ಶನಿವಾರದಂದು ಖ್ಯಾತ ರ್ಯಾಪರ್, ಗಾಯಕ ಹನಿಸಿಂಗ್ ಅವರ ಲೈವ್ ಕಾನ್ಸರ್ಟ್ ಬಲು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಿತು. ಕಾನ್ಸರ್ಟ್ನಲ್ಲಿ ಅತಿಥಿಯಾಗಿ ನಟ ಯಶ್ ಭಾಗವಹಿಸಿದ್ದರು.
ಹನಿ ಸಿಂಗ್ ಅವರ ಲೈವ್ ಕಾನ್ಸರ್ಟ್ನಲ್ಲಿ ಶೋ ಸ್ಟಾಪರ್ ರೀತಿ ಅದ್ಧೂರಿ ಎಂಟ್ರಿ ಕೊಟ್ಟ ನಟ ಯಶ್ ವೇದಿಕೆ ಮೇಲೆ ಕನ್ನಡದಲ್ಲಿಯೇ ಮಾತನಾಡಿ, ಗಾಯಕ ಹನಿ ಸಿಂಗ್ ಅವರಿಗೆ ಸ್ವಾಗತ ಕೋರಿದರು.
‘ಎಲ್ಲರಿಗೂ ನಮಸ್ಕಾರ, ಮೊದಲು ಇವರಿಗೆ ಸ್ವಾಗತ ಕೋರೋಣ, ನಿಮಗೆ ಬೆಂಗಳೂರಿಗೆ ಸ್ವಾಗತ’ ಎಂದು ಹನಿಸಿಂಗ್ ಅವರಿಗೆ ಸ್ವಾಗತ ಕೋರಿದರು. ಬಳಿಕ ಹನಿ ಸಿಂಗ್ ಅವರಿಗೆ, ‘ನೀವು ಕನ್ನಡದಲ್ಲಿಯೂ ಹಾಡು ಹಾಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಹನಿ ಸಿಂಗ್, ‘ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡು ಹಾಡುವುದಾಗಿ’ ಹೇಳಿದರು.
ನಟ ಯಶ್, ಅವರು ಹನಿ ಸಿಂಗ್ ಕಾನ್ಸರ್ಟ್ಗೆ ಬಂದಿದ್ದು ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು. ಯಶ್, ಹನಿ ಸಿಂಗ್ ಕಾನ್ಸರ್ಟ್ನಲ್ಲಿ ಭಾಗಿ ಆಗುತ್ತಾರೆ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ.
ಈಗ ಯಶ್, ಅವರು ಹನಿಸಿಂಗ್ ಅವರ ಕಾನ್ಸರ್ಟ್ಗೆ ನ ವೇದಿಕೆಗೆ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಿಂದಿ ಹಾಡುಗಳ ಕಾನ್ಸರ್ಟ್ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಮಾತ್ರವಲ್ಲದೆ, ಗಾಯಕನನ್ನು ಕನ್ನಡದ ಹಾಡುಗಳನ್ನು ಹಾಡಿ ಎಂದು ಒತ್ತಾಯಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹನಿ ಸಿಂಗ್ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಯಶ್ ಅವರ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದು, ‘ನನ್ನ ಬೆಂಗಳೂರು ಕಾನ್ಸರ್ಟ್ಗೆ ಬಂದು ಹರಸಿದ್ದಕ್ಕೆ ನನ್ನ ಸಹೋದರ ಯಶ್ಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ದಿಲ್ಜೀತ್ ದೊಸ್ಸಾಂಜ್ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ಮಾಡಿದಾಗ ದೀಪಿಕಾ ಪಡುಕೋಣೆಯನ್ನು ಸರ್ಪ್ರೈಸ್ ಅತಿಥಿಯಾಗಿ ಕರೆಸಿದ್ದರು.