್ಸ್ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡ ಪಿಎಂ ನರೇಂದ್ರ ಮೋದಿ ಜೆಡಿ ವ್ಯಾನ್ಸ್ ಅವರ ಮಕ್ಕಳ ಕೈ ಹಿಡಿದು ತಾವೇ ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದು, ರಕ್ಷಣಾ ಸಹಕಾರವನ್ನು ಹೆಚ್ಚಿಸುವುದು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಪರಿಹರಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. 2030 ರ ವೇಳೆಗೆ ಅಮೆರಿಕ-ಭಾರತ ವ್ಯಾಪಾರವನ್ನು 500 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ಕುರಿತು ನಡೆಯುತ್ತಿರುವ ಮಾತುಕತೆಗಳ ಮಧ್ಯೆ ಈ ಭೇಟಿ ನಡೆದಿದೆ.

ಅಧಿಕೃತ ಮಾತುಕತೆಯ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೆಡಿ ವ್ಯಾನ್ಸ್, ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿ ಮತ್ತು ಅಮೆರಿಕದ ಉಪಾಧ್ಯಕ್ಷರೊಂದಿಗೆ ಬಂದ ಹಿರಿಯ ಅಮೆರಿಕನ್ ಸರ್ಕಾರಿ ಅಧಿಕಾರಿಗಳ ನಿಯೋಗಕ್ಕೆ ಭೋಜನ ಕೂಟವನ್ನು ಆಯೋಜಿಸಿದ್ದಾರೆ.

2013ರಲ್ಲಿ ಜೋ ಬೈಡೆನ್ ನವದೆಹಲಿಗೆ ಭೇಟಿ ನೀಡಿದ ನಂತರ, 12 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಅಮೆರಿಕದ ಉಪಾಧ್ಯಕ್ಷರು ಜೆ.ಡಿ ವ್ಯಾನ್ಸ್.

ಫೆಬ್ರವರಿಯ ಆರಂಭದಲ್ಲಿ, ಪ್ಯಾರಿಸ್‌ನಲ್ಲಿ ನಡೆದ AI ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರಿಗೆ ಏರ್ಪಡಿಸಿದ್ದ ಭೋಜನಕೂಟದ ಸಂದರ್ಭದಲ್ಲಿ ಜೆಡಿ ವ್ಯಾನ್ಸ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು.

ಇಂದು ಮಧ್ಯಾಹ್ನ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬವು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿತ್ತು. 4 ದಿನಗಳ ಭಾರತ ಭೇಟಿಯ ಮೊದಲ ದಿನದಂದು, ಅಮೆರಿಕದ ಉಪಾಧ್ಯಕ್ಷರು ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಅವರ ಮೂವರು ಮಕ್ಕಳೊಂದಿಗೆ ನವದೆಹಲಿಯ ಐತಿಹಾಸಿಕ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು.
Published On - 8:13 pm, Mon, 21 April 25