ರಾಜಕೀಯ ಯುನಿವರ್ಸಿಟಿಗಳಿಗೆ ಪಾಠವಾಯ್ತಾ ಪೇಸಿಎಂ ಕಲಾವಿದನ ಕೈಚಳಕ…?

| Updated By: ವಿವೇಕ ಬಿರಾದಾರ

Updated on: Sep 24, 2022 | 6:34 PM

ರಾಜಕೀಯ ಯುನಿವರ್ಸಿಟಿಗಳಿಗೇ ಪಾಠ ಮಾಡುತ್ತಿದ್ದಾನೆ ಈ ಯುವಕ, ಯಾರು ಗೊತ್ತೇ ?

ರಾಜಕೀಯ ಯುನಿವರ್ಸಿಟಿಗಳಿಗೆ ಪಾಠವಾಯ್ತಾ ಪೇಸಿಎಂ ಕಲಾವಿದನ ಕೈಚಳಕ...?
ಕಾಂಗ್ರೆಸ್ ನಾಯಕರು
Follow us on

ಕಳೆದ ತಿಂಗಳು ಕೆಪಿಸಿಸಿ (KPCC) ಕಚೇರಿಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ (MB Patil) ಹಾಗೂ ಪ್ರಿಯಾಂಕ ಖರ್ಗೆ ಪ್ರೆಸ್​ಮೀಟ್ ಮಾಡುತ್ತಿದ್ದರು. ಅದೇ ವೇಳೆಗೆ ಕಾಂಗ್ರೆಸ್​ನ (Congress) ಹಿರಿಯ ನಾಯಕರನ್ನು ಕೂರಿಸಿಕೊಂಡು ಕೆಳಗಿನ ಕೋಣೆಯಲ್ಲಿ ಯುವಕನೊಬ್ಬ ಪ್ರೆಸೆಂಟೇಷನ್ ಕೊಡುತ್ತಿದ್ದ. ಹಿರಿಯ ಪತ್ರಕರ್ತರೊಬ್ಬರಿಂದ ಎಂಬಿ ಪಾಟೀಲ್ ಹಾಗೂ ಪ್ರಿಯಾಂಕ ಖರ್ಗೆಗೆ ಪ್ರಶ್ನೆಯೊಂದು ತೂರಿ ಬಂತು – ಅಲ್ಲರೀ, 30-40 ವರ್ಷ ರಾಜಕೀಯದಲ್ಲಿ ಇರುವ ನಿಮ್ಮಂತ ಯುನಿವರ್ಸಿಟಿಗಳಿಗೆ ಎಲ್​ಕೆಜಿ ಹುಡುಗನೊಬ್ಬ ಪಾಠ ಮಾಡೋದು ಸರಿ ಅನಿಸುತ್ತದಾ ಎಂಬ ಗೇಲಿ ತುಂಬಿದ ಪ್ರಶ್ನೆ ಅದು. ಗೇಲಿಯಿಂದಲೇ ಕೇಳಿದ ಪ್ರಶ್ನೆಗೆ ಅವತ್ತು ಉತ್ತರ ಕೊಡುವುದಕ್ಕೆ ಎಂಬಿ ಪಾಟೀಲ್ ಪ್ರಿಯಾಂಕ ಖರ್ಗೆ ಹಿಂದೆ ಮುಂದೆ ನೋಡಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಅವತ್ತೆಲ್ಲ ಅದೇ ಮಾತು. ರಾಜಕೀಯ ಯುನಿವರ್ಸಿಟಿಗಳ ತರಹ ಇರುವ ಸಿದ್ದರಾಮಯ್ಯ, ಎಂಬಿ ಪಾಟೀಲ್, ಡಿ.ಕೆ ಶಿವಕುಮಾರ್​​ಗೆ ಯುವ ರಾಜಕೀಯ ತಂತ್ರಗಾರನೊಬ್ಬ ಪಾಠ ಮಾಡೋದು ಎಷ್ಟು ಸರಿ ಎನ್ನೋ ಮಾತದು. ಕೆಲವರು ಗೇಲಿ ಗೇಲಿಯಾಗಿ ಇಂತ ಪ್ರಶ್ನೆ ಕೇಳುತ್ತಿದ್ದರೆ ಇದೆಲ್ಲದಕ್ಕೂ ಬಹುಶಃ ಉತ್ತರ ಕೊಟ್ಟಂತೆ ಸಿದ್ದವಾಗಿರುವುದೇ ಪೇಸಿಎಂ ಎಂಬ ಸಂಚಲನಾತ್ಮಕ ಪೋಸ್ಟರ್.

