Karnataka Assembly Elections 2023, ಚುನಾವಣೆ ಹತ್ತಿರವಾಗ್ತಿದ್ದಂತೆ ಮತದಾರ ಪ್ರಭುವನ್ನ ಸೆಳೆಯೋಕೆ ರಾಜಕೀಯ ಪಕ್ಷಗಳು ಸಖತ್ ಪ್ಲಾನ್ ಗಳನ್ನ ಮಾಡುತ್ತಿವೆ. ಈಗಾಗಲೇ ಕೈ ಪಡೆ ಪುಕ್ಕಟ್ಟೆ ನೀಡುವ ಸ್ಕೀಂಗಳ ಬಗ್ಗೆ ಮಾತಾಡುತ್ತಿದ್ರೆ, ನಾವೂ ಬದುಕಿನ ಭರವಸೆ ಕೊಡುವ ಮ್ಯಾನಿಫೆಸ್ಟೋ ಕೊಡ್ತಿವಿ ಅಂತಿದೆ ಕೇಸರಿ ಪಡೆ. ಬಿಜೆಪಿ ಪ್ರಣಾಳಿಕೆ ಅಭಿಯಾನ ಸಮಿತಿಯ ಮೊದಲ ಸಭೆಯು ನಿನ್ನೆ ಬಿಜೆಪಿಯ ಕೇಂದ್ರ ಕಚೇರಿ ಜಗನ್ನಾಥ್ ಭವನದಲ್ಲಿ ನಡೆದಿದೆ. ಸದ್ಯ ಇಂದು ಕೇಂದ್ರ ಸಚಿವ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಮತ್ತೊಂದೆಡೆ ‘ಕೈ’ ಪ್ರಜಾಧ್ವನಿ ಯಾತ್ರೆ ವಿಜಯಪುರ ಜಿಲ್ಲೆಗೆ ತಲುಪಿದ್ದು ಇಂದು ಮೂರು ಕಡೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಇನ್ನು ಬೆಳಗಾವಿಯಲ್ಲಿ ಎರಡನೇ ದಿನವೂ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರೆಸಿದೆ. ಬನ್ನಿ ಈ ದಿನದ ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಅಪ್ಡೇಟ್ಸ್ಗಳನ್ನು ಟಿವಿ9 ಕನ್ನಡ ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿನ ವಿಮಾನ ನಿಲ್ದಾಣದಿಂದಅರ್ಧ ಕಿಮೀ ರೋಡ್ ಶೋ ಮಾಡುವ ಮೂಲಕ ಮೂಲಕ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ತಲುಪಿದರು. ಅಮಿತ್ ಶಾ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಮಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಮಂಗಳೂರಿನ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಜೆಪಿ ಮುಖಂಡರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು ಕಾರ್ಯಕ್ರಮ ಮುಗಿಸಿ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದು, ಏರ್ಪೋರ್ಟ್ನಿಂದ ಶ್ರೀದೇವಿ ಕಾಲೇಜಿನವರೆಗೆ ಅರ್ಧ ಕಿಲೋಮೀಟರ್ ರೋಡ್ಶೋ
ನಡೆಸಲಿದ್ದಾರೆ.
ಕೋಲಾರ: ಕೋಲಾರ ಡಿಸಿಸಿ ಬ್ಯಾಂಕ್ನ ಭ್ರಷ್ಟಾಚಾರದ ಪಿತಾಮಹ ವಿಪಕ್ಷ ನಾಯಕ ಸಿದ್ದರಾಮಯ್ಯ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಮುಚ್ಚಿಹಾಕಲು ಸಿದ್ದರಾಮಯ್ಯ ಅವರ ಪ್ರಭಾವಿದೆ. ಸಹಕಾರಿ ಸಚಿವ ಸೋಮಶೇಖರ್ ಅವರಿಗೆ ಸಿದ್ದರಾಮಯ್ಯ ಒತ್ತಡ ಹಾಕಿ ಅವ್ಯವಹಾರವನ್ನು ಮುಚ್ಚಿಹಾಕುವಲ್ಲಿ ಕುಮ್ಮಕ್ಕು ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಸಿದ್ದರಾಮಯ್ಯ ಅವರಿಗೆ ಕೋಲಾರ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಿಂದ ಕೊಡುಗೆ ನೀಡಲಾಗಿದೆ ಎಂದರು.
ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಫೆ.13 ರಂದು ವೇಮಗಕಲ್ನಲ್ಲಿ ಮಹಿಳಾ ಸಮಾವೇಶ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಕೊಡುಗೆ ಕೊಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್ನಲ್ಲಿ ಸುಮಾರು ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ರೇಷ್ಮೆ ಸೀರೆ, ಚಿನ್ನದ ಮೂಗುತಿ, ತಲಾ ಐದುನೂರು ರೂಪಾಯಿ ಕೊಡುಗೆ ನೀಡಲಾಗುತ್ತದೆ. ಸ್ವಸಹಾಯ ಸಂಘಗಳ ಸಭೆ ಮಾಡಿ ಮೌಕಿಕ ಆದೇಶ ನೀಡಿ ಕಾರ್ಯಕ್ರಮಕ್ಕೆ ಮಹಿಳೆಯನ್ನು ಸೇರಿಸಲಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ನಾಚಿಕೆಯಾಗುವುದಿಲ್ಲವೆ, ಸಿದ್ದರಾಮಯ್ಯ ಅವರೇ ನೀವು ಅನ್ನರಾಮಯ್ಯ ಅಲ್ಲವೆ, ಜನ ಅಭಿಮಾನದಿಂದ ಸೇರಬೇಕಲ್ಲವೆ, ದುಡ್ಡು, ಹಣ, ಸೀರೆ, ಕೊಟ್ಟು ಜನ ಸೇರಿಸಬೇಕೆ ಎಲ್ಲಿ ಹೋಯಿತು ನಿಮ್ಮ ವರ್ಚಸ್ಸು ? ಎಂದು ಪ್ರಶ್ನೆ ಮಾಡಿದ್ದಾರೆ.
ಶೀಘ್ರದಲ್ಲೇ ಕೋಲಾರ ಡಿಸಿಸಿ ಬ್ಯಾಂಕ್ನ ಅವ್ಯವಹಾರ ತನಿಖೆ ನಡೆದು ಫೈಲ್ ವಿಧಾನಸೌಧದ ಮೂರನೇ ಮಹಡಿಗೆ ಬಂದಿದೆ. ಬಿಹಾರದಲ್ಲಿ ಲಾಲೂ ಪ್ರಸಾಧ್ ಯಾದವ್ ಮೇವು ಹಗರಣದಂತೆ ಇಲ್ಲೂ, ಅಧ್ಯಕ್ಷರು ಜೈಲಿಗೆ ಹೋಗೋದು ಖಚಿತ. ನಿಮ್ಮ ಪಾಪದ ಕೊಡ ತುಂಬಿದೆ, ವಿಧಾನಸಭೆ ಚುನಾವಣೆಗೆ ಮುನ್ನವೆ ಜೈಲಿಗೆ ಹೋಗೋದು ಖಚಿತ. ಪ್ರತಿ ತಿಂಗಳು ಸಹಕಾರಿ ಸಂಘಗಳಿಗೆ ನೀಡುವ ಸಾಲ ಮರುಪಾವತಿಯಲ್ಲಿ ಬಡ್ಡಿ ಕ್ಲೈಮ್ ಹಣ ಲೂಟಿಯಾಗಿದೆ. ಅಧ್ಯಕ್ಷ ಗೋವಿಂದಗೌಡ ಪ್ರತಿ ತಿಂಗಳು ಸುಮಾರು 7 ಕೋಟಿಯಷ್ಟು ಹಣ ಲೂಟಿ ಮಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು: ಟಿಪ್ಪುವನ್ನು ಆರಾಧನೆ ಮಾಡುವ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಮತ ನೀಡಬೇಡಿ, ರಾಣಿ ಅಬ್ಬಕ ಳನ್ನು ಆರಾಧಿಸುವ ನಮಗೆ ಮತ ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ ಯಾಚಿಸಿದರು.
