Political Analysis: ರಾಜ್ಯದಲ್ಲಿ ಸಂಪುಟ ಸರ್ಕಸ್: ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಹಿಂದಿನ ಸತ್ಯ!
ಮೊದಲೇ ಖಾಲಿ ಉಳಿಸಿಕೊಂಡಿದ್ದ ಮೂರು ಸ್ಥಾನಗಳ ಜೊತೆ ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ ರಾಜೀನಾಮೆ ಮತ್ತು ಉಮೇಶ್ ಕತ್ತಿ ನಿಧನದಿಂದ ತೆರವಾದ ಮೂರು ಸ್ಥಾನಗಳು ಸೇರಿ ಈಗ ಒಟ್ಟು ಆರು ಸ್ಥಾನಗಳು ಭರ್ತಿಗೆ ಬಾಕಿ ಇವೆ.
ನವರಾತ್ರಿ ಹಬ್ಬದ ಜೊತೆ ಜೊತೆಗೆ ಮತ್ತೆ ಸಚಿವ ಸಂಪುಟ ವಿಸ್ತರಣೆಗೆ ಜೀವ ಬಂದಿದೆ. ದೆಹಲಿಗೆ ಹೋದಾಗ ಹೈಕಮಾಂಡ್ ಜೊತೆ ಮಾತನಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವುದಾಗಿ ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ ಹಬ್ಬದ ಸಮಯದಲ್ಲಿ ಚುನಾವಣಾ ವರ್ಷದಲ್ಲೂ ಗೂಟದ ಕಾರಿನ ಆಕಾಂಕ್ಷಿಗಳಾಗಿರುವವರ ನಿದ್ದೆಗೆಡಿಸಿದ್ದಾರೆ. ಮೊದಲೇ ಖಾಲಿ ಉಳಿಸಿಕೊಂಡಿದ್ದ ಮೂರು ಸ್ಥಾನಗಳ ಜೊತೆ ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ ರಾಜೀನಾಮೆ ಮತ್ತು ಉಮೇಶ್ ಕತ್ತಿ ನಿಧನದಿಂದ ತೆರವಾದ ಮೂರು ಸ್ಥಾನಗಳು ಸೇರಿ ಈಗ ಒಟ್ಟು ಆರು ಸ್ಥಾನಗಳು ಭರ್ತಿಗೆ ಬಾಕಿ ಇವೆ. ಈ ಪೈಕಿ ರಾಜೀನಾಮೆ ಕೊಟ್ಟಿರುವ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವ ಕಾರಣ ಒಂದು ವೇಳೆ ವಿಸ್ತರಣೆಯಾದರೆ ಅವರಿಬ್ಬರು ಮತ್ತೆ ಗೂಟದ ಕಾರು ಹತ್ತುವುದು ನಿಶ್ಚಿತವಾಗಿ ಇರುವ ನಿರೀಕ್ಷೆಯಾಗಿದೆ.
ತಾವು ಸಚಿವರಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಎಂಬುದು ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರ ಬಲವಾದ ಇಚ್ಚೆಯಾಗಿದೆ. ಅದಕ್ಕಾಗಿ ವರಿಷ್ಠರ ಮೇಲೆ ತಮ್ಮಿಂದ ಸಾಧ್ಯವಿರುವಷ್ಟೆಲ್ಲಾ ಒತ್ತಡ ಹಾಕಿ ಸೋತಿರುವ ಈಶ್ವರಪ್ಪ, ಕೊನೆಗೆ ವಿಧಾನಸಭೆ ಅಧಿವೇಶನಕ್ಕೆ ಪೂರ್ತಿ ಗೈರಾಗಿ ಚಾಮುಂಡಿ ಬೆಟ್ಟ, ಮಂತ್ರಾಲಯ ಅಂತಾ ದೇವಸ್ಥಾನಗಳನ್ನು ಸುತ್ತಿದ್ದರು. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲೇ ಇದ್ದು ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡರೂ ವಿಧಾನಸಭೆಗೆ ಕಾಲಿಡಲಿಲ್ಲ.
ಇನ್ನು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಾರ್ಜಿನ್ ಗೆಲುವು, ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಲೇಬೇಕಾದ ಅನಿವಾರ್ಯತೆಯನ್ನು ಬಿಜೆಪಿಗೆ ಸೃಷ್ಟಿಸಿಬಿಟ್ಟಿದೆ. ಸ್ವತಃ ರಮೇಶ್ ಜಾರಕಿಹೊಳಿ ಕೂಡಾ ಅದನ್ನೇ ವರಿಷ್ಠರಿಗೂ ಆಗಾಗ ಹೇಳುತ್ತಾ ಮತ್ತೆ ಸಂಪುಟ ಸೇರಲು ಒತ್ತಡ ಹಾಕುತ್ತಿದ್ದಾರೆ. ಇದೀಗ ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ಸೃಷ್ಟಿಯಾಗಿರುವ ವ್ಯಾಕ್ಯೂಮ್ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಬಲ ತುಂಬಲು ರಮೇಶ್ ಜಾರಕಿಹೊಳಿ ಬೇಕೇ ಬೇಕು ಎಂಬ ಅನಿವಾರ್ಯತೆಯನ್ನು ಮತ್ತೊಮ್ಮೆ ಸೃಷ್ಟಿಸಿದೆ.
