Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ನಂತರ ಭಾಷಣ ಮಾಡಿ: ಕಾಂಗ್ರೆಸ್​ಗೆ ಸವಾಲೆಸೆದ ಮುರುಗೇಶ್ ನಿರಾಣಿ

ಕಲಾದಗಿಯಲ್ಲಿ ನಡೆದಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಸೇರಿದಂತೆ ಇತರೆ ಕೈ ನಾಯಕರು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಟೀಕೆ ಮಾಡಿದ್ದರು. ಇದೀಗ ತಮ್ಮ ವಿರುದ್ಧ ಹರಿಹಾಯ್ದಿದ್ದ ಕೈ ನಾಯಕರಿಗೆ ಸಚಿವರು ಸವಾಲೆಸೆದಿದ್ದಾರೆ.

ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ನಂತರ ಭಾಷಣ ಮಾಡಿ: ಕಾಂಗ್ರೆಸ್​ಗೆ ಸವಾಲೆಸೆದ ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ ಮತ್ತು ಸಿದ್ದರಾಮಯ್ಯ
Follow us
Rakesh Nayak Manchi
|

Updated on:Feb 25, 2023 | 8:00 PM

ಬಾಗಲಕೋಟೆ: ವೇದಿಕೆ ಮೇಲೆ ನಿಂತು ನನ್ನನ್ನು ವಿರೋಧ ಮಾಡಿ ಹೋಗಿದ್ದಿರಲ್ಲ, ನಿಮಗೆ ತಾಕತ್ತಿದ್ದರೆ, ನಿಮ್ಮಲ್ಲಿ ಶಕ್ತಿ ಇದ್ದರೆ ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ನಂತರ ವೇದಿಕೆ ಮೇಲೆ ನಿಂತು ಭಾಷಣ ಮಾಡಿ ಎಂದ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ಕಲಾದಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುರುಗೇಶ್ ನಿರಾಣಿ ಕಬ್ಬಿನ ಬಿಲ್ ಎಷ್ಟು ನೀಡಿದ್ದಾರೋ ಅಷ್ಟು ಬೀಳಗಿ ತಾಲ್ಲೂಕಿಗೆ ಬೇರೆ ಕಾರ್ಖಾನೆಯವರು ನೀಡಿಲ್ಲ. ಈ ವೇದಿಕೆ ಮೇಲೆ ನಿಂತು ನಿರಾಣಿ ವಿರೋಧ ಮಾಡಿ ಹೋಗಿದ್ದಿರಲ್ಲ, ಆ ಶಕ್ತಿ ನಿಮಗೆ ಇದ್ದರೆ ನಾನು ನೀಡಿದಷ್ಟು ಬಿಲ್ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ನಂತರ ಭಾಷಣ ಮಾಡಿ ಎಂದು ಹೇಳಿದರು.

ರಾಜಕಾರಣ ಮಾಡುವುದಿದ್ದರೆ ರಾಜಕಾರಣ ಮಾಡಿ, ಅದುಬಿಟ್ಟು ಸುಳ್ಳು ಹೇಳಿ ಕಪ್ಪು ಮಸಿ ಹಚ್ಚುವ ಪ್ರಯತ್ನ ಮಾಡಿದರೆ ನಿಮ್ಮನ್ನು ನಾನು ಸುಮ್ಮನೆ ಬಿಡುವುದಿಲ್ಲ. ಬೇರೆಯವರು ಕಟ್ಟಿದ ಕಾರ್ಖಾನೆಗಳು ರೈತರ ಮೇಲೆ ಬೋಜಾ ಹಾಕಿ, ಸಾಲ ಹೊರಿಸಿ ಪ್ರತಿವರ್ಷ ಕಬ್ಬಿನ ಬಿಲ್​ನಲ್ಲಿ 200-300 ರೂ. ಕಡಿಮೆ ಕೊಡುತ್ತಿದ್ದಾರೆ. ಎಲ್ಲರಗಿಂತ 100-200 ರೂ. ಹೆಚ್ಚು ನೀಡಿದ ಕೀರ್ತಿ ನಿರಾಣಿ ಗ್ರೂಪ್​ಗೆ ಸಿಗುತ್ತದೆ ಎಂದರು.

ಇದನ್ನೂ ಓದಿ: ಈ ಕೆಂಪು ಸುಂದರಿ ಬಲು ಘಾಟು! ಇದು ಬಾಗಲಕೋಟೆ ಹೆಮ್ಮೆ, ನೇರ ವಿದೇಶಗಳಿಗೆ ರಫ್ತು ಆಗುತ್ತಿದೆ ಈ ಒಣ ಮೆಣಸಿನಕಾಯಿ!