ದಕ್ಷಿಣ ಕನ್ನಡ: ಆಧುನಿಕ ಉಕ್ಕಿನ ಮನುಷ್ಯ ಎಂದು ಅಮಿತ್ ಶಾರನ್ನು ಸಿಎಂ ಬೊಮ್ಮಾಯಿ ಸಂಬೋಧಿಸಿದರು. ಕ್ಯಾಂಪ್ಕೋ ಸಂಸ್ಥೆ 50 ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕ್ಯಾಂಪ್ಕೋ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಗೂ ಅಭಿನಂದನೆ. ಸಹಕಾರ ಇಲಾಖೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುತ್ತದೆ. ಕ್ಯಾಂಪ್ಕೋನಿಂದ 26 ಸಾವಿರ ಮೆಟ್ರಿಕ್ ಟನ್ ಚಾಕೋಲೆಟ್ ಉತ್ಪಾದನೆ ಮಾಡಲಾಗುತ್ತದೆ ಎಂದರು.
ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಮಾಜಿ ಸಿಎಂ ಬಿಎಸ್‌ವೈ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಮಾಜಿ ಸಿಎಂ ಬಿಎಸ್‌ವೈ ಹೇಳಿದರು.
ದಕ್ಷಿಣ ಕನ್ನಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಮಿತ್ ಶಾ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ.
ಮಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅಮರಗಿರಿ ಮಂದಿರ ಉದ್ಘಾಟಿಸಿ ಹೆಲಿಪ್ಯಾಡ್ಗೆ ಆಗಮಿಸಿದ್ದು, ಶಾ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಲಿಕಾಪ್ಟರ್ ಹತ್ತಿದ್ದಾರೆ.
ಮಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಕರಾವಳಿ ಪುತ್ತೂರು ತಾಲೂಕಿನ ಅಮರಗಿರಿಯಲ್ಲಿನ ಭಾರತ್ ಮಾತಾ ಮಂದಿರಕ್ಕೆ ಭೇಟಿ ನೀಡಿ ಭಾರತ ಮಾತಾ ಮಂದಿರವನ್ನು ಉದ್ಘಾಟಿಸಿದ್ದಾರೆ. ಹನುಮಗಿರಿ ಪಂಚಮುಖಿ ಅಂಜನೇಯ ಕ್ಷೇತ್ರದ ಪಕ್ಕದಲ್ಲೇ ಇರುವ ಭಾರತ ಮಾತಾ ಮಂದಿರವನ್ನು ಸುಮಾರು 2.5 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿದ್ದು, ಪುತ್ತೂರಿನ ಹನುಮಗಿರಿಯ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನ ಹೆಲಿಪ್ಯಾಡ್ ನಿಂದ 100 ಮೀಟರ್ ದೂರದಲ್ಲಿದೆ. ದೇವಸ್ಥಾನದ ಸುತ್ತ ಬಿಗಿ ಪೊಲೀಸ್ ಭದ್ರತೆ ಇದೆ. ಆಂಜನೇಯನ ದರ್ಶನ ಬಳಿಕ ಅಮಿತ್ ಶಾ ಅಮರಗಿರಿ ಮಂದಿರ ಉದ್ಘಾಟಿಸಲಿದ್ದಾರೆ.
ಧಾರವಾಡ: ಧಾರವಾಡ ಜಿಲ್ಲೆಯ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ. ಬಿಜೆಪಿ ಶಾಸಕರು ನಮ್ಮ ನಾಯಕರನ್ನು ಸ್ಪಂಪರ್ಕಿಸಿರುವ ಮಾಹಿತಿ ಇದೆ. ಆದರೆ ಆ ಬಿಜೆಪಿ ಶಾಸಕ ಯಾರು ಅನ್ನೋದು ನಮ್ಮ ವರಿಷ್ಠರಿಗೆ ಗೊತ್ತು. ಜಿಲ್ಲೆಗೆ ನಮ್ಮ ವರಿಷ್ಠರು ಬಂದಾಗ ಆ ಶಾಸಕ ಯಾರು ಅಂತ ಹೇಳುತ್ತಾರೆ ಎಂದರು.
