ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು(ಮಾರ್ಚ್ 24) ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಅವರ ಕಾವೇರಿ ನಿವಾಸಕ್ಕೆ ನೀಡಿ ಉಪಹಾರ ಸೇವಿಸಿದರು. ಉಪಹಾರಕ್ಕೂ ಮುನ್ನ ಕಾರಿನ ಬಳಿ ಬಂದು ಅಮಿತ್ ಶಾ ಅವರನ್ನು ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಸ್ವಾಗತಿಸಿದರು. ಈ ವೇಳೆ ಯಡಿಯೂರಪ್ಪ ಶಾಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಲು ಮುಂದಾದರು. ಆದ್ರೆ, ಶಾ ವಿಜಯೇಂದ್ರ (BY Vijayendra) ಕೈಗೆ ಹೂಗುಚ್ಛ ಕೊಡುವಂತೆ ಬಿಎಸ್ವೈಗೆ ಹೇಳಿದರು. ನಂತರ ಯಡಿಯೂರಪ್ಪ ತಮ್ಮ ಕೈಯಲ್ಲಿದ್ದ ಹೂವಿನ ಬೊಕ್ಕೆಯನ್ನು ವಿಜಯೇಂದ್ರ ಕೈಗೆ ನೀಡಿದರು. ಅನಂತರ ಅದೇ ಹೂಗುಚ್ಛವನ್ನು ವಿಜಯೇಂದ್ರ, ಅಮಿತ್ ಶಾಗೆ ನೀಡಿ ಸ್ವಾಗತಿಸಿರುವುದು ವಿಶೇಷವಾಗಿದೆ. ಇದೇ ವೇಳೆ ಅಮಿತ್ ಶಾ ವಿಜಯೇಂದ್ರಗೆ ಬೆನ್ನು ತಟ್ಟಿದರು. ಅಮಿತ್ ಶಾ ಯಡಿಯೂರಪ್ಪಗಿಂತ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕುತೂಹಲ ಮೂಡಿಸಿದೆ.
#WATCH: #AmitShah asks #yediyurappa to give bouquet to BY Vijayendra to greet himhttps://t.co/V34TSUxbKq@AmitShah #Karnataka #headlines #todaysnews #viralvideo #updatenews #newstoday #newsoftheday #newsupdate #latestnews #dailynews pic.twitter.com/I8Und9gWY7
— News9 (@News9Tweets) March 24, 2023
ಅಮಿತ್ ಶಾಗೆ ಇಡ್ಲಿ, ದೋಸೆ, ಪೊಂಗಲ್, ಉಪ್ಪಿಟ್ಟು, ರಸ್ ಮಲಾಯ್ ಖಾದ್ಯಗಳನ್ನು ಸಿದ್ಧ ಪಡಿಸಲಾಗಿತ್ತು. ಇನ್ನು ಮಾಜಿ ಸಿಎಂ B.S.ಯಡಿಯೂರಪ್ಪ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಾಹಾರ ಕೂಟದಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು. ಉಪಹಾರ ಸವಿದ ಅಮಿತ್ ಶಾ ಜತೆಗೆ ಯಡಿಯೂರಪ್ಪ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದು ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಣತಂತ್ರದ ಮಾತುಕತೆ ಮಾಡಿದರು
ಇನ್ನು ಉಪಹಾರ ಕೂಟದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಅಮಿತ್ ಶಾ ನನ್ನನ್ನು ಮಾತನಾಡಿಸಿದ್ದಕ್ಕೆ ಖುಷಿಯಾಗಿದೆ. ಪಕ್ಷದ ಕೆಲಸ ಮಾಡಲು ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಮಿತ್ ಶಾ ನಮ್ಮ ಮನೆಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅತಂತ್ರ ಸೃಷ್ಟಿಸಲು ಬಿಡಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನ ಮನೆ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಎಸ್ವೈ, ಅಮಿತ್ ಶಾ ನಡುವೆ ರಾಜಕೀಯ ಬಿಟ್ಟು ಬೇರೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕೇಂದ್ರ ನಾಯಕರು ತೀರ್ಮಾನ ಮಾಡಬೇಕು. ಈಗಾಗಲೇ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದೇನೆ. ಶೀಘ್ರದಲ್ಲೇ ಶಿಕಾರಿಪುರದಲ್ಲಿ ಮತ್ತೊಂದು ಸುತ್ತಿನ ಪ್ರವಾಸ ಆರಂಭಿಸುತ್ತೇನೆ ಎಂದು ತಿಳಿಸಿದರು.
ಒಟ್ಟನಲ್ಲಿ ಉಪಹಾರದಲ್ಲಿ ಅಮಿತ್ ಶಾ, ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು ಅಚ್ಚರಿ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ.