
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೊರೆಯುವ ಚಳಿ ಇದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಚಳಿಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ತೀರ ಪ್ರದೇಶಗಳಿಗೆ ವಿದೇಶಿ ಹಕ್ಕಿಗಳು ಹಾರಿ ಬರುತ್ತಿವೆ. ಅಂಕೋಲಾದ ಕಡಲ ತೀರಕ್ಕೆ ಸೀಗಲ್ಗಳ ಕಲರವ ಮನೆ ಮಾಡಿದೆ.

ರಾಜ್ಯದಲ್ಲಿ ಚಳಿ ಆರ್ಭಟ ಜೋರಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ಬೆಚ್ಚಗಿನ ವಾತಾವರಣವಿದ್ದು, ಒಳ್ಳೆಯ ಹವಾಮಾನ ಸೃಷ್ಟಿಯಾಗಿದೆ. ಹೀಗಾಗಿ ಉತ್ತಮ ಹವಾಮಾನ, ಆಹಾರ ಅರಸಿ ಬರುವ ವಿದೇಶಿ ಹಕ್ಕಿಗಳಿಗೆ ಜಿಲ್ಲೆಯ ಕರಾವಳಿ ನೆಲೆ ಕಟ್ಟಿಕೊಟ್ಟಿದೆ.

ಕಾರವಾರ, ಅಂಕೋಲಾ ಭಾಗದ ಕರಾವಳಿ ತೀರಕ್ಕೆ ಇದೀಗ ಸೀಗಲ್ಗಳ (ಕಡಲ ಹಕ್ಕಿ) ಹಿಂಡು ಹರಿದು ಬರುತಿದ್ದು, ಕಳೆದ ವರ್ಷಕ್ಕಿಂತ ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಂಕೋಲಾದ ಕೇಣಿ, ಕಾರವಾರದ ಕಡಲ ತೀರದಲ್ಲಿ ನೆಲೆಕಂಡುಕೊಂಡಿದ್ದು, ಸಂತಾನೋತ್ಪತ್ತಿ ಹಾಗೂ ಆಹಾರಕ್ಕಾಗಿ ಇಲ್ಲಿ ನೆಲೆ ನಿಂತಿವೆ.

ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ಸೀಗಲ್ಗಳು ಸಾವಿರಾರು ಕಿ.ಮೀ ಕ್ರಮಿಸಿ ಬರುತ್ತವೆ. 50ಕ್ಕೂ ಹೆಚ್ಚು ಪ್ರಭೇದದ ಈ ಸೀಗಲ್ಗಳಲ್ಲಿ ಬಿಳಿ, ಕಪ್ಪು, ಬೂದು ಬಣ್ಣದ ಸೀಗಲ್ಗಳು ಜಿಲ್ಲೆಯ ಕರಾವಳಿ ಭಾಗಕ್ಕೆ ವಲಸೆ ಬರುತ್ತವೆ. ಈ ಭಾರಿ ಬೂದು ಬಣ್ಣದ ರೆಕ್ಕೆಯ ಸೀಗಲ್ಗಳು ಹೆಚ್ಚು ಗುಳೆ ಬಂದಿದ್ದು, ಕಡಲ ತೀರದ ಭಾಗ, ದ್ವೀಪಗಳಲ್ಲಿ ನೆಲೆ ಕಂಡುಕೊಂಡಿವೆ.

ಇನ್ನು ಈ ಭಾಗದಲ್ಲಿ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ಮತ್ತು ಆಹಾರ ಹೆಚ್ಚಾಗಿ ಸಿಗುತ್ತಿರುವುದರಿಂದ ಮೂರ್ನಾಲ್ಕು ತಿಂಗಳು ಇದೇ ಭಾಗದಲ್ಲಿ ನೆಲಸಿ ಬಳಿಕ ಮರಿಗಳೊಂದಿಗೆ ಹಾರಿ ಹೋಗುತ್ತವೆ. ಹೀಗಾಗಿ ಇವುಗಳ ನೆಲೆಗಳನ್ನು ಗುರುತಿಸಿ ಆ ಸ್ಥಳಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞ ಶಿವಕುಮಾರ್ ಹರಗಿ ಅವರು ಹೇಳುತ್ತಾರೆ.

ಸದ್ಯ ಪ್ರತಿ ದಿನ ಸೀಗಲ್ಗಳು ಮುಂಜಾನೆ ಕಡಲ ತೀರದಲ್ಲಿ ಗುಂಪು ಗುಂಪಾಗಿ ಕಾಣಸಿಗುತ್ತಿದ್ದು, ಪಕ್ಷಿ ಪ್ರಿಯರನ್ನು ತನ್ನತ್ತ ಸೆಳೆಯುವ ಜೊತೆಗೆ ದೂರದ ಪ್ರವಾಸಿಗರನ್ನೂ ಸೆಳೆಯುತ್ತಿದೆ.