ಮಾಜಿ MLC ಮೋಹನ್ ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಮೋಹನ್ ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಹಿತಿ ಬಂದಿಲ್ಲ. ಮೋಹನ್ ಕಾಂಗ್ರೆಸ್ ಸೇರಿದರೇ ನಮ್ಮವರಿಗೆ ಅನ್ಯಾಯ ಆಗೋದು ನಿಜ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್ಗಾಗಿ 11 ಜನ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದರು.
ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಸುರಕ್ಷಿತವಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದೇನೆ. ಸೇಫ್ ಅಲ್ಲ ಅನ್ನೋದು ನಿಮಗೆ ಗೊತ್ತಾ? ಸುರಕ್ಷಿತವಲ್ಲ ಅಂತಾ ಯಾರೋ ಹೇಳಿದರೆ ಅದನ್ನು ನಂಬಬೇಡಿ ಎಂದರು.
ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ಓಪನ್ ವಿಚಾರಕ್ಕೆ ಸಂಬಂಧಿಸಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹೋರಾಟಗಾರರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಬಾರದು. ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡಿದರೆ ಕೇಸ್ ಹಾಕಬಾರದು. ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡೋದು ನಮ್ಮ ಹಕ್ಕು. ರಾಜ್ಯಗಳ ಸ್ವಾಯತ್ತ ಹಕ್ಕು ಯಾರೂ ಕಸಿದುಕೊಳ್ಳುವಂತಿಲ್ಲ. ಮಹಾಜನ ವರದಿಯಲ್ಲಿ ಬೆಳಗಾವಿ ನಮ್ಮದು ಅಂತಾ ಹೇಳಲಾಗಿದೆ. ಆದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು ಸರಿಯಲ್ಲ ಎಂದು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸಿದ್ದರಾಮಯ್ಯ ಹೇಳಿದ್ರು.
ನಾನು ಹಿಂದು, ನಮ್ಮಪ್ಪ-ಅವ್ವನೂ ಹಿಂದೂ. ನಾನು ಹಿಂದು ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ. ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ ಕೊಟ್ಟಿದ್ದೆವಾ? ಮುಸ್ಲಿಂರಿಗೆ ಹಾಗೂ ಹಿಂದೂಗಳಿಗೆ ಕೊಡಲಾಗಿತ್ತು. ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ. ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಂಜೆ ಬಿಜೆಪಿ ಪ್ರಮುಖರ ಕೋರ್ ಕಮಿಟಿ ಸಭೆ ನಡೆಯಲಿದೆ. ಶ್ರೀದೇವಿ ಕಾಲೇಜು ಸಭಾಂಗಣದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಲಿದೆ. ಹೀಗಾಗಿ ಶ್ರೀದೇವಿ ಕಾಲೇಜಿನಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಶ್ರೀದೇವಿ ಕಾಲೇಜು ಆವರಣ ಸುತ್ತಮುತ್ತ ಪೊಲೀಸರು ತಪಾಸಣೆ ಮಾಡಿದ್ದಾರೆ.
