ವಿಧಾನ ಸಭಾ ಚುನಾವಣೆ ಹತ್ತಿರವಾಗ್ತಿದೆ (Karnataka Assembly Elections 2023). ರಾಜಕೀಯ ನಾಯಕರು ಮೈಕೊಡವಿ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡ್ತಿದ್ದಾರೆ. ಮತದಾರರನ್ನು ಸೆಳೆಯಲು ನಾನಾ ಸರ್ಕಸ್ಗಳನ್ನು ಮಾಡುತ್ತಿದ್ದಾರೆ. ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ 2ನೇ ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್, ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಇನ್ನು ಜೆಡಿಎಸ್ ಪಾಳೆಯದಲ್ಲಿ ಟಿಕೆಟ್ ಫೈಟ್ ತಾರಕಕ್ಕೇರಿದೆ. ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಸ್ವೀಕಾರಕ್ಕೆ ಹೆಚ್ಡಿ ರೇವಣ್ಣ ಮುಂದಾಗಿದ್ದು ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಿದ ಬಳಿಕ ಹಾಸನದಿಂದ ಕಣಕ್ಕಿಳಿಯಲು ಅಣಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಶುಕ್ರವಾರ ಬಜೆಟ್ ಇರಲಿದ್ದು ಬಜೆಟ್ ಮೂಲಕ ಮತದಾರರ ಮನಗೆಲ್ಲೋಕೆ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ಮಾಡಿಕೊಂಡಿದ್ದಾರೆ. ಬನ್ನಿ ರಾಜಕೀಯ ಪಕ್ಷಗಳ ಚುನಾವಣೆ ತಯಾರಿಯ ಕ್ಷಣ ಕ್ಷಣ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಬೆಂಗಳೂರು: ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೇಳಿಕೆ ಖಂಡಿಸಿ ನಾಳೆ (ಫೆ.17) ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ರೇಸ್ ಕೋರ್ಸ್ ರಸ್ತೆ ಕಾಂಗ್ರೆಸ್ ಭವನದಿಂದ ಮೆರವಣಿಗೆ ಹೊರಟು ಸಿಎಂ ಸರ್ಕಾರಿ ನಿವಾಸಕ್ಕೆ ಆಗಮಿಸಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹಾಗೂ ಬೆಂಗಳೂರು ದಕ್ಷಿಣ, ಉತ್ತರ ಕೇಂದ್ರ ಜಿಲ್ಲಾ ಅಧ್ಯಕ್ಷರುಗಳ ನೇತೃತ್ವದಲ್ಲಿ ಮುತ್ತಿಗೆ ನಡೆಯಲಿದೆ.
ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕೋಣ ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಸಚಿವರ ಕಚೇರಿ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಕಚೇರಿಯಿಂದ ಕೊಂಚ ದೂರದಲ್ಲೇ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರ ಮೂಲಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಯಾವಾಗ ಹೊಡೆಯುತ್ತೀರಿ ದಿನಾಂಕ ತಿಳಿಸಿ ಎಂಬ ಪತ್ರ ನೀಡಿ ಕಾರ್ಯಕರ್ತರು ಹೊರಟರು.
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಮತ ಬೇಟೆ ಮುಂದುವರೆದಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಸಮಾವೇಶ ನಡೆದಿದ್ದು, ರಮೇಶ್ ಜಾರಕಿಹೊಳಿ ಮೇಲೆ ಪುಷ್ಪಗಳನ್ನ ಸುರಿಸಿ ವೇದಿಕೆಗೆ ಅದ್ದೂರಿ ಸ್ವಾಗತ ಮಾಡಿದರು. ಬಿಜೆಪಿ ಪಕ್ಷದಲ್ಲಿದ್ದರೂ ರಮೇಶ್ ಜಾರಕಿಹೊಳಿ ಅವರು ಪಕ್ಷಾತೀತವಾಗಿ ಸಮಾವೇಶ ಮಾಡುತ್ತಿದ್ದು, ಆಪ್ತ, ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಮನ್ನೋಳ್ಕರ್ ಪರ ಪ್ರಚಾರ ನಡೆಸುತ್ತಿದ್ದಾರೆ. ರಮೇಶ್ ಅಭಿಮಾನಿ ಬಳಗದಿಂದ ಅಭಿಮಾನದ ಕಾರ್ಯಕರ್ತರ ಸಮಾವೇಶ ಹೆಸರಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಸಾವಿರಾರು ಜನ ಅಭಿಮಾನಿಗಳು, ಆಪ್ತರು ಭಾಗಿಯಾದರು. ಹೆಬ್ಬಾಳ್ಕರ್ ಸೋಲಿಸಲು ಪಣ ತೊಟ್ಟು ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ನಡೆಸಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ರಮೇಶ್ ಬೆಂಬಲಿಗರು ಬೃಹತ್ ಸಮಾವೇಶ ನಡೆಸಿದರು.
ರಾಜ್ಯಪಾಲರು ತಕ್ಷಣ ಸಂಪುಟದಿಂದ ಡಾ.ಅಶ್ವತ್ಥ ನಾರಾಯಣ ಅವರನ್ನು ವಜಾಗೊಳಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಟ್ವೀಟ್ ಮಾಡಿದ ಅವರು, ಅಶ್ವತ್ಥ್‌ಗೆ ಸಂಪುಟದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ಜನತೆಯ ಮಾನ-ಪ್ರಾಣ ರಕ್ಷಣೆಯ ಹೊಣೆ ರಾಜ್ಯ ಸರ್ಕಾರದ್ದಾಗಿದೆ. ಸಂಪುಟದ ಸಚಿವರು ತಾವೇ ಖುದ್ದಾಗಿ ಹತ್ಯೆಗೆ ಪ್ರಚೋದಿಸಿದರೆ ಹೇಗೆ? ಸಚಿವ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆ ಇರುತ್ತದೆ? ಇದು ಪ್ರಧಾನಿ, ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ? ಕೊಲೆಗಡುಕ ಮನಸ್ಥಿತಿಯ ಬಿಜೆಪಿ, ಕೊಲೆಗಡುಕ ಮನಸ್ಥಿತಿಯ ಅಶ್ವತ್ಥ್, ಇಂತಹವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೆ ನಾಲಾಯಕ್ ಎಂದರು.
ಗದಗ:ಉತ್ತರ ಕರ್ನಾಟಕದ ಬಿಸಿಲಿನಲ್ಲಿ ಪಕ್ಷದ ಕೆಲಸವನ್ನು ಮಾಡ್ತಾಯಿದ್ದೇವೆ, ಪಕ್ಷದ ಕೆಲಸವನ್ನು ಮಾಡಬೇಕಾದ್ರೆ, ಬಿಸಿಲು ಸೇರಿದಂತೆ ಹಲವು ಕಷ್ಟ ಎದುರಿಸಬೇಕಾಗುತ್ತದೆ, ಕಷ್ಟ ಸುಖವನ್ನು ಎದುರಿಸಿಯೇ ಪಕ್ಷವನ್ನು ಕಟ್ಟಬೇಕಾಗುತ್ತದೆ. ರಾಜ್ಯವನ್ನು ಕಟ್ಟಬೇಕಾಗುತ್ತದೆ, ಜನರನ್ನು ಒಂದು ಗೂಡಿಸಬೇಕಾಗುತ್ತದೆ, ಸಮಾಜವನ್ನು ಬದಲಾವಣೆ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ.
ಕಾರವಾರ: ಟಿಪ್ಪು ಸ್ವತಂತ್ರ ಹೋರಾಟಗಾರ, ಬ್ರಿಟಿಷ್‌ರ ವಿರುದ್ಧ ಹೋರಾಟ ಮಾಡಿದವರು. ಆದರೆ ಸಾವರ್ಕರ್ ಪೆನ್ಷನ್ ತೆಗೆದುಕೊಂಡ ಬ್ರಿಟಿಷರ ಗುಲಾಮ. ಹೀಗಾಗಿ ಟಿಪ್ಪುಗೂ, ಸಾವರ್ಕರ್‌ಗೂ ಹೋಲಿಕೆ ಮಾಡುವುದಕ್ಕೆ ಆಗುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಈ ಬಾರಿಯ ಚುನಾವಣೆ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಅವರ ವಾದ ಬೇಕಾ? ಅಥವಾ ಸಂವಿಧಾನ ಬೇಡ ಅಂತ ಹೇಳುವ ಸಾವರ್ಕರ್ ಅವರು ವಾದ ಬೇಕಾ? ಅಂತಾ ಜನ ತೀರ್ಮಾನ ಮಾಡುತ್ತಾರೆ ಎಂದರು. ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ್ ಅವರ ಮೆದುಳಿನ ಆರೋಗ್ಯ ಸರಿ ಇಲ್ಲ. ಅಸ್ವಸ್ಥ ನಾರಾಯಣ ಆಗಿದ್ದರಿಂದಲೇ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಸಚಿವ ಅಶ್ವಥ್ ನಾರಾಯಣ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ TV9 ಜೊತೆ ಪ್ರತಿಕ್ರಿಯಿಸಿದಿ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್, ಯಾವುದೇ ವಿಚಾರ ರಾಜಕೀಯ ಮಾಡುವ ಉದ್ದೇಶ ನಮಗಿಲ್ಲ. ಸೌಹಾರ್ದ ಸಮಾಜ ನಿರ್ಮಾಣ ಕಾಂಗ್ರೆಸ್ ಗೆ ಮುಖ್ಯ. ಬಿಜೆಪಿಯಲ್ಲಿ ಮೀರ್ ಸಾಧಿಕ್, ಗೋಡ್ಸೆ ವಂಶಸ್ಥರು ತುಂಬಾ ಜನ ಇದ್ದಾರೆ. ಅವರಿಗೆ ನೇರ ಫೈಟ್ ಮಾಡಲು ಗೊತ್ತಿಲ್ಲ. ಹಿಂದಿನಿಂದ ಹೋಗಿ ಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ನಾಳೆ ಗಲಾಟೆ ಆದಾಗ ಈ ಮಂತ್ರಿಗಳು, ಹೇಳಿಕೆ ಕೊಟ್ಟವರು ಯಾರೂ ಕೈಗೆ ಸಿಗುವುದಿಲ್ಲ. ಜೀವ ಹೋದವರು, ಜೈಲಿಗೆ ಹೋದವರು ನರಳಾಡುತ್ತಾರೆ ಅಷ್ಟೇ. ಮಂತ್ರಿಯೇ ಹೀಗೆ ಮಾತಾಡಿದರೆ ನಾವು ಇವರಿಗೆ ಬುದ್ದಿ ಹೇಳುವುದು ಏನಿದೆ? ಜನ ತಿರುಗಿ ಬಿದ್ದಿದ್ದಾರೆ ಎಂದು ಗೊತ್ತಾಗಿ ಮಾನಸಿಕ ಅಸಮತೋಲನದಿಂದ ಬಿಜೆಪಿಯವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಇಂದು ಅಶ್ವಥ್ ನಾರಾಯಣ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ತಪ್ಪು ಅರ್ಥ ಮಾಡಿಕೊಂಡು ಸಕಾರಾತ್ಮಕವಾಗಿ ಹೋಗುವುದಾದರೆ ಕಾಂಗ್ರೆಸ್ ಕೂಡಾ ಸಕಾರಾತ್ಮಕವಾಗಿ ಆಲೋಚನೆ ಮಾಡುತ್ತದೆ. ಈ ರೀತಿಯ ಜನರನ್ನು ಎತ್ತಿಕಟ್ಟುವ ಎಲ್ಲರಿಗೂ ಮೀರ್ ಸಾಧಿಕ್ ಹೇಳಿಕೆ ಅನ್ವಯಿಸುತ್ತದೆ. ಮಂತ್ರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ, ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ಕ್ಷಮೆ ಕೇಳಿರುವುದರಿಂದ ನಮ್ಮ ನಾಯಕರು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ದೆಹಲಿ: ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಪಾಲರ ಭಾಷಣದಲ್ಲಿ ರಿಪೋರ್ಟ್ ಕಾರ್ಡ್ ಮುಂದಿಡಲಾಗಿದೆ. ಪ್ರಣಾಳಿಕೆಯಲ್ಲಿ ಹೇಳದ ಅಂಶಗಳನ್ನೂ ನಮ್ಮ ಸರ್ಕಾರ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪರ ಅಲೆ ಇದೆ. 50 ಸಾವಿರ ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪಲಾಗಿದೆ. ಅಭಿವೃದ್ಧಿ, ಪಕ್ಷದ ನೀತಿ, ಕಾರ್ಯಗಳನ್ನು ಮುಂದಿಟ್ಟು ಮತ ಕೇಳುತ್ತೇವೆ. ಬಿಜೆಪಿ ಗೆ ಈ ಬಾರಿ ಸ್ಪಷ್ಟ ಬಹುಮತ ಕೊಡಿ ಎಂದು ನಮ್ಮ ವಿನಂತಿ ಎಂದರು.