ಈ ಮಧ್ಯೆ ಬಿಜೆಪಿಯಲ್ಲಿ ಮತ್ತೆ ವಿಧಾನ ಪರಿಷತ್ ಸಭಾಪತಿಯಾಗುವ ನಿರೀಕ್ಷೆ ಮತ್ತು ಡಿಮ್ಯಾಂಡ್ ಜೊತೆ ಬಿಜೆಪಿ ಸೇರಿ ಎಂಎಲ್ಸಿ ಆಗಿರುವ ಬಸವರಾಜ ಹೊರಟ್ಟಿ ಅವರನ್ನು ಮಂತ್ರಿ ಮಾಡುವ ಲೆಕ್ಕಾಚಾರ ಮುಖ್ಯಮಂತ್ರಿಗಳ ತಲೆಯಲ್ಲಿದೆ. ಅದಕ್ಕಾಗಿ ಈ ಅಧಿವೇಶನದಲ್ಲೇ ನಡೆಯಬೇಕಿದ್ದ ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಸಭೆಯ ನಿರ್ಧಾರಕ್ಕೂ ಬ್ರೇಕ್ ಹಾಕಿದ್ದಾರೆ. ಹಾಲಿ ಹಂಗಾಮಿ ಸಭಾಪತಿ ಆಗಿರುವ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಮುಂದುವರಿಸಿ ಹೊರಟ್ಟಿ ಅವರನ್ನು ಮಂತ್ರಿ ಮಾಡಿದರೆ ಪಕ್ಷ ಸೇರ್ಪಡೆ ವೇಳೆ ಕೊಟ್ಟಿದ್ದ ಸ್ಥಾನಮಾನದ ಭರವಸೆಯನ್ನೂ ಈಡೇರಿಸಿದಂತಾಗುತ್ತದೆ ಎಂಬುದು ಸಿಎಂ ಸಮೀಕರಣವಾಗಿದೆ. ಆದರೆ ಈ ಚುನಾವಣಾ ವರ್ಷದಲ್ಲಿ ಕೊನೆಯ ಆರು ತಿಂಗಳಿಗೆ ಮಂತ್ರಿಯಾಗಿ ನಾನೇನು ಮಾಡಲಿ ಎಂಬ ಯೋಚನೆಯಲ್ಲಿರುವ ಬಸವರಾಜ ಹೊರಟ್ಟಿ, ಸಚಿವ ಸ್ಥಾನದ ಬದಲು ಸಭಾಪತಿ ಹುದ್ಡೆ ಅಲಂಕರಿಸುವುದೇ ಸೂಕ್ತ ಎಂಬ ಲೆಕ್ಕಾಚಾರ ಹಾಕಿ ಕುಳಿತಿದ್ದಾರೆ.
ಇದೆಲ್ಲದರ ನಡುವೆ ಸಂಪುಟ ಪುನಾರಚನೆಯಾದಲ್ಲಿ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ಅವರನ್ನು ಕೂರಿಸಿ ಸ್ಥಾನ ತೆರವು ಮಾಡುವ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಮಂತ್ರಿ ಮಾಡಿ ಕಲ್ಯಾಣ ಕರ್ನಾಟಕ ಭಾಗದ ಸಚಿವ ಸ್ಥಾನಸ ಕೋಟಾ ಭರ್ತಿ ಮಾಡಿದರೆ ಹೇಗೆ ಎಂಬ ಚರ್ಚೆ ಕೂಡಾ ಬಿಜೆಪಿಯಲ್ಲಿದೆ. ಆದರೆ ಹೊರಟ್ಟಿ ಅವರನ್ನು ಮರಳಿ ಸಭಾಪತಿ ಮಾಡುವ ಪ್ರಯತ್ನಕ್ಕೆ ಬಿಜೆಪಿಯಲ್ಲೇ ವಿರೋಧವಿದೆ. ಮತ್ತೊಂದೆಡೆ ಪುನಾರಚನೆ ಮಾಡಿದರೆ ಪಕ್ಷದ ಕೆಲಸಕ್ಕೆ ಕಳುಹಿಸಲು ಬಿಜೆಪಿಯಲ್ಲಿ ಪಕ್ಷ ನಿಷ್ಠೆಯೇ ಫಸ್ಟ್ ಎನ್ನುವ ಸಚಿವರಾದ ಪ್ರಭು ಚೌಹಾಣ್ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಫಸ್ಟ್ ಚಾಯ್ಸ್ ಆಗಿಬಿಡಬಹುದು ಎಂಬ ಮಾತೂ ಕೇಸರಿ ಕಾರಿಡಾರ್ನಲ್ಲಿ ಕೇಳಿ ಬರುತ್ತಿದೆ.
ಇತ್ತ ಆಗಾಗ ಸ್ವಪಕ್ಷದ ವಿರುದ್ಧ ವಿಪಕ್ಷ ನಾಯಕನ ರೀತಿಯಲ್ಲಿ ವರ್ತಿಸುವ ಆಡಳಿತ ಪಕ್ಷದ ಶಾಸಕರ ಪ್ರಕಾರ ಸಂಪುಟ ವಿಸ್ತರಣೆಯಾಗಬೇಕಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಟ್ಟಿಗೆ ಸಭೆ ಸೇರಬೇಕಂತೆ. ಸದ್ಯದ ಸ್ಥಿತಿಯಲ್ಲಿ ಐವರು ಒಂದೆಡೆ ಸೇರುವುದು ಸಾಧ್ಯವಾಗದ ಮಾತಂತೆ. ಹಾಗಾಗಿ ಈ ಬಾರಿ ಸಿಎಂ ಸಂಪುಟ ವಿಸ್ತರಣೆ ಮಾಡ್ತೀನಿ ಅಂದಿದ್ದರೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲವಂತೆ!.
ವರದಿ: ಕಿರಣ್ ಹನಿಯಡ್ಕ
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.