ಫೆಬ್ರವರಿ 17ರ ಸಂಜೆ 6.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಅಮಿತ್ ಶಾ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿರೂಪ ಎಂದು ಧರ್ಮಸ್ಥಳದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ಸಚಿವ ಅಮಿತ್ ಶಾಗೆ ವೀರೇಂದ್ರ ಹೆಗ್ಗಡೆ ಪ್ರಸಾದ ಕೊಟ್ಟಿದ್ದಾರೆ. ಇಂದು ಅಮಿತ್ ಶಾಗೆ ಧರ್ಮಸ್ಥಳ ಪ್ರಸಾದ ತಲುಪಿಸುತ್ತೇನೆ. ಸಂಜೆ ಶಿವಮೊಗ್ಗ, ದಕ್ಷಿಣ ಕನ್ನಡ ವಿಭಾಗದ ಸಭೆ ನಡೆಯಲಿದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಚ್ಚಾ ರಸ್ತೆಯಿಂದ ಬೇಸತ್ತ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬೋರ್ಡ್ ಹಾಕಿದ್ದಾರೆ. ರಸ್ತೆ ಮಾಡಿ ಮತ ಕೇಳಿ ಎಂದು ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪರ ಇರುವ ಮತದಾರರ ಹೆಸರು ಡಿಲೀಟ್ ಮಾಡಲಾಗ್ತಿದೆ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಮತದಾರರ ಹೆಸರು ಡಿಲೀಟ್ ಮಾಡಲು ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ. ಮೊಬೈಲ್ ನಂಬರ್ನಿಂದ ರಿಕ್ವೆಸ್ಟ್ ಕಳುಹಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಪರ ಇರುವ ಮತದಾರರ ಹೆಸರು ಕೈಬಿಡುವ ಕೆಲಸ ಆಗ್ತಿದೆ. ಇದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇರುವ ಅನುಮಾನವಿದೆ. ಈ ಹಿಂದೆ ಬೆಂಗಳೂರಲ್ಲಿ ಚಿಲುಮೆ ಸಂಸ್ಥೆ ಇದೇ ರೀತಿ ಕೆಲಸ ಮಾಡಿತ್ತು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಫೆಬ್ರವರಿ 13ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಏರ್ಶೋ-2023 ಉದ್ಘಾಟನೆಗೆ ಬರಲಿದ್ದಾರೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ ಫೆಬ್ರವರಿ 17ರವರೆಗೆ ಏರ್ಶೋ ನಡೆಯಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರು ಪ್ರವಾಸ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಪುತ್ತೂರು ರೋಡ್ಶೋ ರದ್ದು ಮಾಡಿದ್ದಾರೆ. ಅಮಿತ್ ಶಾಗೆ ಲಾ & ಆರ್ಡರ್ಗೆ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾಗೆ ರಕ್ಷಣೆ ಕೊಡಲಾಗುತ್ತಿಲ್ಲ. ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಜನರ ಪರಿಸ್ಥಿತಿ ಏನಿರಬಹುದು? ಕಾನೂನಿಲ್ಲದ ಸರ್ಕಾರ ಇಲ್ಲಿಗೇ ಕೊನೆಯಾಗಬೇಕು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು 10 ಸ್ಥಾನ ಗೆಲ್ಲುತ್ತೇವೆ. ಎಲ್ಲಾ ವರ್ಗದವರಿಗೂ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೇವೆ.ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿ ಮಾಡುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಶಾಂತಿ ಬಯಸಿರುವುದರಲ್ಲಿ ಏನಿದೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ. 144 ಸೆಕ್ಷನ್ ಇದ್ರು ಝಂಡಾ ಹಿಡಿದುಕೊಂಡು ಬಂದಿದ್ರು. ಯಾರೆ ಬೇರೆಯವರು ಸತ್ತಾಗ ಒಂದು ರೂಪಾಯಿ ಕೊಡಲಿಲ್ಲ. ಆಮೇಲೆ (ಹರ್ಷ) ಸತ್ತಾಗ 15 ಲಕ್ಷ ಘೋಷಣೆ ಮಾಡ್ತಾರೆ. ಮೊನ್ನೆ ಆಸ್ಪತ್ರೆಯಲ್ಲಿ ಸತ್ತಾಗಲೂ ದುಡ್ಡು ಕೊಡಲಿಲ್ಲ. ಇರ್ಲಿ ಅವರನ್ನು ಅಭಿನಂದನೆ ಸಲ್ಲಿಸುತ್ತೇನೆ. ಆಯನೂರು ಮಂಜುನಾಥ್ ಸತ್ಯ ನುಡಿದಿದ್ದಾರೆ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಲಬುರಗಿ ನಗರದಲ್ಲಿ ಮಾಜಿ ಶಾಸಕ ಬಿ.ಆರ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಅನೇಕ ಮತದಾರರ ಹೆಸರು ಡಿಲೀಟ್ ಮಾಡೋ ತಂತ್ರ ನಡೆಯುತ್ತಿದೆ. ಮತದಾರರು ರೆಕ್ವೆಸ್ಟ್ ಹಾಕದೇ ಇದ್ದರು, ಡಿಲಿಶನ್ ಗೆ ರೆಕ್ವೆಷ್ಟ್ ಬಂದಿದೆ. ಬಿಎಲ್ಓ ಗಳಿಗೆ ಮತದಾರರ ಹೆಸರು ಡಿಲೀಟ್ಗೆ ರೆಕ್ವೆಸ್ಟ್ ಬಂದಿವೆ ಎಂದು ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಬಿಹಾರ್, ರಾಜಸ್ಥಾನ ಮೂಲದ ನಂಬರ್ ಗಳಿಂದ 6670 ಜನರ ಓಟರ್ಗಳ ಹೆಸರು ಡಿಲೀಟ್ಗೆ ರೆಕ್ವೆಸ್ಟ್ ಬಂದಿದೆ. ಕೆಲವರು ಗುತ್ತಿಗೆ ಪಡೆದು ಈ ದಂದೆ ಮಾಡುತ್ತಿದ್ದಾರೆ. ಬಿಜೆಪಿಯವರು ವ್ಯವಸ್ಥಿತವಾಗಿ ಇಂತಹದೊಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.
