ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲಾ ಕಾಶ್ಮೀರದಲ್ಲಿ ದಾಳಿ: ಪೋಸ್ಟ್ ಹಾಕಿದ ಕರ್ನಾಟಕ ಬಿಜೆಪಿ ಐಟಿ ಸೆಲ್ ವಿರುದ್ಧ ಕೇಸ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 27 ಜನ ಮೃತಪಟ್ಟಿದ್ದು, ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಇನ್ನು ಉಗ್ರರ ಕೃತ್ಯವನ್ನು ಖಂಡಿಸಿದ್ದು, ಪ್ರತೀಕಾರ ಆಗಲೇಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯ ಕರ್ನಾಟಕ ಬಿಜೆಪಿ ಐಟಿ ಸೆಲ್ ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದೆ.

ಬೆಂಗಳೂರು, (ಏಪ್ರಿಲ್ 24): ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ (Pahalgam terror attack) ಸಂಬಂಧ ಸಾಮಾಜಿಕ ತಾಣಗಳಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congrfess) ಕಾರ್ಯಕರ್ತರ ನಡುವೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಗಳಿಗೆ ಹೋದಾಗಲೆಲ್ಲಾ ಕಾಶ್ಮೀರದಲ್ಲಿ (Kashmir) ಒಂದಲ್ಲಾ ಒಂದು ದಾಳಿ ನಡೆಯುತ್ತದೆ ಎಂದು ಕರ್ನಾಟಕ ಬಿಜೆಪಿ ಐಟಿ ಸೆಲ್ (Karnataka BJP) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಭಾರೀ ವಿವಾದಕ್ಕೀಡಾಗಿದೆ. ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ ಸಿ.ಎಂ. ಧನಂಜಯ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಐಟಿ ಸೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಹಲ್ಗಾಮ್, ಕಾಶ್ಮೀರದಲ್ಲಿ ನಡೆದ ಉಗ್ರದಾಳಿಯ ಹಿನ್ನೆಲೆಯಲ್ಲಿಯೇ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಸೇರಿಸಿ ‘Every time @RahulGandhi leaves the country something sinister unfolds back home. #PahalgamTerroristAttack #Hindus’ ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದೆ. ಈ ಪೋಸ್ಟ್ ಸಮಾಜದಲ್ಲಿ ಶಾಂತಿಗೆ ಧಕ್ಕೆ ತರಬಲ್ಲಂತಹದ್ದಾಗಿದ್ದು, ಗುಂಪುಗಳ ನಡುವೆ ದ್ವೇಷ ಬೆಳೆಸುವ ಉದ್ದೇಶದಿಂದ ಮಾಡಲ್ಪಟ್ಟಿದೆ. ಜೊತೆಗೆ, ರಾಹುಲ್ ಗಾಂಧಿಯವರ ಗೌರವಕ್ಕೆ ಧಕ್ಕೆ ಉಂಟುಮಾಡುವ, ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿಯೊಂದಿಗೆ ಈ ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ: ಮೃತ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ
ಇಂತಹ ಅಕ್ರಮ, ನಡವಳಿಕೆಗೆ ಸಂಬಂಧಪಟ್ಟಂತೆ, ಬಿಜೆಪಿ ಕರ್ನಾಟಕ ಐಟಿ ಸೆಲ್‌ನ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಧನಂಜಯ್ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಶ್ಮೀರದಲ್ಲಿನ ಉಗ್ರರ ದಾಳಿಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ. ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿ ದೇಶದ ಮೇಲಿನ ದಾಳಿ. ದೇಶದ ಏಕತೆ ಹಾಗೂ ಸಮಗ್ರತೆ ರಕ್ಷಣೆಗೆ ನಾವು ಒಂದಾಗಿ ನಿಲ್ಲುತ್ತೇವೆ. ಇಡೀ ದೇಶ ಆಘಾತಕ್ಕೆ ಒಳಗಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಸಂಸ್ಧೆ ಈ ದಾಳಿಯ ಹೊಣೆ ಹೊತ್ತಿದೆ. ಹೀಗಾಗಿ ನಾವು ತಕ್ಕ ತಿರುಗೇಟು ನೀಡಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಒಂದೇ. ಕೇಂದ್ರ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ ಎಂದಿದ್ದಾರೆ.
ಉಗ್ರರ ದಾಳಿ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಯಾವುದೇ ರಾಜಕೀಯ ನಾಯಕರು ರಾಜಕಾರಣ ಮಾಡದೇ ಕೇಂದ್ರ ಸರ್ಕಾರದ ಪರವಾಗಿ ನಿಂತಿವೆ. ಉಗ್ರರನ್ನು ಮಟ್ಟಹಾಕಲೇಬೇಕು. ಇದಕ್ಕೆ ನಮ್ಮ ಬೆಂಬಲಿವಿದೆ ಎಂದು ಮೋದಿ ಸರ್ಕಾರದ ಪರವಾಗಿ ನಿಂತಿದ್ದಾರೆ. ಆದ್ರೆ, ಕರ್ನಾಟಕ ಬಿಜೆಪಿ ಐಟಿ ಸೆಲ್ ಮಾತ್ರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.
Published On - 4:23 pm, Thu, 24 April 25