ಅಕ್ಷರಶಃ ನಿಜ. ಕಾಂಗ್ರೆಸ್ ಪಕ್ಷ ಈ ಬಾರಿ ಯುದ್ದಕ್ಕೆ ಸನ್ನದ್ದವಾದ ರೀತಿ ಇದೆಯಲ್ಲ ಅದು ಬಹುಶಃ ಆಡಳಿತ ನಡೆಸುತ್ತಿರುವ ಬಿಜೆಪಿ ಅರಗಿಸಿಕೊಳ್ಳುವುದಕ್ಕೆ ಸ್ವಲ್ಪ ಟೈಂ ಬೇಕೇನೋ ಎನಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರದಲ್ಲಿ ಸದ್ದು ಮಾಡುತ್ತಿರುವ ಪೇಸಿಎಂ ಪೋಸ್ಟರ್ ಬಿಜೆಪಿಗೆ ವಾರ್ನಿಂಗ್ ಸೈನ್.

2012 ರಿಂದಲೂ ಬಿಜೆಪಿ ಐಟಿ ಸೆಲ್ ಎಲ್ಲ ಚುನಾವಣೆಗಳಿಗೂ ಮಾದರಿ ಎನ್ನುವಂತೆಯೇ ಇತ್ತು. ಅವತ್ತು ಕಾಂಗ್ರೆಸ್​ನ ಗಾಂಧಿ ಕುಟುಂಬಕ್ಕೂ ಅಳತೆ ಸಿಗದ ಮಟ್ಟಿಗೆ ಬಿಜೆಪಿ ಐಟಿ ಸೆಲ್ ಬೆಳೆದು ನಿಂತಿತ್ತು. ಬಿಜೆಪಿಯ ಸ್ಟ್ರಾಟಜಿಗಳನ್ನು ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪಿಸುವ ಕೆಲಸವನ್ನು ಊಹೆಗೂ ನಿಲುಕದ ಸ್ಪೀಡ್​ನಲ್ಲಿ ಬಿಜೆಪಿ ಮಾಡುತ್ತಿತ್ತು. ಕರ್ನಾಟಕದಲ್ಲೂ ಅಷ್ಟೇ 2014 ರಿಂದ 2020 ರವರಗೆ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಯಾರೂ ಕಲ್ಪನೆ ಮಾಡಿಕೊಳ್ಳದ ರೀತಿ ಬಳಸಿ ಬಿಸಾಡಿದೆ. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸೋಷಿಯಲ್ ಮೀಡಿಯಾ ಕೊಟ್ಟಷ್ಟು ಶಾಕ್ ಇನ್ಯಾರೂ ಕೊಟ್ಟಿರಲಿಲ್ಲ.

ಅದರೆ ಇತ್ತಿಚೆಗೆ ಯಾಕೋ ಬಿಜೆಪಿ ಐಟಿ ಸೆಲ್ ಕೊಂಚ ಮಂಕಾಗುವ ರೀತಿಯಲ್ಲಿ ಕಾಂಗ್ರೆಸ್ ಬೆಳೆದು ನಿಂತು ಸ್ಟ್ರಾಟಜಿಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಐಟಿ ಸೆಲ್, ಕಾಂಗ್ರೆಸ್​ನ ಮಾಧ್ಯಮ ಘಟಕ, ಕಾಂಗ್ರೆಸ್​ನ ಸ್ಟ್ರಾಟಜಿ ಟೀಂ ಬಹುಶಃ ಬಿಜೆಪಿಯನ್ನೂ ಮೀರಿಸುವ ಮಟ್ಟಕ್ಕೆ ಸ್ಪೀಡ್ ಪಡೆದುಕೊಂಡಿದೆ. ಕಾಂಗ್ರೆಸ್ 10 ಟ್ವೀಟ್ ಅಟ್ಯಾಕ್ ಮಾಡಿ ಗಮನ ಸೆಳೆಯುತ್ತಿದ್ದರೆ ಬಿಜೆಪಿ ಎರಡೋ ಮೂರೋ ಟ್ವೀಟ್​ಗೆ ಮಂಕಾಗುತ್ತಿದೆ. ಕಾಂಗ್ರೆಸ್ ವಾರಕ್ಕೆ ನಾಲ್ಕು ಪ್ರೆಸ್ ಮೀಟ್​ಗಳ ಬಾಣ ಬಿಟ್ಟರೆ ಬಿಜೆಪಿ ಗುರಾಣಿ ಹಿಡಿಯುವುದರಲ್ಲೇ ಸಮಯ ಕಳೆಯುತ್ತಿದೆ.

ಹಾಗಂತ ಕಾಂಗ್ರೆಸ್ ಒಂದೇ ಒಂದು ಪೇಸಿಎಂ ಪೋಸ್ಟ್​​ನಿಂದ ಚುನಾವಣೆ ಗೆದ್ದು ಬಿಟ್ಟಿದೆ ಅಂತಲ್ಲ. ಚುನಾವಣೆ ತನಕ ಇದೊಂದೇ ಪೇಸಿಎಂ ಪೋಸ್ಟ್ ಅಥವಾ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ಕಾಂಗ್ರೆಸ್​ನ ಜೀವ ತುಂಬುತ್ತದೆ ಅಂತ ನಂಬಿಕೊಂಡರೆ ಅದು ಮೂರ್ಖತನ.

ಆದರೆ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತ ಹೊಡೆತವಂತೂ ಕಾಂಗ್ರೆಸ್ ಕೊಟ್ಟಿದೆ. ನಾವೂ ನೀವೂ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಷ್ಟು ಡಾಟಾ ಕಾಂಗ್ರೆಸ್ ಮಡಿಲಿಗೆ ಬಂದು ಬೀಳುತ್ತಿದೆ. ಪಾದಯಾತ್ರೆಗಳಿಗೆ ಲಕ್ಷಾಂತರ ಮಂದಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಅವರೆಲ್ಲ ನೇರವಾಗಿ ಓಟು ಹಾಕ್ತಾರೆ ಅಂತಲ್ಲ. ಆದರೆ ಬಿಜೆಪಿ ಹಿಂದೆಲ್ಲ ಬಳಸಿದ ಅದೊಂದು ಮಾಸ್ಟರ್ ಪ್ಲ್ಯಾನ್​ನ್ನು ಇದೀಗ ಕಾಂಗ್ರೆಸ್ ಬಳಸುತ್ತಿದೆ.

ಪ್ರತಿ ಬಾರಿ ಚುನಾವಣೆ ನಡೆದಾಗ ಬಿಜೆಪಿಯ ಕೈಯ್ಯಲ್ಲಿ ಡಿಜಿಟಲ್ ಪ್ಲ್ಯಾಟ್​ಫಾರ್ಮ್ ಗಟ್ಟಿಯಾಗಿ ಇರುತ್ತಿತ್ತು. ಇದೀಗ ಅದೇ ಡಿಜಿಟಲ್ ಪ್ಲ್ಯಾಟ್​ಫಾರ್ಮ್ ಕಾಂಗ್ರೆಸ್ ಕೈಗೂ ಸಿಗುತ್ತಿದೆ, ಸಿಕ್ಕಿಬಿಟ್ಟಿದೆ. ಇದೇ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಇಟ್ಟುಕೊಂಡು ಕಲಾವಿದನಂತೆ ಕೈ ಚಳಕ ತೋರಿಸುತ್ತಿರುವುದು ಒನ್ ಆ್ಯಂಡ್ ಓನ್ಲಿ ಸುನಿಲ್ ಕನ್ನುಗೋಳ್ ಎಂಬ ಮಾಸ್ಟರ್ ಪೀಸ್.

ಇದುವೆರೆಗೆ ಸುನಿಲ್ ಕನ್ನುಗೋಳು ತೆರೆಯ ಮುಂದೆ ಬಂದಿಲ್ಲ. ಆದರೆ ವಾರ್ ರೂಂನಲ್ಲಿ ಕುಳಿತೇ ವಾರ್​ ನಲ್ಲಿ ಹಲ್ಲಾ ಎಬ್ಬಿಸಿದ್ದಾರೆ ಸುನಿಲ್. ಸುನಿಲ್ ಕನ್ನುಗೋಳು ಮೂಲತಃ ಬಳ್ಳಾರಿ ಮಣ್ಣಿನವರು. ಇನ್ನೂ ನವ ಯುವಕ ಸುನಿಲ್ ದೇಶಕಂಡ ಚತುರ ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ ಟೀಂನಲ್ಲಿ ಕೆಲಸ ಮಾಡಿದವರು.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ರಾಜಕೀಯ ತಂತ್ರಗಾರಿಕೆ ಹೆಣೆಯಬೇಕಿತ್ತು. ಆದರೆ ಪ್ರಶಾಂತ್ ಕಿಶೋರ್ ಹಾಗೂ ಕಾಂಗ್ರೆಸ್ ನಡುವೆ ಮಾತುಕತೆ ಸರಿ ಹೊಂದಲಿಲ್ಲ. ಕೂಡಿಕೆ ಆಗಲಿಲ್ಲ. ಆಗ ಕಾಂಗ್ರೆಸ್ ಕಣ್ಣಿಗೆ ಬಿದ್ದಿದ್ದು ಅದೇ ಗರಡಿಯಲ್ಲಿ ಪಳಗಿದ ಸುನಿಲ್ ಎಂಬ ಯುವಕ. ಸುನಿಲ್ ಕನ್ನುಗೋಳು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ತಂತ್ರ ಹೆಣೆಯಲು ಮುಂದಾದಾಗ ಸ್ವತಃ ಕಾಂಗ್ರೆಸ್​ನವರೇ ಅವರನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅಷ್ಟೇ ಯಾಕೆ, ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಪರಮೇಶ್ವರ್​ರಂತಹ ಪಾಲಿಟಿಕಲ್ ಯುನಿವರ್ಸಿಟಿಗಳಿಗೆ ಕೂರಿಸಿಕೊಂಡು ಎಲ್​ಕೆಜಿ ಹುಡುಗ ಪಾಠ ಮಾಡಬೇಕಾ ಅಂತ ಕೇಳಿದವರೇ ಜಾಸ್ತಿ.

