ಧಾರವಾಡ, ಆಗಸ್ಟ್ 6: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (H. D. Kumaraswamy) ಅವರು ನೈಸ್ ರಸ್ತೆ ಹಗರಣದ ಬಗ್ಗೆ ದಾಖಲೆ ನೀಡಿದರೆ ಅದನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಜಿಲ್ಲೆಯ ಅಳ್ನಾವರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ದಾಖಲೆ ನೀಡಲಿ ಎಂದರು.
ಧಾರವಾಡ-ಬೆಳಗಾವಿ ರೈಲು ಮಾರ್ಗ ವಿಳಂಬ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ, ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಅರ್ಧಕ್ಕಿಂತ ಹೆಚ್ಚು ಭೂಮಿ ಕೊಡಬೇಕು. ಆಗ ಕಾಮಗಾರಿ ಆರಂಭಿಸಬಹುದು. ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು. ಆದರೆ ರಸ್ತೆ ಮಾಡುವುದಕ್ಕೇ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದೇ ಸಾಕಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ರಸ್ತೆ, ಮೂಲಭೂತ ಸೌಲಭ್ಯಕ್ಕೆ ಇವರೇನು ಹಣ ಕೊಡುವ ಖಚಿತತೆ ಇಲ್ಲ. ವರ್ಗಾವಣೆ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಎಷ್ಟು ದಿನ ಇರುತ್ತೋ ಏನೋ ಎಂದು ಶಾಸಕ ಹೇಳಿಕೆ ವಿಚಾರವಾಗಿ ಮಾತನಾಡಿದ ಪ್ರಲ್ಹಾದ್ ಜೋಶಿ, ಅವರು ಕಾಂಗ್ರೆಸ್ ಶಾಸಕರು. ಅವರೇ ಹೇಳಿದ್ದಾರೆ. ಹೀಗಾದರೆ ರಾಜ್ಯದ ಪರಿಸ್ಥಿತಿ ಹೇಗಿರಬೇಡ ಊಹಿಸಿ. ಇವರು ರಸ್ತೆಗಳ ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ರಸ್ತೆಗಿಳಿದು ಹೋರಾಡಲು ನಮ್ಮ ಶಾಸಕರಿಗೆ ಕರೆ ನೀಡಿದ್ದೇನೆ. ಎಲ್ಲಿ ರಸ್ತೆ ಕೆಟ್ಟಿದೆಯೋ ಅಲ್ಲಿ ನಮ್ಮ ಶಾಸಕರು ಹೋರಾಟ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಕರ್ನಾಟಕದ 13 ರೈಲು ನಿಲ್ದಾಣಗಳ ನವೀಕರಣಕ್ಕೆ ಮೋದಿ ಚಾಲನೆ: ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ಮಾತು
ಪ್ರಧಾನಿ ಮೋದಿ ಅವರು ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಉದ್ಯಮಿಗಳ ಹತ್ತಾರು ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದಿದ್ದಾರೆ. ಈ ರೀತಿ ಹೇಳುವ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಉದ್ಯಮಿಗಳ ಸಾಲಮನ್ನಾ ಮಾಡಿರುವ ಆರೋಪವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಾಬೀತುಮಾಡಲಿ. ಸಾಲಮನ್ನಾ ಮಾಡಿಲ್ಲ ಅಂತಾದರೆ ಇಬ್ಬರೂ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ಸಾಲ ಕೊಡಿಸಿದ್ದಾರೆ. ಮೋದಿ ಬಂದ ಮೇಲೆ ಬಾಕಿ ಸಾಲ ಮರುಪಾವತಿ ಮಾಡಿ ಎಂದಿದ್ದರು. ಓಡಿ ಹೋದ ಉದ್ಯಮಿ, ವಂಚಕರ ಆಸ್ತಿಯನ್ನು ವಶಪಡಿಸಿಕೊಳ್ಳುತ್ತೇವೆ. ವಂಚಕರ ಆಸ್ತಿ ವಶಪಡಿಸಿಕೊಳ್ಳಲು ಹೊಸ ಕಾಯ್ದೆ ತಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಕಾನೂನು ಬಿಟ್ಟು ಉದ್ಯಮಿಗಳಿಗೆ ಸಾಲ ಕೊಟ್ಟಿದೆ. ಈಗಾಗಲೇ 30-40 ಸಾವಿರ ಕೋಟಿ ಸಾಲ ವಸೂಲಿ ಮಾಡಿದ್ದೇವೆ. ಓಡಿ ಹೋದವರಿಗೆ ಸಾಲ ಕೊಟ್ಟಿದ್ದೇ ಕಾಂಗ್ರೆಸ್. ಓಡಿ ಹೋದವರನ್ನು ಕರೆದು ವಸೂಲಿ ಮಾಡುತ್ತೇವೆ ಎಂದರು.
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಮೂಲಭೂತ ಸೌಲಭ್ಯ ಅಭಿವೃದ್ಧಿ ಆಗುತ್ತಿದೆ. ಆದರೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲಿ ವಿರೋಧ ಮಾಡುತ್ತಿದೆ. ಸೆಂಟರ್ ವಿಸ್ತಾಗೆ ವಿರೋಧ ಮಾಡಿದ್ದರು. ಹೊಸ ಪಾರ್ಲಿಮೆಂಟ್ಗೆ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ಸ್ಪರ್ಧೆಗಿಳಿದಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