ಮೋದಿ, ಅಮಿತ್ ಶಾ, ಹೈ-ಕ ಭಾಗದಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿದ ಹಿನ್ನೆಲೆ ಹೊಸ ಲೇಟೆಸ್ಟ್ ಸರ್ವೆ ಪ್ರಕಾರ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮತ್ತೆ ಬಿಜೆಪಿಗೆ ಕೊಂಚ ಎನರ್ಜಿ ಬಂದಿದೆ. ಹೊಸ ಸರ್ವೆಯೊಂದರ ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಅಂತರ ಮತ್ತೆ ಕಡಿಮೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗವನ್ನ ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಧಿವೇಶನವನ್ನು ಗಣನೆಗೇ ತೆಗೆದುಕೊಳ್ಳದೇ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗವನ್ನೇ ಟಾರ್ಗೆಟ್ ಮಾಡಿದ್ದಾರೆ.
ಬಿ.ವೈ.ವಿಜಯೇಂದ್ರ ಪರಮಾಪ್ತ, ಬಿವೈವಿ ಆಪ್ತ, ಕೆ.ಆರ್.ಡಿ.ಎಲ್ ಅಧ್ಯಕ್ಷ ರುದ್ರೇಶ್ ಚಾಮರಾಜನಗರದಲ್ಲಿ ಮಠಗಳಿಗೆ ಅನುದಾನದ ಹೊಳೆ ಹರಿಸುತ್ತಿದ್ದಾರೆ. ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ರುದ್ರೇಶ್, ಚಾಮರಾಜನಗರ ಕ್ಷೇತ್ರದಲ್ಲಿ ಮಠಗಳಿಗೆ ಅನುದಾನ ನೀಡಿ ಲಿಂಗಾಯತ ಮತಬುಟ್ಟಿಗೆ ಕೈ ಹಾಕಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಮನಗರ ಮೂಲದ ಎಂ.ರುದ್ರೇಶ್ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿದ್ದಾರೆ.
ಇಂದು ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಆರ್.ಟಿ.ನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಮತ್ತೆ ಒತ್ತಾಯಿಸಿದ್ದಾರೆ. ಅಮಿತ್ ಶಾ ಜೊತೆ ಸಿಡಿ ಕೇಸ್ ಬಗ್ಗೆ ಚರ್ಚಿಸುವಂತೆ ಮನವಿ ಮಾಡಿದ್ದಾರೆ.
