Updated on:Jan 15, 2023 | 10:35 PM
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ನಾಡಿನಾದ್ಯಂತ ಅತಿ ಸಂಭ್ರಮದಿಂದ ಆಚರಿಸಲಾಯಿತು. ಹಲವು ಕಡೆ ಭಿನ್ನ ವಿಭಿನ್ನ ರೀತಿ ಆಚರಿಸಿ ಖುಷಿ ಪಟ್ಟಿದ್ದಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ಸಾವಿರಾರು ಭಕ್ತರು ಗಂಗಾಧರ ಶ್ರೀಗಳ ಜೋತೆ ಹಬ್ಬದ ಮರುದಿನ ಹೊಳೆ ಸ್ನಾನ ಸಂಭ್ರಮಿಸುವುದರ ಜೊತೆಗೆ ರೊಟ್ಟಿ ಭೋಜನ ಸವಿಯುತ್ತಾರೆ. ಶ್ರೀಗಳ ಜೊತೆಗೆ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿಂದ ಜನರು ಭೀಮಾ ನದಿಯಲ್ಲಿ ಮಿಂದೆಳುತ್ತಾರೆ.
ಪ್ರತಿ ವರ್ಷದಂತೆ ಈ ಬಾರಿಯು ಸಂಕ್ರಾಂತಿ ಹಬ್ಬದ ಮಾರನೇ ದಿನ ಅಬ್ಬೆತುಮಕೂರಿನ ಶ್ರೀಗಳಾದ ಗಂಗಾಧಾರ ಸ್ವಾಮೀಜಿಗಳು ಭೀಮಾನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಈ ಸಮಯದಲ್ಲಿ ಶ್ರೀಗಳ ಆರ್ಶಿವಾದ ಪಡೆಯಲು ಸಾವಿರಾರು ಭಕ್ತರ ದಂಡು ಹರಿದು ಬಂದಿತ್ತು. ಶ್ರೀಗಳು ಭೀಮಾನದಿಯಲ್ಲಿ ಹೂವಿನಿಂದ ಅಲಂಕಾರಗೊಳಿಸಿದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯಸ್ನಾನ ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿ ಮತ್ತೆ ತೆಪ್ಪದಲ್ಲಿ ನದಿ ದಡಕ್ಕೆ ಆಗಮಿಸುತ್ತಾರೆ.
ಈ ವೇಳೆ ಸಾವಿರಾರು ಭಕ್ತರು ಶ್ರೀಗಳ ಪಾದ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಹೀಗೆ ಭೀಮಾನದಿಯಲ್ಲಿ ಶ್ರೀಗಳ ಆರ್ಶಿವಾದ ಪಡೆದು ಪುಣ್ಯ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತದೆ ಎಂಬುವುದು ಇಲ್ಲಿನ ಭಕ್ತ ನಂಬಿಕೆಯಾಗಿದೆ. ಹೀಗಾಗಿ ರಾಜ್ಯ ಸೇರಿದಂತೆ ಸೇರಿದಂತೆ ಪಕ್ಕದ ರಾಜ್ಯಗಳಿಂದ ಸಾವಿರಾರು ಭಕ್ತರು ಅಬ್ಬೇತುಮಕುರಿನ ಮಠಕ್ಕೆ ಬಂದು ಶ್ರೀಗಳ ಜೋತೆಗೆ ನದಿಗೆ ತೆರಳಿ ಪುಣ್ಯ ಸ್ನಾನ ಮಾಡುತ್ತಾರೆ.
ಭೀಮಾನದಿಯಲ್ಲಿ ಶ್ರೀಗಳ ಜೋತೆ ಪುಣ್ಯ ಸ್ನಾನ ಮಾಡಿದರೆ ವರ್ಷದ ಪಾಪಗಳು ಕಳೆದು ಹೊಗುತ್ತವೆ. ಮುಂದಿನ ಒಂದು ವರ್ಷ ಒಳ್ಳೆದಾಗುತ್ತದೆ ಎಂದು ಭಕ್ತರು ಹೇಳುತ್ತಾರೆ. ಭೀಮಾನದಿಯಲ್ಲಿ ಪುಣ್ಯಸ್ನಾನ ಮಾಡುವುದರ ಜೊತೆಗೆ ಭಕ್ತರು ಭೀಮಾನದಿ ದಡದಲ್ಲಿ ಕುಳಿತು ಭಕ್ಷ ಭೋಜನಗಳನ್ನ ಸವಿಯುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ಕೆಲವರು ರೊಟ್ಟಿ ಜಾತ್ರೆಯೆಂದು ಕೂಡ ಕರೆಯುತ್ತಾರೆ.
ಅಬ್ಬೆತುಮಕುರಿನ ವಿಶ್ವರಾಧ್ಯ ಮಠದಿಂದ ಸಾವಿರಾರು ಭಕ್ತರಿಗಾಗಿ ವಿಶೇಷವಾಗಿ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿಗಳನ್ನ ತಯಾರಿಸಿರುತ್ತಾರೆ. ಇಲ್ಲಿಗೆ ಬರುವ ಸಾವಿರಾರು ಭಕ್ತರು ಸಹ ಮನೆಯಲ್ಲಿ ಸೆಂಗಾ ಹೊಳಿಗೆ, ಪುಂಡೆ ಪಲ್ಯೆ, ಕಾರ ಚಟ್ನಿ, ಹಪ್ಪಳ ಸೇರಿದಂತೆ ನಾನಾ ರೀತಿಯ ಭಕ್ಷ ಭೋಜನಗಳನ್ನ ತಯಾರಿಸಿ ನದಿ ದಡದಲ್ಲಿಯೇ ಕುಟುಂಬ ಸಮೇತರಾಗಿ ಕುಳಿತುಕೊಂಡು ಸವಿಯುತ್ತಾರೆ. ಇನ್ನು ಇವತ್ತಿನ ದಿನ ನದಿಯ ದಡದಲ್ಲಿ ಸಜ್ಜೆ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿಯನ್ನ ಸವಿದರೆ ಮನಸ್ಸಿಗೆ ಏನೋ ಒಂದು ತರಹ ಆನಂದ ಉಂಟಾಗುತ್ತದೆ ಎಂದು ಭಕ್ತರು ಹೇಳುತ್ತಾರೆ.
ಇದೆ ಕಾರಣಕ್ಕೆ ಮಠದ ವತಿಯಿಂದ ಲಕ್ಷಾಂತರ ಸಜ್ಜೆ ರೊಟ್ಟಿಯನ್ನ ಸಿದ್ದಪಡಿಸಿಕೊಂಡು ಭಕ್ತರಿಗೆ ಹಂಚಿಕೆ ಮಾಡುತ್ತಾರೆ. ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕ ಸಜ್ಜೆ ರೊಟ್ಟಿಯನ್ನ ಸವಿಯುತ್ತಾರೆ. ನದಿ ದಡದಲ್ಲಿ ಅಬ್ಬೆತುಮಕುರಿನ ಶ್ರೀಗಳಾದ ಗಂಗಧರ ಶ್ರೀಗಳು ಕುಳಿತುಕೊಂಡಿರುತ್ತಾರೆ. ಇಲ್ಲಿಗೆ ಬಂದ ಸಾವಿರಾರು ಭಕ್ತರು ನದಿಯಲ್ಲಿ ಪುಣ್ಯ ಸ್ನಾನವನ್ನ ಮಾಡಿದ ಬಳಿಕ ಶ್ರೀಗಳಿಂದ ಆಶೀರ್ವಾದವನ್ನ ಪಡೆಯುತ್ತಾರೆ.
ಬಳಿಕ ಶ್ರೀಗಳು ತೆಪ್ಪದಲ್ಲಿ ನದಿಯ ಮದ್ಯದಲ್ಲಿ ತೆರಳಿ ಸ್ನಾನ ಮಾಡಿಕೊಂಡು ಬಂದ ಬಳಿಕ ವಿಶೇಷ ಪೂಜೆ ಮತ್ತು ಮಂಗಳಾರತಿಯನ್ನ ಮಾಡುತ್ತಾರೆ. ಬಳಿಕ ಮತ್ತೆ ಭಕ್ತರು ಶ್ರೀಗಳಿಂದ ಆಶೀರ್ವಾದವನ್ನ ಪಡೆಯುತ್ತಾರೆ. ಒಟ್ನಲ್ಲಿ ಪ್ರತಿ ವರ್ಷ ಸಂಕ್ರಮಣದ ಮಾರನೇ ದಿನ ಭೀಮಾ ನದಿಯಲ್ಲಿ ಗಂಗಾಧರ ಶ್ರೀಗಳ ಜೊತೆ ಭಕ್ತರು ಪುಣ್ಯ ಸ್ನಾನ ಮಾಡಿ ಪುನೀತರಾಗುತ್ತಾರೆ. ಜೊತೆಗೆ ಭೋಜನಗಳನ್ನ ಸವಿಯುವುದರ ಮೂಲಕ ಸಂಕ್ರಾಮಣವನ್ನ ಆಚರಿಸುತ್ತಿರುವುದು ವಿಶೇಷವಾಗಿದೆ. (ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ)
Published On - 10:35 pm, Sun, 15 January 23