ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಎಲ್ಲೆಲ್ಲಿ ಯಾರಿಂದ ಬಂಡಾಯ? ಇಲ್ಲಿದೆ ವಿವರ

| Updated By: ಗಣಪತಿ ಶರ್ಮ

Updated on: Mar 14, 2024 | 2:56 PM

ನಿನ್ನೆಯಷ್ಟೇ ಬಿಜೆಪಿಯ ಎರಡನೇ ಪಟ್ಟಿ​ ಬಿಡುಗಡೆ ಆಗಿದ್ದು, ಕರ್ನಾಟಕದ 20 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿ ಯಾರು ಎಂಬುದು ಘೋಷಣೆಯಾಗಿದೆ. ಆದರೆ, ಟಿಕೆಟ್ ಕೈ ತಪ್ಪಿಸಿಕೊಂಡವರು, ಟಿಕೆಟ್ ಮೇಲೆ ಕಣ್ಣಿಟ್ಟು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಕಹಳೆ ಊದಿದ್ದಾರೆ. ಎಲ್ಲೆಲ್ಲಿ ಯಾರೆಲ್ಲ ಬಂಡಾಯವೆದ್ದಿದ್ದಾರೆ ಎಂಬುದು ಇಲ್ಲಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ಎಲ್ಲೆಲ್ಲಿ ಯಾರಿಂದ ಬಂಡಾಯ? ಇಲ್ಲಿದೆ ವಿವರ
ಬಿಜೆಪಿ
Follow us on

ಬೆಂಗಳೂರು, ಮಾರ್ಚ್ 14: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದ 20 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ (BJP) ಬುಧವಾರ ರಾತ್ರಿ ಘೋಷಣೆ ಮಾಡಿದೆ. ಟಿಕೆಟ್ ವಂಚಿತರ ಆಕ್ರೋಶ ಸ್ಫೋಟಗೊಂಡಿದೆ. ಟಿಕೆಟ್ ಕೈ ತಪ್ಪಿಸಿಕೊಂಡವರು, ಟಿಕೆಟ್ ಮೇಲೆ ಕಣ್ಣಿಟ್ಟು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಕಹಳೆ ಊದಿದ್ದಾರೆ. ಬಿಜೆಪಿಗೆ ಎಲ್ಲೆಲ್ಲಿ ಅಸಮಾಧಾನ, ಬಂಡಾಯದ ಬಿಸಿ ತಟ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೆಎಸ್ ಈಶ್ವರಪ್ಪ ಬಂಡಾಯ

ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ತ್ಯಾಗ ಮಾಡಿ, ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿ, ರಾಜಕೀಯ ಜೀವನ ಕಲ್ಪಿಸಿಕೊಡಬೇಕೆಂದು ಬಯಸಿದ್ದರು. ಆದರೆ ಈಶ್ವರಪ್ಪ ಮತ್ತವರ ಪುತ್ರ ಕಾಂತೇಶ್ ಕಣ್ಣಿಟ್ಟಿದ್ದ ಹಾವೇರಿ-ಗದಗ ಕ್ಷೇತ್ರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪಾಲಾಗಿದೆ. ಸಹಜವಾಗೇ ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ. ಬಿಎಸ್​ಯಡಿಯೂರಪ್ಪ ಟಿಕೆಟ್ ಕೊಡಿಸುತ್ತೇನೆ ಎಂದು ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಾಳೆ ಬೆಂಬಲಿಗರ ಸಭೆ ನಡೆಸಿ ತಮ್ಮ ತೀರ್ಮಾನ ತಿಳಿಸಲು ಮುಂದಾಗಿದ್ದಾರೆ.

ಸದ್ಯ ಈಶ್ವರಪ್ಪ ಅಸಮಾಧಾನದಿಂದ ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷಕ್ಕೆ ಮುಳುವಾಗುವ ಆತಂಕ ಇದೆ. ಅಸಮಾಧಾನ ಸರಿಪಡಿಸಿಕೊಳ್ಳದಿದ್ದಲ್ಲಿ ರಾಘವೇಂದ್ರ ಮತ್ತು ಬೊಮ್ಮಾಯಿ ಇಬ್ಬರ ಗೆಲುವಿಗೂ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈಶ್ವರಪ್ಪ ಅವರ ಮನವೊಲಿಕೆಗೆ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಸರ್ಕಸ್ ಮಾಡುತ್ತಿದ್ದಾರೆ. ಈಶ್ವರಪ್ಪ ಪುತ್ರಗೆ ಪರಿಷತ್​​​ನಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಭರವಸೆ ನೀಡಲಾಗುತ್ತಿದೆ.

ಸಂಗಣ್ಣ ಕರಡಿ ಬಂಡಾಯ

ಕೊಪ್ಪಳದ ಲೋಕಸಭಾ ಟಿಕೆಟ್ ಕೈ ತಪ್ಪಿರೋದಕ್ಕೆ ಕರಡಿ ಸಂಗಣ್ಣ ಬೆಂಬಲಿಗರ ಸಿಟ್ಟು ಸ್ಫೋಟಗೊಂಡಿದೆ. ಅತ್ತ ಟಿಕೆಟ್ ವಂಚಿತ ಕರಡಿ ಸಂಗಣ್ಣ ಮಾಧ್ಯಮದ ಮುಂದೆ ಬೇಸರ ಹೊರಹಾಕದೇ ಇದ್ದರೂ, ತಮ್ಮ ಬೆಂಬಲಿಗರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. 10 ವರ್ಷದಲ್ಲಿ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ, ಕ್ಷೇತ್ರದಲ್ಲಿ ಜನ, ಕಾರ್ಯಕರ್ತರ ಜತೆ ಸಂಪರ್ಕ ಇತ್ತು, ನಿನ್ನೆ ಮುಂಜಾನೆವರೆಗೂ ನನಗೇ ಟಿಕೆಟ್ ಅನ್ನುತ್ತಿದ್ದರು, ಆದರೆ, ದಿಢೀರನೇ ನನಗೆ ಟಿಕೆಟ್ ಮಿಸ್ ಮಾಡಿದ್ದಾರೆ. ಜನರ ಸಂಪರ್ಕ ಇಲ್ಲದಿರುವವರಿಗೆ ಟಿಕೆಟ್ ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ ಕೊಪ್ಪಳ ಲೋಕಸಭಾ ಟಿಕೆಟ್ ಪಡೆದುಕೊಂಡಿರುವ ಡಾ.ಕೆ ಬಸವರಾಜ್, ಇಂದು ಕರಡಿ ಸಂಗಣ್ಣ ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ಕರಡಿ ಬೆಂಬಲಿಗರು ಧಿಕ್ಕಾರ ಕೂಗಿದ್ದಾರೆ. ಇನ್ನು ಬೆಂಬಲಿಗರು ಸಭೆ ನಡೆಸಲು ಮುಂದಾಗಿದ್ದು, ಮುಂದೆ ಯಾವ ನಿರ್ಧಾರ ಮಾಡುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಜಗದೀಶ್ ಶೆಟ್ಟರ್

ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಜಗದೀಶ್​ ಶೆಟ್ಟರ್​ಗೆ ನಿರಾಸೆ ಆಗಿದೆ. ಇತ್ತ ಧಾರವಾಡವೂ ಇಲ್ಲ, ಅತ್ತ ಹಾವೇರಿಗೂ‌ ಟಿಕೆಟ್ ಸಿಗದೇ ಶೆಟ್ಟರ್ ಅತಂತ್ರರಾಗಿದ್ದಾರೆ. ಬೆಳಗಾವಿ ಕೊಡ್ತೀವಿ ಅಂದ್ರೂ ಅದು ಶೆಟ್ಟರ್​ಗೆ ಬೇಡವಾಗಿದೆ. ಹೀಗಾಗಿ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಎಂಪಿ ರೇಣುಕಾಚಾರ್ಯ

ದಾವಣಗೆರೆಯಲ್ಲಿ ಜಿ.ಎಂ.ಸಿದ್ಧೇಶ್ವರ್ ಮತ್ತು ಅವರ ಕುಟುಂಬಕ್ಕೆ ಟಿಕೆಟ್ ಕೊಡಬಾರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರು. ಆದರೆ ಈಗ, ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್​ಗೆ​ ಟಿಕೆಟ್​ ನೀಡಲಾಗಿದೆ. ಹೀಗಾಗಿ ರೇಣುಕಾಚಾರ್ಯ, ರವೀಂದ್ರನಾಥ್ ಟೀಂ ಅಸಮಾಧಾನಗೊಂಡಿದೆ. ರವಿಂದ್ರನಾಥ್ ನಿವಾಸದಲ್ಲಿ ರೇಣುಕಾಚಾರ್ಯ ಬಣದವರು ಮಹತ್ವದ ಸಭೆ ನಡೆಸ್ತಿದ್ದಾರೆ. ಇದು ದಾವಣಗೆರೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿದೆ.

ಜೆಸಿ ಮಾಧುಸ್ವಾಮಿ ಬಂಡಾಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತುಮಕೂರು ಲೋಕಸಭಾ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಲ್ಲಿ ವಿ. ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದಾರೆ. ಈ ಹಿಂದೆಯೇ ಮಾಧುಸ್ವಾಮಿ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಇಲ್ಲದೆ ಇದ್ದರೆ ಹಿಂದೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆದ ಸ್ಥಿತಿಯೇ ಆಗುತ್ತದೆ ಎಂದಿದ್ದರು. ಮೇಲಾಗಿ, ತುಮಕೂರಲ್ಲಿ ನೊಳಂಬ ಲಿಂಗಾಯತ ಸಮುದಾಯದ ಹಿಡಿತ ಹಾಗೂ ನಾಲ್ಕು ವಿಧಾನಸಭೆ ಕ್ಷೇತ್ರದಲ್ಲಿ ಮಾಧುಸ್ವಾಮಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಟಿಕೆಟ್ ಸಿಗದ ಅಸಮಾಧಾನದಿಂದ ಮಾಧುಸ್ವಾಮಿ ಏನಾದರೂ ಮೌನವಹಿಸಿ ಕುಳಿತರೆ ಸೋಮಣ್ಣ ಗೆಲವು ಕಷ್ಟವಾಗಲಿದೆ.

ಇದನ್ನೂ ಓದಿ: ಹಾವೇರಿ, ಧಾರವಾಡ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್​ಗೆ ಮತ್ತೊಂದು ಆಫರ್ ನೀಡಿದ ಅಮಿತ್ ಶಾ!

ಈ ಮಧ್ಯೆ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್​ ಮೇಲೆ ಸಿಟಿ ರವಿ ಕಣ್ಣಿಟ್ಟಿದ್ದರು. ಆದ್ರೆ ಅಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಕೊಡಲಾಗಿದೆ. ಸಿಟಿ ರವಿ ಪಕ್ಷದ ಕಟ್ಟಾಳು ಆಗಿರುವುದರಿಂದ ಬಂಡಾಯ ಏಳಲಾರರು ಎಂಬ ನಂಬಿಕೆ ವರಿಷ್ಠರಿಗೆ ಇದೆ. ಹೀಗಿದ್ದರೂ ಸಿಟಿ ರವಿಗೆ ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಕೊಡಿಸುವ ಬಗ್ಗೆ ಚರ್ಚೆಯಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