
ಜಪಾನಿನ ಆಟೋಮೊಬೈಲ್ ದೈತ್ಯ ಯಮಹಾ ಶೀಘ್ರದಲ್ಲೇ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ. ಈ ಸ್ಕೂಟರ್ 2022 ರಲ್ಲಿ ಯುರೋಪಿಯನ್ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಲಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ಗೆ Yamaha E01 ಮತ್ತು Yamaha E02 ಎಂದು ಹೆಸರಿಡಲಾಗಿದೆ.
ಯಮಹಾ ಮೊದಲ ಬಾರಿಗೆ ಯಮಹಾ E01 ಮತ್ತು ಯಮಹಾ E02 ಎಲೆಕ್ಟ್ರಿಕ್ ಸ್ಕೂಟರ್ ಪರಿಕಲ್ಪನೆಗಳನ್ನು 2019 ಟೋಕಿಯೊ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿತು. ಇದೀಗ ಈ ಸ್ಕೂಟರ್ ಬಿಡುಗಡೆಯ ಹಂತದಲ್ಲಿದ್ದು, ಅದರಂತೆ ಮುಂದಿನ ವರ್ಷದಲ್ಲಿ ರಸ್ತೆಗಿಳಿಯಲಿದೆ.
ಯಮಹಾ ಕಂಪನಿಯು ನಿಧಾನವಾಗಿ ಎಲೆಕ್ಟ್ರಿಕ್ ವಿಭಾಗದತ್ತ ವಾಲುತ್ತಿದ್ದು, ಈಗಾಗಲೇ ಗೊಗೊರೊ ಕಂಪೆನಿ ಜೊತೆ ಪಾಲುದಾರಿಕೆ ಹೊಂದಿದೆ.
ಎರಡು ವರ್ಷಗಳ ಹಿಂದೆ ಯಮಹಾ ಎಲೆಕ್ಟ್ರಿಕ್ ಸ್ಕೂಟರ್ನ ಪ್ರದರ್ಶಿಸಿದ್ದರೂ, E01 ಮತ್ತು E02 ಸರಣಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಹೆಚ್ಚಿನ ಸಮಯ ವ್ಯಯಿಸಿದ್ದು, ಹೀಗಾಗಿ ಸ್ಕೂಟರ್ನ ಮಾಹಿತಿಗಳನ್ನು ಗೌಪ್ಯವಾಗಿಟ್ಟುಕೊಂಡಿದೆ.
Yamaha E01 ಮತ್ತು Yamaha E02 ಎಲೆಕ್ಟ್ರಿಕ್ ಸ್ಕೂಟರ್ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ, E02 ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ. ಅಂದರೆ ಬಳಕೆದಾರರ ಡಿಮ್ಯಾಂಡ್ಗೆ ಅನುಗುಣವಾಗಿ ಹೆಚ್ಚುವರಿ ಬ್ಯಾಟರಿಯನ್ನು ಬಳಸಬಹುದು. ಇನ್ನು ಈ ಸ್ಕೂಟರ್ನಲ್ಲಿ ಎರಡು ಸೀಟ್ಗಳನ್ನು ನೀಡಿದ್ದು, ಅದರಂತೆ ಏಷ್ಯನ್ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಯಮಹಾ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ಯಾಸಗೊಳಿಸಿದೆ ಎಂದು ವರದಿಯಾಗಿದೆ.