ಆದರೆ ಈಗ ಪೇಸಿಎಂ ಪೋಸ್ಟರ್ ಹಚ್ಚಿಸಿದ ಕಿಚ್ಚು ಇದೆಯಲ್ಲ ಅದು ಬಿಜೆಪಿ ನಿಜಕ್ಕೂ ಮೈ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ರಸ್ತೆಯಲ್ಲಿ ಓಡಾಡುವ ಮೊಬೈಲ್ ಹಿಡಿದು ಪೇಟಿಂ ಮಾಡುವ ಶ್ರೀಸಾಮಾನ್ಯನಿಗೆ ವಾವ್ ಎನಿಸುವಂತೆ ಕಾಣಿಸುತ್ತಿದೆ ಕಾಂಗ್ರೆಸ್ ಮಾಡಿದ ಸ್ಟ್ರಾಟಜಿ. ಪೇಸಿಎಂ ರಾಜ್ಯದ ಮಾನ ಹರಾಜು ಹಾಕಿದೆಯೋ ಬಿಟ್ಟಿದೆಯೋ ಅದು ಎರಡನೇ ಸಂಗತಿ. ಆದರೆ ಮೊಬೈಲ್ ತೆರೆದ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೆ ಪೇಸಿಎಂ ಒಂತರಾ ಮಜಾ ಕೊಟ್ಟಿದೆ. 40 ಪರ್ಸಂಟ್ ಕಮೀಷನ್ ಇದೆ ಬಿಡ್ರಿ ಅಂತ ಬಡವ ಬಲ್ಲಿದ ಒಪ್ಪಿಕೊಂಡು ಬಿಡ್ತಿದ್ದಾನೆ. ಕೇವಲ ಡಿಜಿಟಲ್ ಪ್ಲ್ಯಾಟ ಫಾರ್ಮ್ ಜೊತೆಗಲ್ಲ ಶ್ರೀಸಾಮಾನ್ಯ ಮತದಾರನ ಸೈಕಾಲಜಿ ಜೊತೆಗೂ ಕಾಂಗ್ರೆಸ್ ಮಜಾ ಕೊಡುವ ಗೇಮ್ ಆಡಿದೆ.

ಇದೆಲ್ಲ ಎಲ್​ಕೆಜಿ ಹುಡುಗ ಅಂತ ಗೇಲಿ ಮಾಡಿಸಿಕೊಂಡವನ ಬತ್ತಳಿಕೆಯಿಂದ ಹೊರ ಬಂದಿದ್ದು ಅನ್ನೋದು ಗಮನಾರ್ಹ ಸಂಗತಿ. ಬರೋಬ್ಬರಿ 250 ಕ್ಕೂ ಹೆಚ್ಚು ಮಂದಿ ಈ ಸೋಕಾಲ್ಡ್ ಎಲ್​ಕೆಜಿ ಹುಡುಗನ ಟೀಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಶೇ.4 ರಿಂದ ಶೇ.5 ರಷ್ಟು ಓಟುಗಳನ್ನು ಕಾಂಗ್ರೆಸ್ ಕಡೆ ಸೆಳೆಯುವ ಚತುರತೆ ಸಿದ್ದವಾಗುತ್ತಿದೆ. ನಡೆದಾಡುವ ರಾಜಕೀಯ ಯುನಿವರ್ಸಿಟಿಗಳಿಗೂ ಎಲ್​ಕೆಜಿ ಹುಡುಗನ ಸ್ಟ್ರಾಟಜಿ ಕಿಕ್ ಹತ್ತಿಸಿದೆ. ಈ ಕಿಕ್ ಇಳಿಸಲು ಬಿಜೆಪಿ ಗಂಭೀರವಾಗಿ ತಯಾರಿ ಮಾಡಲೇಬೇಕು. ಇಲ್ಲದೇ ಹೋದರೆ 10 ಪರ್ಸೆಂಟ್​ನಲ್ಲಿ ಕಳೆದ ಬೇರೆಯವರ ಮಾನ 40 ಪರ್ಸೆಂಟ್ ನಿಂದ ಮತ್ತೆ ವಾಪಸ್ ಬರುವುದು ಡೌಟು.