ದೆಹಲಿ: ನಮ್ಮ ಬಿಜೆಪಿಯಲ್ಲಿ ಭ್ರಷ್ಟಾಚಾರ ಇಲ್ಲವೆಂದು ನಾನು ಹೇಳುವುದಿಲ್ಲ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಆಕಾಶ, ಭೂಮಿ, ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ ಕೀರ್ತಿ ಇದೆ. ಭ್ರಷ್ಟಾಚಾರದ ಬೀಜ ಬಿತ್ತಿದ್ದು ಕಾಂಗ್ರೆಸ್ ಪಕ್ಷದವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಭ್ರಷ್ಟಾಚಾರ ಆರೋಪದ ದಾಖಲೆ ಇದ್ದರೆ ಕೋರ್ಟ್ಗೆ ಹೋಗಲಿ. ಕಾಂಗ್ರೆಸ್ ಆಡಳಿತದಲ್ಲಿ ಯಾವ್ಯಾವ ನಾಯಕರು ಹಗರಣ ಮಾಡಿದ್ದಾರೆ ಎಂಬುದನ್ನು ರಣದೀಪ್ ಸಿಂಗ್ ಸುರ್ಜೇವಾಲ ನೋಡಲಿ ಎಂದರು.
ಚಿತ್ರದುರ್ಗ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರವಾಗಿ ಆಕ್ರೋಶಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗ ನಗರದಲ್ಲಿ ಪ್ರತಿಭಟನೆ ನಡೆಸಿದರು. ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಚಿವ ಅಶ್ವಥ್ ನಾರಾಯಣ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಕಿಡಿಕಾರಿದರು. ನಂತರ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಎನ್.ಅಶ್ವತ್ಥ್ ನಾರಾಯಣ ಅಲ್ಲ, ಮಾನಸಿಕ ಅಸ್ವಸ್ಥ ನಾರಾಯಣ ಎಂದು ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ಮಾನಸಿಕ ಅಸ್ವಸ್ಥ ನಾರಾಯಣರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಏಷ್ಯಾದ ಅತಿದೊಡ್ಡ ಮೆಂಟಲ್ ಆಸ್ಪತ್ರೆ ಬೆಂಗಳೂರು ನಗರದಲ್ಲಿದೆ. ಮೆಂಟಲ್ ಆಸ್ಪತ್ರೆಗೆ ದಾಖಲಿಸಿ ಮಾನಸಿಕತೆಯನ್ನು ಸರಿಪಡಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ನಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಜಮಗುಳಿ ಗ್ರಾಮಸ್ಥರು, ಊರಿಗೆ ಕಾಂಕ್ರೀಟ್ ರಸ್ತೆ ಮಾಡಿಸಿಕೊಡಿ, ಇಲ್ಲವಾದರೆ ಮತ ಕೇಳಬೇಡಿ ಎಂದು ಎಚ್ಚರಿಕೆಯ ಬ್ಯಾನರ್ ಹಾಕಿಸಿದ್ದಾರೆ. ಸರಿಯಾದ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ನರಕ ಅನುಭವಿಸುತ್ತಿದ್ದಾರೆ. ಕಾಂಕ್ರೀಟ್ ರಸ್ತೆ ನಿರ್ಮಿಸದಿದ್ದರೆ 2023ರ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಜಮಗುಳಿ ಗ್ರಾಮಸ್ಥರು ಒಗ್ಗಟ್ಟಿನಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಕೇಸ್ ದಾಖಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಬ್ಬರಕ್ಕೆ ಬಿಜೆಪಿ ಥಂಡಾ ಹೊಡೆದಿದೆ. ಒಂದೆಡೆ ಕಾಂಗ್ರೆಸ್, ಬಿಜೆಪಿಗೆ ಜೆಡಿಎಸ್ ಪಕ್ಷ ಟಕ್ಕರ್ ಕೊಡುತ್ತಿದೆ. ಮತ್ತೊಂದೆಡೆ ಜೆಡಿಎಸ್,ಕಾಂಗ್ರೆಸ್ಗೆ ಟಕ್ಕರ್ ಕೊಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಸ್ಪರ್ಧೆ ಗೊಂದಲ ನಿವಾರಣೆ ಬೆನ್ನಲ್ಲೇ ಬಿಜೆಪಿ ಥಂಡಾ ಹೊಡೆದಿದೆ. ಎರಡು ದಿನದಿಂದ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಕಾಣಸಿಗುತ್ತಿಲ್ಲ.
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಸಚಿವ ಅಶ್ವತ್ಥ್ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪ ಉತ್ತರಿಸಬೇಕು ಎಂದು ಮೈಸೂರು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಟಗರಾ? ತಲೆ ತೆಗೆಯಲು? ಆ ಬಚ್ಚಲು ವಿಚಾರ ಹೇಳಿ ನನ್ನ ಬಾಯಿ ಬಚ್ಚಲು ಮಾಡಿಸಿಕೊಳ್ಳುವುದಿಲ್ಲ. ಟಿಪ್ಪು ಬಗ್ಗೆ ರಾಷ್ಟ್ರಪತಿಗಳು ಸದನದಲ್ಲಿ ಏನು ಹೇಳಿದ್ದಾರೆಂಬ ದಾಖಲೆ ಇದೆ. ಸಚಿವ ಅಶ್ವತ್ಥ್ ನಾರಾಯಣ ಮಾತನಾಡಿದ ಬಗ್ಗೆ ಜನ ನಿರ್ಧಾರ ಮಾಡಲಿ ಎಂದರು.
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ತಮ್ಮ ಹೇಳಿಕೆಗೆ ಸಚಿವ ಡಾ.ಅಶ್ವತ್ಥ್ ನಾರಾಯಣ ವಿಷಾದ ವ್ಯಕ್ತಪಡಿಸಿದ್ದಾರೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಾನು ಇಂಥಹ ಹೇಳಿಕೆ ನೀಡಿದ್ದೇನೆ ಎಂದು ವಿಧಾನಸೌಧದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ರು. ಕಾಂಗ್ರೆಸ್ ಪಕ್ಷದವರು ಟಿಪ್ಪು ಸುಲ್ತಾನ್ನನ್ನು ವಿಜೃಂಭಿಸುತ್ತಿದ್ದಾರೆ. ರಾಜಕೀಯ ಹಾಗೂ ಸೈದ್ಧಾಂತಿಕವಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ನಾವು ಯಾವುದೇ ಯುದ್ಧದ ಕಾಲದಲ್ಲಿಲ್ಲ. ಚುನಾವಣೆ ಎಂಬ ಯುದ್ಧದಲ್ಲಿ ನಾವು ಗೆಲ್ಲಬೇಕು ಅಂತಾ ಹೇಳಿದ್ದೇನೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ಒಂದು ವೇಳೆ ಸಿದ್ದರಾಮಯ್ಯ ಮನಸ್ಸಿಗೆ ನೋವಾಗಿದ್ರೆ ವಿಷಾದಿಸುತ್ತೇನೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯವಾಗಿ ವಿರೋಧಿಸುತ್ತಿದ್ದೇನೆ ಹೊರತು ವೈಯಕ್ತಿಕವಾಗಿ ಅಲ್ಲ. ಸಿದ್ದರಾಮಯ್ಯನವರ ಹಾಗೇ ನಾನು ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಮೋದಿಯನ್ನು ನರಹಂತಕ, ಸಿಎಂರನ್ನು ನಾಯಿ ಮರಿಗೆ ಹೋಲಿಸಿದ್ದರು. ಜಾತಿ, ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸ ಮಾಡಿಲ್ಲಎಂದರು.
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಹೇಳಿಕೆಗೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಶ್ವತ್ಥ್ ಸಂಸ್ಕೃತಿ, ಅವರ ಹೃದಯದಲ್ಲಿರುವ ಮಾತು ಹೊರ ಬಂದಿದೆ. ಉತ್ಸಾಹದಲ್ಲಿ ಮಾತಾಡುವಾಗ ಕೆಲವೊಂದು ಸಲ ಸತ್ಯ ಹೊರ ಬರುತ್ತೆ. ಬಿಜೆಪಿಯವರ ಸಿದ್ಧಾಂತ ಬೇರೆ, ಅವರ ಮನಸ್ಸಿನಲ್ಲಿರೋದೆ ಬೇರೆ. ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತೆ ಎಂದರು.
ಚುನಾವಣೆಯಲ್ಲಿ ಗೆದ್ದು ನಾವು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ 15 ಜನರು ಸಿಎಂ ಅಭ್ಯರ್ಥಿಗಳು ಇದ್ದೇವೆ. ಬರುವ ಚುನಾವಣೆಯಲ್ಲಿ 135 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಒಗ್ಗಟ್ಟಾಗಿ ಕೆಲಸ ಮಾಡುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. 150 ಸ್ಥಾನಗಳನ್ನು ಗೆಲ್ಲಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದಲ್ಲಿ ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಡಾ.ಅಶ್ವತ್ಥ್ ನಾರಾಯಣ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹೊಡಿ ಬಡಿ ಎಂಬುದು ಬಿಜೆಪಿಯವರ ಸಂಸ್ಕೃತಿ. ಸಿದ್ದರಾಮಯ್ಯರನ್ನು ಮುಗಿಸಿ ಅಂದರೇ ಏನೂ ಅರ್ಥ ಇದು. ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮುಗಿಸಿ ಅಂದರೇ ಇದರರ್ಥ ಏನು? ಪ್ರಧಾನಮಂತ್ರಿ ಮೋದಿ, ಅಮಿತ್ ಶಾ ಈ ಬಗ್ಗೆ ಪ್ರತಿಕ್ರಿಯೆ ನೀಡಲಿ. ಇದು ಸರೀನಾ, ತಪ್ಪು ಅಂತಾ ಪ್ರಧಾನಿ ಮೋದಿ, ಅಮಿತ್ ಶಾ ಹೇಳಲಿ. ಕೂಡಲೇ ಸಚಿವ ಡಾ.ಅಶ್ವತ್ಥ್ ನಾರಾಯಣ ವಜಾಗೊಳಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ ಎಂಬ ಸಚಿವ ಡಾ.ಅಶ್ವತ್ಥ್ ಬಳಸಿರುವ ಪದ ಗೂಂಡಾ ಸಂಸ್ಕೃತಿ ತೋರಿಸುತ್ತೆ ಎಂದು ಹುಬ್ಬಳ್ಳಿ ನಗರದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಕೂಡಲೇ ಸಚಿವ ಡಾ.ಅಶ್ವತ್ಥ್ ನಾರಾಯಣರನ್ನು ವಜಾಗೊಳಿಸಬೇಕು. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಭಾಷೆ ಸರಿಯಿಲ್ಲ. ಅಶ್ವತ್ಥ್ ನಾರಾಯಣ ಸೇರಿ ಬಿಜೆಪಿಯ ಅನೇಕರು ಕೆಟ್ಟ ಪದ ಬಳಸ್ತಾರೆ. ಮಂತ್ರಿಯಾಗಿ ಹೀಗೆ ಮಾತನಾಡುವುದು ಅಸಭ್ಯ, ಗೂಂಡಾ ಸಂಸ್ಕೃತಿ. ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೆಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಕೋಲಾರ ಕ್ಷೇತ್ರದ ಅಹಿಂದ ರಿಪೋರ್ಟ್ ಬಳಿಕ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ಕೆಹೆಚ್ ಮುನಿಯಪ್ಪ ಜೊತೆಗೆ ಸಿದ್ದರಾಮಯ್ಯ ಆ್ಯಂಡ್ ಟೀಂ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಕೋಲಾರ ಗೆಲುವಿಗೆ ಕೈ ಜೋಡಿಸುವ ಕುರಿತು ಸಿದ್ದರಾಮಯ್ಯ ಮುನಿಯಪ್ಪ ಚರ್ಚೆಯಾಗಿದೆ. ದೇವನಹಳ್ಳಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಮುನಿಯಪ್ಪ ಚಿಂತಿಸಿದ್ದಾರೆ. ಮುನಿಯಪ್ಪಗೆ ದೇವನಹಳ್ಳಿ ಬದಲು ಬೆಂಗಳೂರು ನಗರದ ಒಂದು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಸಮಾಲೋಚನೆ ನಡೆದಿದೆ. ಮಹದೇವಪುರ, ಸಿವಿ ರಾಮನ್ ನಗರ ಅಥವಾ ಪುಲಿಕೇಶಿನಗರದಲ್ಲಿ ಮುನಿಯಪ್ಪ ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿದೆ.
ಸಿಎಂ ಬೊಮ್ಮಾಯಿ ವಿರುದ್ಧ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಬ್ರ್ಯಾಂಡ್ ಕ್ರಿಯೇಟ್ ಮಾಡಿದೆ. ಭ್ರಷ್ಟಾಸುರ ಬೊಮ್ಮಾಯಿ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಪ್ರಣಾಳಿಕೆಯ 650 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಅದು ಮಾಡಲಿಲ್ಲ. ಮಹಿಳೆಯರ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಯುವಕರಿಗೆ ರಾಜ್ಯ ಸರ್ಕಾರ ಉದ್ಯೋಗ ನೀಡುವ ಕೆಲಸ ಮಾಡಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಭಾಗದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಸಭೆಯಲ್ಲಿ ನಾರಾಯಣಗೌಡ ಕಾಂಗ್ರೆಸ್ ಸೇರುವ ವಿಚಾರ ಪ್ರಸ್ತಾಪವಾಗಿದ್ದು, ಅವರ ಹೆಸರು ಕೇಳುತ್ತಿದ್ದಂತೆಯೇ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಂತೆಯೇ ಅವರ ಶಿಷ್ಯನಿಗೆ ಸಂಕಷ್ಟ ಎದುರಾಗಿದೆ. ಮಾಜಿ ಶಾಸಕ ಅಶೋಕ ಪಟ್ಟಣಗೆ ಟಿಕೆಟ್ ನೀಡದಂತೆ ಭಿನ್ನರು ಪಟ್ಟು ಹಿಡಿದಿದ್ದಾರೆ.
ಸವಣೂರ ಶಿಗ್ಗಾಂವಿ ಕ್ಷೇತ್ರದ 100 ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಹುಬ್ಬಳ್ಳಿಯ ಫಾರ್ಚೂನ್ ಹೊಟೆಲ್ನಲ್ಲಿ ಈ ಭೇಟಿ ನಡೆದಿದೆ. ಬಸವರಾಜ ಬೊಮ್ಮಾಯಿ ವಿರುದ್ದ ಶಶಿಧರ ಎಲಿಗಾರ್ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯಗೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದ್ದಾರೆ.
ವಿಜಯನಗರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಸಚಿವ ಆನಂದ್ ಸಿಂಗ್ ಟಕ್ಕರ್ ಕೊಟ್ಟಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅಡ್ಡಿಯಾಗಲ್ಲ. ಯಾರಾದ್ರೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಬಹುದು. ನಾನು ಕಾಂಗ್ರೆಸ್ ಟಿಕೆಟ್ ಪ್ರಯತ್ನ ಮಾಡುತ್ತಿದ್ದೇನೆ ಅಂತ ಹೇಳೋದ್ರೆ ಅದು ಕೇವಲ ಊಹಾಪೋಹ. ನಾನು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಹೋದ್ರೆ, ನನ್ನ ತಾಯಿಗೆ ದ್ರೋಹ ಮಾಡಿದ ಹಾಗೆ. ನನ್ನ ಹೆಸರು ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಿರೋ ಬಿಜೆಪಿ ಪಕ್ಷ ಮತ್ತು ಯಡಿಯೂರಪ್ಪ ಅವರಿಗೆ ನಾನು ದ್ರೋಹ ಮಾಡಿದ ಹಾಗೆ. ನಾನು ಬಿಜೆಪಿ ಬಿಟ್ಟು ಹೋಗಿದ್ದೇನೆ ಅಂದ್ರೆ ನನ್ನ ತಾಯಿನೇ ನನಗೆ ಮುಖದ ಮೇಲೆ ಥೂ ಅಂತ ಉಗುಳುತ್ತಾಳೆ. ನಾನು ಬಿಜೆಪಿ ಪಕ್ಷದಲ್ಲೇ ಮುಂದುವರೆಯುತ್ತೇನೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗೋಲ್ಲಾ. ಕಾಂಗ್ರೆಸ್ ಟಿಕೆಟ್ ಪಡೆಯೋರು ಧಾರಾಳವಾಗಿ ಟಿಕೆಟ್ ಪಡೆದುಕೊಳ್ಳಲಿ ಎಂದುಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. 113ಕ್ಕಿಂತ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಅಂತಾ ಬೇರೆ ಇಲ್ಲ. ಕಾಂಗ್ರೆಸ್‌ನಲ್ಲಿ ಜಾತಿಯಾಧಾರಿತ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ. ಆ ಸಂದರ್ಭಕ್ಕೆ ಯಾರು ಸಮರ್ಥರಿದ್ದಾರೆ ಅವರನ್ನು ಆಯ್ಕೆ ಮಾಡ್ತೀವಿ. ಪಕ್ಷದ ಧ್ಯೇಯೋದ್ದೇಶ ಮುನ್ನಡೆಸುವ ಸಾಮರ್ಥ್ಯ ಇದ್ದವರನ್ನು ಆಯ್ಕೆ ಮಾಡಲಾಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್ನಲ್ಲಿದ್ದಾರೆ. ಅದರಲ್ಲಿ ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ. ಆದರೆ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ವಿಧಾನ ಸಭಾ ಚುನಾವಣಾ ಹಿನ್ನೆಲೆ ಕೆಆರ್ ನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಪತಿಯರ ಗೆಲುವಿಗಾಗಿ ಪತ್ನಿಯರು ಫೀಲ್ಡಿಗಿಳಿದಿದ್ದಾರೆ. ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಮಾಜಿ ಸಚಿವ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಪತ್ನಿ ಅನಿತಾ ಮಹೇಶ್ ಪ್ರಚಾರ ಮಾಡುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಪರ ಪತ್ನಿ ಸುನೀತಾ ರವಿಶಂಕರ್ ಪ್ರಚಾರಕ್ಕೆ ಇಳಿದಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ರವಿಶಂಕರ್.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮಕ್ಕೆ ಮುಂದಾಗಿದೆ. ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ನೇತೃತ್ವದಲ್ಲಿ ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ಮಾಡಲಾಗುತ್ತಿದೆ. ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾನ್ಹವಿ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಹಾಸನದ ಜೆಡಿಎಸ್ ಅಭ್ಯರ್ಥಿ ಯಾರು ಎನ್ನೋ ಕುತೂಹಲದ ನಡುವೆ ನಗರದಲ್ಲಿ ಸ್ವರೂಪ್ ಪ್ರಕಾಶ್ ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಇಂದು ಹಾಸನಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿ ನಗರದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ತಮ್ಮ ನೂರಾರು ಬೆಂಬಲಿಗರ ಜೊತೆ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮೂಲಕ ಮತದಾರರ ಮನಗೆಲ್ಲೋಕೆ ಹೊರಟಿದ್ದಾರೆ. ಬಡವರು, ರೈತರು, ಮಧ್ಯಮ ಹಾಗೂ ದುಡಿಯುವ ವರ್ಗದವರಿಗೆ ಬೊಮ್ಮಾಯಿ ಗಿಫ್ಟ್ ಕೊಡುವ ನಿರೀಕ್ಷೆ ಇದೆ. ಬಜೆಟ್ನಲ್ಲಿ ಕುಲ ಕಸುಬುಗಳ ಆಧಾರಿತ ಸಮುದಾಯದ ನಿಗಮ ಮಂಡಳಿ ಘೋಷಣೆಯಾಗಬಹುದು ಎನ್ನಲಾಗುತ್ತಿದೆ. ಕುಲಕಸುಬ ಆಧಾರಿತ ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಛಿಸುವವರಿಗೆ 50 ಸಾವಿರ ಪ್ರೋತ್ಸಾಹ ಧನ ನೀಡುವ ನಿರೀಕ್ಷೆ ಇದೆ.
ಬಿಜೆಪಿಯ ಮಾಜಿ ಶಾಸಕ ಜೆಡಿಎಸ್ ಸೇರೋದು ಬಹುತೇಕ ಫಿಕ್ಸ್ ಆಗಿದೆ. ಹುಬ್ಬಳ್ಳಿ ಧಾರವಾಡ ಪೂರ್ವ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಜೆಡಿಎಸ್ ಸೇರಲಿದ್ದಾರೆ. ಇದೇ 18 ಅಥವಾ 19 ರಂದು ಕಮಲ ಬಿಟ್ಟು ತೆನೆ ಹೊರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಭಾಕರ್ ಚಿಣಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ್ ಸುರಾನ ನೇತೃತ್ವದಲ್ಲಿ ಬಿಜೆಪಿ ಬಾವುಟ ಹಿಡಿದಿದ್ದಾರೆ. ಪ್ರಭಾಕರ್ ಚಿಣಿ, ಕೃಷ್ಣ ಜಲಭಾಗ್ಯ ನಿಗಮದ ಎಂಡಿಯಾಗಿ ನಿವೃತ್ತಿಯಾಗಿದ್ದಾರೆ. ಕುಷ್ಟಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ಆದ್ರೆ ಈಗ ಬಿಜೆಪಿ ಸೇರಿದ್ದಾರೆ.
ಕಾರ್ಯಕರ್ತರು, ಮುಖಂಡರ ಸರಣಿ ಸಭೆ ಬಳಿಕ ಹಾಸನದಿಂದ ಸ್ಪರ್ಧೆ ಮಾಡಲು ರೇವಣ್ಣ ಮುಂದಾಗಿದ್ದಾರೆ. ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಸ್ವೀಕಾರಕ್ಕೆ ರೆಡಿಯಾಗಿದ್ದಾರೆ. ಹೈಕಮಾಂಡ್ ಒಪ್ಪಿದರೆ ಈ ಸವಾಲು ಸ್ವೀಕಾರಕ್ಕೆ ನಾನ್ ರೆಡಿ ಎಂದು ರೇವಣ್ಣ ಹೇಳಿದ್ದರು. ಹೈ ಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಸರಣಿ ಸಭೆ ನಡೆಸಿದ್ದ ರೇವಣ್ಣ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹದ ಬಳಿಕ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯಲು ಸಿದ್ದರಾಗಿದ್ದಾರೆ.
ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ 2ನೇ ಹಂತದ ಕಾರ್ಯಕ್ರಮ ಆಯೋಜನೆ ಮಾಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್, ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿ ಹಲವರು ಭಾಗಿಯಾಗಲಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.
Published On - 9:13 am, Thu, 16 February 23