ಕರ್ನಾಟಕದಲ್ಲಿ ಈವರೆಗೆ ಎಷ್ಟು ಪಿಎಫ್ಐ ಮುಖಂಡರ ಬಂಧನ? ಎಷ್ಟು ಕಚೇರಿಗೆ ಬೀಗ? ಅಂಕಿ-ಸಂಖ್ಯೆ ಕೊಟ್ಟ ಗೃಹ ಸಚಿವ
ಕರ್ನಾಟಕದಲ್ಲಿ ಈವರೆಗೆ ಎಷ್ಟು ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ? ಎಷ್ಟು ಪಿಎಫ್ಐ ಕಚೇರಿಗಳಿಗೆ ಬೀಗ ಹಾಕಲಾಗಿದೆ? ಎನ್ನುವ ಬಗ್ಗೆ ಗೃಹ ಸಚಿವರು ಅಧಿಕೃತ ಅಂಕಿ-ಸಂಖ್ಯೆ ನೀಡಿದ್ದಾರೆ.
ತುಮಕೂರು: ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ಐದು ವರ್ಷ ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶಿದೆ. ಈ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಪಿಎಫ್ಐ ಮುಖಂಡರನ್ನು ಬಂಧಿಸಿ, ಕಚೇರಿಗಳಿಗೆ ಬೀಗ ಹಾಕಲಾಗಿದೆ. ಹಾಗಾದ್ರೆ, ರಾಜ್ಯದಲ್ಲಿ ಇದುವರೆಗೆ ಎಷ್ಟು ಪಿಎಫ್ಐ ನಾಯಕರನ್ನು ಅರೆಸ್ಟ್ ಮಾಡಲಾಗಿದೆ? ಎಷ್ಟು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ? ಎಂದು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅಧಿಕೃತ ಅಂಕಿ-ಅಂಶಗಳನ್ನ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು(ಸೆಪ್ಟೆಂಬರ್.30) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಈವರೆಗೆ 110 ಪಿಎಫ್ ಐ ಮುಖಂಡರನ್ನ ಬಂಧಿಸಲಾಗಿದೆ. 42 ಕಡೆ ಪಿಎಫ್ ಐ ಕಚೇರಿಗಳಿಗೆ ಬೀಗ ಮುದ್ರೆ ಹಾಕಲಾಗಿದ್ದು, ಕಚೇರಿಗಳಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಇತರೆ ವಸ್ತುಗಳನ್ನ ವಶ ಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ಅವರ(ಪಿಎಫ್ಐ ಮುಖಂಡರ) ವೈಯಕ್ತಿಕ ಅಕೌಂಟ್ ಗಳ ಬಗ್ಗೆ ಇಡಿ ಮತ್ತು ಎನ್ಐಎ ನೋಡುತ್ತಿದೆ. ಇಂದು ಬಂಟ್ವಾಳದಲ್ಲಿ ಪಿಎಫ್ಐ ಟ್ರೈನಿಂಗ್ ನೀಡುತ್ತಿದ್ದ ಕಟ್ಟಡವನ್ನ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಬಂದೋಬಸ್ತ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ
ಇನ್ನು ಇದೇ ವೇಳೆ ಸಿದ್ದರಾಮಯ್ಯನವರು ಆರ್ಎಸ್ಎಸ್ ಬ್ಯಾನ್ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರಿಗೆ ಪಿಎಫ್ ಐ ಬ್ಯಾನ್ ಮಾಡಿದ್ದು ಇಷ್ಟೇ ಇಲ್ಲ, ಅವರಿಗೆ ದೇಶದ ಹಿತದೃಷ್ಟಿಗಿಂತ ವೋಟಿನ ಹಿತದೃಷ್ಟಿ ಮುಖ್ಯ. ಇದು ಚುನಾವಣೆ ವರ್ಷ ಆಗಿರೋದ್ರಿಂದ ಅವರ ವೋಟ್ ಬ್ಯಾಂಕಿಗೆ ಹಾನಿಯಾಗದೇ ರೀತಿಯಲ್ಲಿ ಮಾತನಾಡ್ತಾರೆ ಎಂದು ತಿರುಗೇಟು ನೀಡಿದರು.
ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆ. ಆರ್ ಎಸ್ ಎಸ್ ಸಂಘಟನೆಯನ್ನ ಇಡೀ ದೇಶದ ಜನ ಸ್ವೀಕಾರ ಮಾಡಿದ್ದಾರೆ. ದೇಶಕ್ಕೊಸ್ಕರ, ದೇಶಕ್ಕೆ ಪೂರಕವಾಗುವ ವ್ಯಕ್ತಿಗಳನ್ನ ಆರ್ ಎಸ್ ಎಸ್ ಪ್ರತಿದಿನ ಪ್ರತಿ ಶಾಖೆಗಳಲ್ಲಿ ಬೆಳೆಸುತ್ತಿದೆ.. ಪಿಎಫ್ ಐ ಮತ್ತು ಆರ್ ಎಸ್ ಎಸ್ ಗೆ ತಾಳೆ ಹಾಕುವುದು ಕೆಟ್ಟ ಮನಸ್ಥಿತಿಗೊಂದು ಉದಾಹರಣೆ. ಸಿದ್ದರಾಮಯ್ಯನವರ ಓಲೈಕೆ ರಾಜಕಾರಣದಿಂದಲೇ ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣುಪಾಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Fri, 30 September 22