ಯಾರ ಕೈಗೂ ಸಿಗದ ಸುನಿಲ್ ಕನುಗೋಳು ಕೆಲಸ ಮಾಡುವ ನೇಚರ್ ತುಂಬಾ ಡಿಫರೆಂಟ್. 2018ರವರೆಗೂ ಬಿಜೆಪಿ ಪಾಳಯದಲ್ಲೂ ಗುರುತಿಸಿಕೊಂಡಿದ್ದ ಸುನಿಲ್ ಕನುಗೋಳು, ಅಮಿತ್ ಶಾ ಜೊತೆಗೆ ಒನ್ ಟು ಒನ್ ಕಾಂಟ್ಯಾಕ್ಟ್ ನಲ್ಲಿ ಕೆಲಸ ಮಾಡಿದ ಚತುರತೆ ಇದೆ. ಡಿಎಂಕೆ ಪಕ್ಷದ ಜೊತೆ ಕೆಲಸ ಮಾಡಿ ರಣತಂತ್ರ ಹೆಣೆದಿದ್ದ ಸುನಿಲ್. ಸ್ಟ್ಯಾಲಿನ್ ಇಮೇಜ್​ಗೆ ಹೊಸ ರೂಪ ಕೊಟ್ಟಿದ್ದರು. ಸುನಿಲ್​ ಕನುಗೋಳು ಇಷ್ಟೆಲ್ಲ ಕೆಲಸ ಮಾಡಿದರೂ ಕೂಡ ಅಚ್ಚರಿಯ ವಿಚಾರವೊಂದಿದೆ. ಇದುವರೆಗೆ ಸೋಷಿಯಲ್ ಮೀಡಿಯಾದಲ್ಲೂ ತೆರೆ ಮರೆಯಲ್ಲೇ ಇರುವ ಸುನಿಲ್ ಡಿಜಿಟಲ್ ಪ್ಲ್ಯಾಟಫಾರ್ಮ್ ಅಸ್ತ್ರ ಬಳಸಿಕೊಂಡು ಡಿಜಿಟಲ್‌ ಪ್ಲ್ಯಾಟಫಾರ್ಮ್ ನಿಂದ ದೂರವೇ ಇದ್ದಾರೆ. ಟ್ವಿಟರ್ ಫೇಸ್ ಬುಕ್ ನಿಂದಲೂ ದೂರ ಇದ್ದಾರೆ. ಸುನಿಲ್ ಕನುಗೋಳು ಕೆಲಸದ ರೀತಿಗೆ ಫಿದಾ ಆದವರು ಹತ್ತಿರದಿಂದ ಬಲ್ಲವರು ಕೆಲವೇ ಕೆಲವರು. ಎಷ್ಟೋ ಮಂದಿ ಕಾಂಗ್ರೆಸ್ ನಾಯಕರಿಗೇ ಇದುವರೆಗೆ ಮುಖ ದರ್ಶನ ನೀಡದ ಸುನಿಲ್ ಕನುಗೋಳು, ಕೇವಲ ಹಿರಿಯ ನಾಯಕರಿಗೆ ಮಾತ್ರ ಕೆಲವೇ ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಸುನಿಲ್ ಕನುಗೋಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಇರುವ ಫೋಟೋ ಅವರದ್ದು ಅಲ್ಲವೇ ಅಲ್ಲ. ಇಷ್ಟರ ಮಟ್ಟಿಗೆ ಅಚ್ಚರಿಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಂಡ್ ಶೇರ್ ಅನಾಲಿಟಿಕ್ಸ್ ಕಂಪನಿ ಮೂಲಕ ಸ್ಟ್ರಾಟಜಿ ಹೆಣೆಯುವ ಪೇಸಿಎಂ ಕಲಾವಿದ ಸುನಿಲ್.

 ಪ್ರಸನ್ನ ಗಾಂವ್ಕರ್, ಟಿವಿ9, ಬೆಂಗಳೂರು

Published On - 6:28 pm, Sat, 24 September 22