ನಾನು ರಾಜಕೀಯ ಮಾತನಾಡಬಾರದು ಅಂತಾ ಮಾಡಿದ್ದೆ. ಆದರೆ ಇದೇ ವೇದಿಕೆಯಲ್ಲಿ ಮಾತಾಡಿದವರಿಗೆ ಸೂಕ್ಷ್ಮವಾಗಿ ಹೇಳುತ್ತೇನೆ. ಯಾರೋ ಚೀಟಿ ಬರೆದು ಅವರ (ಸಿದ್ದರಾಮಯ್ಯ) ಕೈಯಿಂದ ಮಾತನಾಡಿಸಿದ್ದೀರಿ. ನಿಮಗೆ ತಾಕತ್ತಿದ್ದರೆ ಇನ್ನೊಂದು ಸಾರಿ ವೇದಿಕೆ ಬಂದಾಗ ನಾನು ಕೊಟ್ಟಷ್ಟು ಬಿಲ್ ಕೊಟ್ಟು ಮಾತನಾಡಲಿ. ಸುಮ್ಮನೆ ಬೇರೆ ಪಕ್ಷದವರಿಗೆ ಕೆಸರು ಎರಚುವ ಕೆಲಸ‌ ಮಾಡಬಾರದು. ಯಾರು ಯೋಗ್ಯರಿದ್ದಾರೆ ಎಂಬುದನ್ನು ಮತದಾರ ಪ್ರಭು ತೀರ್ಮಾನ ಮಾಡುತ್ತಾರೆ. ಯಾರು ಆಯ್ಕೆ ಆಗುತ್ತಾರೋ ಅವರು ವಿಧಾನಸೌಧಕ್ಕೆ ಹೋಗುತ್ತಾರೆ. ಯಾರು ಸೋಲುತ್ತಾರೋ ಅವರು ಮನೆಗೆ ಹೋಗುತ್ತಾರೆ. ಕ್ಷೇತ್ರಕ್ಕೆ ನೀವೇನೇನು ಮಾಡಿದ್ದೀರಿ ಎಂದು ನೀವು ಹೇಳಿ, ನಾವೇನೇನು ಮಾಡಿದ್ದೇವೆ ಎಂದು ನಾವು ಹೇಳುತ್ತೇವೆ ಎಂದು ಹೇಳುವ ಮೂಲಕ ಹೆಸರನ್ನು ಹೇಳದೇ ಕಾಂಗ್ರೆಸ್ ಮುಖಂಡರ ವಿರುದ್ಧ ನಿರಾಣಿ ವಾಗ್ದಾಳಿ ನಡೆಸಿದರು.

ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸುತ್ತಿರುವ ಕಂದಾಯ ಸಚಿವ ಆರ್. ಅಶೋಕ

ಡಿಸಿ ನಡೆ ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಗುರುಲಿಂಗೇಶ್ವರ ಪ್ರೌಢಶಾಲಾ ಆವರಣದಲ್ಲಿ ಗ್ರಾಮಸ್ಥರಿಂದ ಕಂದಾಯ ಸಚಿವ ಆರ್. ಅಶೋಕ್ ಅವರು ಅಹವಾಲು ಸ್ವೀಕರಿಸಿದರು. ಬಳಿಕ ಮಾತನಾಡಿದ ಸಚಿವರು ಕಾಂಗ್ರೆಸ್​​ ಗ್ಯಾರಂಟಿ ಕಾರ್ಡ್​ ಬಗ್ಗೆ ವ್ಯಂಗ್ಯವಾಡಿದರು. ಕಾಂಗ್ರೆಸ್​​ನವರು ಗ್ಯಾರಂಟಿ ಕಾರ್ಡ್ ಕೊಡತ್ತೇವೆ ಅಂತಾ ಹೇಳಿದ್ದಾರೆ, ಆದರೆ ಸಿಎಂ ಬೊಮ್ಮಾಯಿ ಅವರು ಯಜಮಾನಿ ಖಾತೆಗೆ ಪ್ರತಿ ತಿಂಗಳು 1 ಸಾವಿರ ಹಾಕುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ ಎಂದರು.

ನಾವು ಅಧಿಕಾರದಲ್ಲಿ ಇದ್ದೇ ಈ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ​​ ಅಧಿಕಾರಕ್ಕೆ ಬರುವ ಗ್ಯಾರಂಟಿ ಯಾರಿಗೆ ಇದೆ? ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಈ ಬಾರಿ ವೋಟ್ ಹಾಕಿ ದೇವರಾಣೆಗೂ ಮಾಡುತ್ತೇವೆ ಅಂತಾರೆ. 50 ವರ್ಷ ಅಧಿಕಾರ ಕೊಟ್ಟಿದ್ದಾಗ ಯೋಜನೆ ಜಾರಿ ಮಾಡಲಿಲ್ಲ. ಬಂದು ಚೆನ್ನಾಗಿ ಊಟ ಮಾಡಿ ಹೋಗಲುಕೆ ನಾವು ನೆಂಟರಲ್ಲ. ಈ ಮನೆ ಮಕ್ಕಳು ಎಂದರು. ದೇಶದಲ್ಲಿ ಪರಿವರ್ತನೆ ತರುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಕಾಶ್ಮೀರ ಗಲಾಟೆ ಇಲ್ಲ, ಇಲಿ ಹೊಡೆದಂಗೆ ಹೊಡದು ಹಾಕಿ ಬಿಟ್ಟಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 pm, Sat, 25 February 23