JDS Politics: ಅರಸೀಕೆರೆಯಲ್ಲಿ ಜೆಡಿಎಸ್ ಸಮಾವೇಶ; ಭವಾನಿ ರೇವಣ್ಣ ಟಿಕೆಟ್ ಭವಿಷ್ಯ ಇಂದೇ ನಿರ್ಧಾರ ಸಾಧ್ಯತೆ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 12, 2023 | 7:45 AM

HDK vs HDR- ಹಾಸನ ಅರಸೀಕೆರೆಯಲ್ಲಿ ಇಂದು ಬೃಹತ್ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಹಾಗೆಯೇ ಹೊಳೆನರಸೀಪುರಕ್ಕೆ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದು ಈ ಸಂದರ್ಭದಲ್ಲಿ ಭವಾನಿ ರೇವಣ್ಣರ ಜೊತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

JDS Politics: ಅರಸೀಕೆರೆಯಲ್ಲಿ ಜೆಡಿಎಸ್ ಸಮಾವೇಶ; ಭವಾನಿ ರೇವಣ್ಣ ಟಿಕೆಟ್ ಭವಿಷ್ಯ ಇಂದೇ ನಿರ್ಧಾರ ಸಾಧ್ಯತೆ
ಹೆಚ್ ಡಿ ಕುಮಾರಸ್ವಾಮಿ
Follow us on

ಹಾಸನ: ತನ್ನ ಭದ್ರಕೋಟೆಯ ನಾಡಿನಲ್ಲಿ ಜಾತ್ಯತೀತ ಜನತಾ ದಳ ಇಂದು ಭಾನುವಾರ ಬೃಹತ್ ಸಮಾವೇಶ (JDS Samavesha) ನಡೆಸುತ್ತಿದೆ. ಹಲವು ಕಾರಣಗಳಿಗೆ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿರುವ ಹಾಸನದಲ್ಲಿ ಜೆಡಿಎಸ್ ತನ್ನ ಶಕ್ತಿಪ್ರದರ್ಶನ ತೋರಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಅರಸೀಕೆರೆಯಲ್ಲಿ (Arasikere) ಸಮಾವೇಶ ನಡೆಯುತ್ತಿರುವುದು, ಭವಾನಿ ರೇವಣ್ಣ ಮತ್ತು ಕುಮಾರಸ್ವಾಮಿ ಸಾರ್ವಜನಿಕವಾಗಿ ಮುಖಾಮುಖಿಯಾಗುತ್ತಿರುವುದು ಇವೆಲ್ಲವೂ ಬಹಳಷ್ಟು ಕುತೂಹಲ ಮೂಡಿಸಿವೆ. ಅರಸೀಕೆರೆಯ ಜೆಡಿಎಸ್ ಸಮಾವೇಶದಲ್ಲಿ ಸುಮಾರು 25 ಸಾವಿರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶಿವಲಿಂಗೇಗೌಡರಿಗೆ ಸೆಡ್ಡು?: ಅರಸೀಕೆರೆಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸಲು ಏನು ಕಾರಣ ಎಂದು ಬಹುತೇಕ ಎಲ್ಲರಿಗೂ ಅರಿವಿದೆ. ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡರ ಅನುಪಸ್ಥಿತಿಯಿಂದ ಜೆಡಿಎಸ್​ಗೆ ರಾಜಕೀಯ ನಷ್ಟವೇನಾಗದು ಎಂಬ ಸಂದೇಶವನ್ನು ಜಾಹೀರುಗೊಳಿಸುವುದು ಎಚ್​ಡಿ ರೇವಣ್ಣ ಮತ್ತಿತರರ ಉದ್ದೇಶ. ಹಾಸನ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಬಾಣಾವರ ಅಶೋಕ್ ಅವರನ್ನು ಅರಸೀಕೆರೆಯ ಜೆಡಿಎಸ್ ಅಭ್ಯರ್ಥಿಯಾಗಿ ಸಾರ್ವಜನಿಕವಾಗಿ ಘೋಷಿಸುವ ಸಾಧ್ಯತೆ ಇದೆ. ಹೆಚ್​ಡಿ ಕುಮಾರಸ್ವಾಮಿ ಈಗಾಗಲೇ ಹೊಸ ಅಭ್ಯರ್ಥಿಯನ್ನು ಸಮಾವೇಶದಲ್ಲಿ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ.

