ಚಿಂಚನಸೂರ್​ ಕಾಂಗ್ರೆಸ್​ ಸೇರ್ಪಡೆ ವಿಚಾರ: ನಾನು ಎಲ್ಲೂ ಹೋಗಲ್ಲ ಅಂತ ಗಂಡ-ಹೆಂಡತಿ ಕಾಲು ಹಿಡಿದಿದ್ದರು- ​ಯಡಿಯೂರಪ್ಪ

|

Updated on: Mar 21, 2023 | 2:04 PM

ಬಾಬುರಾವ್​ ಚಿಂಚನಸೂರ್ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಯಾಕೆ ಚರ್ಚೆ? ಬೇರೆ ಬೇರೆ ಒತ್ತಡಕ್ಕೆ ಪಕ್ಷ ಬಿಟ್ಟು ಹೋಗಿರಬಹುದು. ಬಿಜೆಪಿ ಮೇಲೆ ಅವರಿಗೆ ತುಂಬ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಚಿಂಚನಸೂರ್​ ಕಾಂಗ್ರೆಸ್​ ಸೇರ್ಪಡೆ ವಿಚಾರ: ನಾನು ಎಲ್ಲೂ ಹೋಗಲ್ಲ ಅಂತ ಗಂಡ-ಹೆಂಡತಿ ಕಾಲು ಹಿಡಿದಿದ್ದರು- ​ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ (ಎಡಚಿತ್ರ) ​ ಬಾಬುರಾವ್​ ಚಿಂಚನಸೂರ್ (ಬಲಚಿತ್ರ)
Follow us on

ಬೆಂಗಳೂರು: ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡಿದ್ದರು. ನಾನು ಎಲ್ಲೂ ಹೋಗಲ್ಲ ಎಂದು ಬಾಬುರಾವ್​ ಚಿಂಚನಸೂರ್ (Baburao Chinchansur)​ ಹೇಳಿದ್ದರು. ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಬೇರೆ ಬೇರೆ ಒತ್ತಡಕ್ಕೆ ಪಕ್ಷ ಬಿಟ್ಟು ಹೋಗಿರಬಹುದು. ಬಿಜೆಪಿ (BJP) ಮೇಲೆ ಅವರಿಗೆ ತುಂಬ ಭಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಿಂದ ಮೂರು ಸಮೀಕ್ಷೆ ಮಾಡಿಸಿದ್ದೇವೆ. 3 ಸರ್ವೆಯಲ್ಲೂ 130ರಿಂದ 140 ಸ್ಥಾನ ಗೆಲ್ಲುವ ಬಗ್ಗೆ ವರದಿ ಬಂದಿದೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ರಿಪೋರ್ಟ್ ನೋಡಿಯೇ ಕಾಂಗ್ರೆಸ್​ನವರಿಗೆ ದಿಗಿಲು ಹುಟ್ಟಿದೆ. ಹಾಗಾಗಿ ಉಚಿತ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ಅಧಿಕಾರಕ್ಕೆ ಬರುತ್ತೇವೆ ಎಂಬ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಾಯಕರದ್ದು ತಿರುಕನ ಕನಸು, ಅದು ನನಸಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ರೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್​ ಪಕ್ಷದಿಂದ ನಾಲ್ಕನೇ ಗ್ಯಾರಂಟಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಆ ಯೋಜನೆಗೆ ಬೆಲೆ ಎಲ್ಲಿದೆ. ಬೇರೆ ರಾಜ್ಯದಲ್ಲಿ ಘೋಷಣೆ ಮಾಡಿದ್ದು ಕಾರ್ಯರೂಪಕ್ಕೆ ಬಂತಾ? ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿ ಹಣ ಉಳಿಯುತ್ತದೆ. ಜನರಲ್ಲಿ ಗೊಂದಲ ಉಂಟುಮಾಡಲು ಸುಳ್ಳು ಭರವಸೆ ಕೊಡುತ್ತಿದ್ದಾರೆ. ಬಿಜೆಪಿಯನ್ನ ಕಂಡು, ಕಾಂಗ್ರೆಸ್ ನಾಯಕರಿಗೆ ಭಯ ಶುರುವಾಗಿದೆ.

ಬಾಬುರಾವ್​ ಚಿಂಚನಸೂರ್ ಮಾತಿಗೆ ಬೆಲೆ ಇಲ್ಲ: ಆರ್​ ಅಶೋಕ

ಬಾಬುರಾವ್​ ಚಿಂಚನಸೂರ್ ಮಾತಿಗೆ ಬೆಲೆ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರನ್ನು ಸೋಲಿಸಲು ಬಿಜೆಪಿ ಬಂದಿದ್ದಾಗಿ ಹೇಳಿದ್ದರು. ಅವರಿಗೆ ಅಧಿಕಾರದ ಆಸೆ ಜಾಸ್ತಿ. ಎಂಎಲ್‌ಸಿ ಆಗಿದ್ದರೂ ವಿಧಾನಸಭೆಗೂ ಟಿಕೆಟ್ ಕೇಳುತ್ತಿದ್ದಾರೆ. ನಮ್ಮಲ್ಲಿ ಎಂಎಲ್‌ಸಿ ಆಗಿರುವರಿಗೆ ಟಿಕೆಟ್ ಇಲ್ಲ. ಈಗ ಅವರು ಅಲ್ಲಿಗೆ ಹೋಗಿದ್ದಾರೆ. ಅವರು ಮಾತಿನ ಮೇಲೆ ನಿಲ್ಲಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್​ ವಾಗ್ದಾಳಿ ಮಾಡಿದ್ದಾರೆ.

ಮಾರ್ಚ್ 25 ರ ಬಳಿಕ ಸೇರ್ಪಡೆ ಸಾಧ್ಯತೆ

ಬಾಬುರಾವ್​ ಚಿಂಚನಸೂರ್​ ಎಂಎಲ್​ಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇಂದು (ಮಾ.21) ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಾರೆ ಎಂದು ಹೇಳಾಗುತ್ತಿತ್ತು. ಆದರೆ ಚಿಂಚನಸೂರ್​ ಇಂದು ಸೇರ್ಪಡೆಯಾಗಿಲ್ಲ. ಮಾರ್ಚ್‌ 25ರ ಬಳಿಕ ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಜತೆ ಚರ್ಚೆ ಬಳಿಕ ಸೇರ್ಪಡೆ ಬಗ್ಗೆ ಮಾಹಿತಿ ಹೊರಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Tue, 21 March 23