Siddaramaiah: ಮಾನಸಿಕ ಅಸ್ವಸ್ಥನಾದ ಅಶ್ವಥ್ ನಾರಾಯಣ: ಸಿದ್ದರಾಮಯ್ಯ ವಾಗ್ದಾಳಿ

ಅಶ್ವತ್ಥ್ ನಾರಾಯಣ ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪುನಂತೆ ಸಿದ್ದರಾಮಯ್ಯನನ್ನೂ ಹೊಡೆದು ಹಾಕಬೇಕು ಎಂಬ ಅಶ್ವತ್ಥ್ ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದರು.

Follow us
| Updated By: ಗಣಪತಿ ಶರ್ಮ

Updated on:Feb 16, 2023 | 10:14 AM

ಬಾಗಲಕೋಟೆ: ಅಶ್ವತ್ಥ್ ನಾರಾಯಣ (Ashwath Narayan) ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪುನಂತೆ ಸಿದ್ದರಾಮಯ್ಯನನ್ನೂ ಹೊಡೆದು ಹಾಕಬೇಕು ಎಂಬ ಅಶ್ವತ್ಥ್ ನಾರಾಯಣ ಹೇಳಿಕೆಗೆ ಜಿಲ್ಲೆಯ ಕಲಾದಗಿಯ ಪ್ರಜಾಧ್ವನಿ ಸಮಾವೇಶದಲ್ಲಿ ತಿರುಗೇಟು ನೀಡಿದರು. ಸಿದ್ದರಾಮಯ್ಯನನ್ನು ಟಿಪ್ಪುನಂತೆ ಹೊಡೆದು ಹಾಕಬೇಕು ಅಂದ್ರಂತೆ ಅಶ್ವತ್ಥ್.​ ನನ್ನನ್ನು ಹೊಡೆದು ಹಾಕಲು ನೀವು ಬಿಡ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನು ಟಿಪ್ಪು, ಬಸವಣ್ಣ, ಸಂಗೊಳ್ಳಿ ರಾಯಣ್ಣ ಎಲ್ಲರನ್ನೂ ಗೌರವಿಸುತ್ತೇನೆ. ನಾನು ಮನುಷ್ಯತ್ವ ಇರುವವನು, ಎಲ್ಲರೂ ಸಮಾನರೆಂದು ಭಾವಿಸುವೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಸೇರಿದಂತೆ ಎಲ್ಲರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದರು.

ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದವರನ್ನು ಬೆಂಬಲಿಸುವ ಪಕ್ಷದ ಅಶ್ವತ್ಥ್ ನಾರಾಯಣ ಅವರಿಂದ ಇಂಥ ಹೇಳಿಕೆ ಮೂಡಿಬಂದಿರುವುದರಿಂದ ಅಚ್ಚರಿಯಿಲ್ಲ. ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ಸಚಿವರ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಅವರ ಸರ್ಕಾರ ನಿದ್ರಿಸುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಅಶ್ವತ್ಥ್ ನಾರಾಯಣ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಏಕವಚನದಲ್ಲಿ ಟ್ವೀಟ್ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಸರ್ಕಾರ ವಚನ ಭ್ರಷ್ಟ ಸರಕಾರ 

ಇನ್ನು ಸಿಎಂ ಬೊಮ್ಮಾಯಿ ಸರಕಾರ ಮನೆಗೆ ಕಳಿಸೋದಕ್ಕೆ ಜನ ಕಾಯ್ತಾ ಇದಾರೆ. ನಾನು ಅನೇಕ ಸರಕಾರ, ಸಿಎಂ ನೋಡಿದ್ದೇನೆ. ಈ ಬಿಜೆಪಿ ಸರಕಾರದಂತ ಭ್ರಷ್ಟ ಸರಕಾರ, ವಚನ ಭ್ರಷ್ಟ ಸರಕಾರ, ದಲಿತರು, ಬಡವರ, ಮಹಿಳೆಯರು, ಇವರಿಗೆ ವಿರುದ್ಧವಾದ ಕೆಟ್ಟ ಸರಕಾರ ನೋಡಿಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಅಂತ ಪಿಸುಗುಡೋಕೆ ಶುರು ಮಾಡಿವೆ. ಇವರ ಭ್ರಷ್ಟಾಚಾರ ಆ ಮಟ್ಟಿಗೆ ಇದೆ. ಯಾವುದೇ ಕಚೇರಿಗೆ ಹೋಗಲಿ ಬರಿ ಲಂಚ ಎನ್ನುತ್ತಾರೆ ಎಂದು ಕಿಡಿಕಾರಿದರು.

ಇದನ್ನೂಓದಿ: ರಾಜ್ಯದಲ್ಲಿ ಪ್ರವಾಹ, ಕೊರೊನಾ ವೇಳೆ ಪ್ರಧಾನಿ ಮೋದಿ ಬರಲಿಲ್ಲ, ಚುನಾವಣೆ ಹಿನ್ನೆಲೆ ಮೇಲಿಂದ ಮೇಲೆ ಬರ್ತಾರೆ: ಸಿದ್ಧರಾಮಯ್ಯ

ಕಬ್ಬಿನ ತೂಕದಲ್ಲಿ ಸಚಿವ ನಿರಾಣಿ ಮೋಸ ಮಾಡಿದ್ದಾರೆ ಎಂದ ಸಿದ್ಧರಾಮಯ್ಯ 

ಕಬ್ಬಿನ ತೂಕದಲ್ಲಿ ಮೋಸಮಾಡಿ ಸಚಿವ ನಿರಾಣಿ ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಲೂಟಿ ಹೊಡೆದ ಹಣದಲ್ಲಿ ಮತದಾರರಿಗೆ 5 ಕೆಜಿ ಸಕ್ಕರೆ ಕೊಡ್ತಿದ್ದಾರೆ. ಈ ಮೂಲಕ ನಿರಾಣಿ ಮತ ಪಡೆಯುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಸೋಲುವುದು ಗೊತ್ತಾಗಿ ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ. ಯುಕೆಪಿ ಸಂತ್ರಸ್ತರಿಗೆ ಸಚಿವ ನಿರಾಣಿ ಏನು ಸಹಾಯ ಮಾಡಿದ್ದೀರಿ. ಅಧಿಕಾರಕ್ಕೆ ಬಂದು 4 ವರ್ಷ ಆಯ್ತು, ಏನಾದ್ರು ಸಹಾಯ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬಂದರೆ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಅಂದರು. ಅವರು 4 ವರ್ಷಗಳಲ್ಲಿ ಖರ್ಚು ಮಾಡಿದ್ದು ಕೇವಲ 45 ಸಾವಿರ ಕೋಟಿ ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಇಲ್ಲ, ಜನರಿಗೆ ಬಿಪಿಎಲ್​ ಕಾರ್ಡ್ ಇಲ್ಲ: ಇದು ಬಿಜೆಪಿ ಸರ್ಕಾರದ ಬೀಳ್ಕೊಡಿಗೆ ಭಾಷಣ ಎಂದ ಖಾದರ್

ಬಿಜೆಪಿಯವರು ಅಂಬಾನಿ, ಅದಾನಿಯಿಂದಲೇ ಮತ​ ಹಾಕಿಸಿಕೊಳ್ಳಲಿ

ರಸಗೊಬ್ಬರ, ಗ್ಯಾಸ್, ಅಡುಗೆಎಣ್ಣೆ, ಪೆಟ್ರೋಲ್, ಡೀಸೆಲ್​ ದರ ಹೆಚ್ಚಾಗಿದೆ. ರೈತರ ಸಾಲ ದುಪ್ಪಟ್ಟು ಆಯ್ತು ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ. ತೇಜಸ್ವಿ ಸೂರ್ಯ ಎಂಬುವನು ಒಬ್ಬ ಸಂಸದ ಇದ್ದಾನೆ. ರೈತರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗಿ ಹೋಗುತ್ತೆ ಅಂತಾನೆ. ಉದ್ಯಮಿಗಳಾದ ಅಂಬಾನಿ, ಅದಾನಿಯ ಕೋಟಿ ಕೋಟಿ ಸಾಲಮನ್ನಾ ಪ್ರಧಾನಿ ಮೋದಿ ಈ ಇಬ್ಬರು ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆ. ಬಿಜೆಪಿಯವರು ಅಂಬಾನಿ, ಅದಾನಿಯಿಂದಲೇ ಮತ​ ಹಾಕಿಸಿಕೊಳ್ಳಲಿ. ನೀವು ಕಾಂಗ್ರೆಸ್​​ ಅಭ್ಯರ್ಥಿಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:56 pm, Wed, 15 February 23