ಭವಾನಿಕುಮಾರಸ್ವಾಮಿ ಮುಖಾಮುಖಿ

ಹಾಸನದ ಜೆಡಿಎಸ್ ಟಿಕೆಟ್ ವಿಚಾರವಾಗಿ ದೇವೇಗೌಡರ ಮನೆಯಲ್ಲಿ ಒಡಕು ಹೆಚ್ಚಾದಂತೆ ತೋರುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ತಾನೇ ಸ್ಪರ್ಧೆ ಮಾಡುತ್ತೇನೆಂದು ಭವಾನಿ ರೇವಣ್ಣ ಹೇಳಿದ್ದರೂ ಕುಮಾರಸ್ವಾಮಿ ಮಾತ್ರ ಅದಕ್ಕೆ ಒಪ್ಪಿಲ್ಲ. ಯಾರಿಗೇ ಟಿಕೆಟ್ ನೀಡಬೇಕಿದ್ದರೂ ಅದನ್ನು ವರಿಷ್ಠರು ನಿರ್ಧರಿಸುತ್ತಾರೆ. ಅಗತ್ಯ ಬಿದ್ದರಷ್ಟೇ ಗೌಡರ ಕುಟುಂಬದವರಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಇಂದು ಭಾನುವಾರ ಹಾಸನಕ್ಕೆ ಆಗಮಿಸಲಿದ್ದು, ಭವಾನಿ ರೇವಣ್ಣರೊಂದಿಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ಗೆ ಮತ ಹಾಕಿದರೆ ನೀವು ಬಿಜೆಪಿಗೆ ಮತ ಹಾಕಿದಂತೆ: ಶಾಸಕ ಜಮೀರ್ ಅಹ್ಮದ್

ಹಾಸನದ ಹೊಳೆನರಸೀಪುರ ತಾಲೂಕಿನ ನಗರ್ತಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುತ್ತಿದ್ದಾರೆ. ಹೆಚ್​ಡಿ ರೇವಣ್ಣ ಮತ್ತವರ ಕುಟುಂಬ ಸದಸ್ಯರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಮೂಲಗಳ ಪ್ರಕಾರ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಅನ್ನು ಭವಾನಿ ರೇವಣ್ಣಗೆ ನೀಡಬೇಕೋ ಬೇಡವೋ ಎಂಬುದು ಇಂದೇ ನಿರ್ಧಾರವಾಗುವ ಸಾಧ್ಯತೆ ಇದೆ.

ರೇವಣ್ಣ ಇನ್ನೊಂದು ಪ್ಲಾನ್

ಹಾಸನದ ಜೆಡಿಎಸ್ ಮೂಲಗಳ ಪ್ರಕಾರ ಹೆಚ್​ಡಿ ರೇವಣ್ಣ ತಮ್ಮ ಪತ್ನಿಗೆ ಹಾಸನ ಟಿಕೆಟ್ ದಕ್ಕಿಸಲು ಸೆಕೆಂಡ್ ಪ್ಲಾನ್ ಇಟ್ಟುಕೊಂಡಿದ್ದಾರೆನ್ನಲಾಗಿದೆ. ಮಾಜಿ ಶಾಸಕ ಪ್ರಕಾಶ್ ಅವರ ಮಗ ಸ್ವರೂಪ್ ಪ್ರಕಾಶ್ ಅವರಿಗೆ ಹಾಸನದ ಟಿಕೆಟ್ ಕೊಡುವ ಮನಸ್ಸಿನಲ್ಲಿ ಕುಮಾರಸ್ವಾಮಿ ಇದ್ದಾರೆ. ಒಂದು ವೇಳೆ ಭವಾನಿ ರೇವಣ್ಣಗೆ ಹಾಸನ ಟಿಕೆಟ್ ಕೊಡಬಾರದು ಎಂದು ನಿರ್ಧಾರವಾದಲ್ಲಿ ರೇವಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಬಹುದು. ಹಾಸನ ಮತ್ತು ಹೊಳೆನರಸೀಪುರ ಕ್ಷೇತ್ರಗಳನ್ನು ರೇವಣ್ಣ ಕೇಳಬಹುದು. ಸ್ವತಃ ಅಣ್ಣನೇ ಸ್ಪರ್ಧಿಸಲು ಮುಂದಾದರೆ ಕುಮಾರಸ್ವಾಮಿಗೆ ಒಲ್ಲೆ ಎನ್ನಲಾಗದು ಎಂಬುದು ಅವರ ಲೆಕ್ಕಾಚಾರ. ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದರೆ ಹಾಸನ ಸ್ಥಾನವನ್ನು ಬಿಟ್ಟುಬಿಟ್ಟು, ಉಪಚುನಾವಣೆಯಲ್ಲಿ ಪತ್ನಿ ಭವಾನಿಯನ್ನು ನಿಲ್ಲಿಸಿ ಗೆಲ್ಲಿಸುವುದು ರೇವಣ್ಣ ತಂತ್ರ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಜೆಡಿಎಸ್ ಜಿಲ್ಲಾಧ್ಯಕ್ಷನ ಹೆಸರಲ್ಲಿ ಯುವತಿಗೆ ವಂಚನೆ ಆರೋಪ; ಮನೆಗೆ ನುಗ್ಗಿ ಧರ್ಮದೇಟು ಕೊಟ್ಟ ಯುವತಿ

ಈಗ ಈ ಸೋದರರ ಮತ್ತು ಕುಟುಂಬದ ಸವಾಲು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂದು ಕಾಲವೇ ಉತ್ತರಿಸಬೇಕು. ಇಂದು ಜೆಡಿಎಸ್ ಸಮಾವೇಶ ಮುಗಿಯುವುದರ ಒಳಗೆ ಚಿತ್ರಣ ತುಸು ಸ್ಪಷ್ಟಗೊಳ್ಳಲಿದೆ.

Published On - 7:45 am, Sun, 12 February 23