ಡಿಕೆ ಸುರೇಶ್ ರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರುವ ಬಗ್ಗೆ ಚರ್ಚೆ ನಡೆದಿದೆ. ಹೆಚ್ಡಿ ಕುಮಾರಸ್ವಾಮಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಓಟು ಸೆಳೆಯುತ್ತಿದ್ದಾರೆ. ನಿರೀಕ್ಷಿತ ಮಟ್ಟಕ್ಕಿಂತ ಮಿಗಿಲಾಗಿ ಜೆಡಿಎಸ್ ಪ್ರಬಲವಾಗಿ ಎದ್ದು ನಿಲ್ಲುತ್ತಿದ್ದೆ. ಹೆಚ್ ಡಿಕೆ ಕಟ್ಟಿಹಾಕಬೇಕೆಂದರೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಹೆಚ್ಡಿಕೆಗೆ ವ್ಯೂಹ ರಚಿಸಬೇಕು. ಹೀಗಾಗಿ ಹೆಚ್ಡಿಕೆಗೆ ಕೌಂಟರ್ ಕೊಡಲು ಡಿಕೆ ಸುರೇಶ್ ಅಖಾಡಕ್ಕೆ ಇಳಿದರೆ ಸೂಕ್ತ. ಡಿಕೆ ಸುರೇಶ್ ಪ್ರಬಲ ಪೈಪೋಟಿ ನೀಡಿದರೆ ಹೆಚ್ಡಿಕೆ ರಾಜ್ಯ ಸುತ್ತುವುದಿಲ್ಲ ಎಂದು ತಂತ್ರ ಹೆಣೆಯಲಾಗುತ್ತಿದೆ.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ವಿಚಾರಕ್ಕೆ ಸಂಬಂಧಿಸಿ ಶಾಸಕ ಪ್ರೀತಂಗೌಡ ಸವಾಲನ್ನೆ ದಾಳವಾಗಿ ಬಳಸಲು ರೇವಣ್ಣ ಕುಟುಂಬ ಪ್ಲಾನ್ ಮಾಡಿದೆ. ಪದೇ ಪದೇ ರೇವಣ್ಣಗೆ ಧೈರ್ಯ ಇದ್ದರೆ ಹಾಸನದಿಂದ ಸ್ಪರ್ಧೆ ಮಾಡಲಿ. ಹಾಸನ ಕ್ಷೇತ್ರದ ರಾಜಕೀಯದ ಮೇಲೆ ಆಸಕ್ತಿ ಇದ್ದರೆ ಹಾಸನದಿಂದ ಸ್ಪರ್ಧೆ ಮಾಡಿ ಗೆಲ್ಲಲಿ. ಹಾಸನದಿಂದ ರೇವಣ್ಣ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರ ಮತಗಳ ಲೀಡಲ್ಲಿ ಗೆಲ್ತಿನಿ. ಐವತ್ತು ಸಾವಿರ ಲೀಡಲ್ಲಿ ಒಂದೇ ಒಂದು ಮತ ಕಡಿಮೆಯಾದ್ರು ರಾಜಿನಾಮೆ ನೀಡಿ ಪುನಃ ಚುನಾವಣೆಗೆ ಹೋಗ್ತಿನಿ ಎಂದು ಪ್ರೀತಂಗೌಡ ಸವಾಲು ಹಾಕಿದ್ದಾರೆ. ಹಾಗಾಗಿಯೇ ಪ್ರೀತಂಗೌಡ ಸವಾಲು ಸ್ವೀಕಾರ ಮಾಡಿರೊದಾಗಿ ರೇವಣ್ಣ ಘೋಷಣೆ ಮಾಡಿದ್ದಾರೆ. ಸವಾಲು ಸ್ವೀಕಾರ ಮಾಡೋಕೆ ನಾನ್ ರೆಡಿ ಆದರೆ ಪಕ್ಷ ಒಪ್ಫಬೇಕು ಎಂದು ಚೆಂಡನ್ನು ಕುಮಾರಸ್ವಾಮಿ ಅಂಗಳಕ್ಕೆ ಎಸೆದಿದ್ದಾರೆ.
ಇಂದು ಮಂಡ್ಯ ಜಿಲ್ಲೆಯಲ್ಲಿ ಎರಡನೇ ಬಾರಿ ಪ್ರಜಾಧ್ವನಿಯಾತ್ರೆ ನಡೆಯಲಿದೆ. ದಳಪತಿಗಳ ಭದ್ರಕೋಟೆಯಲ್ಲಿ ಕೈ ನಾಯಕರು ಕಲರವ ಸೃಷ್ಠಿಸಲಿದ್ದಾರೆ. ಮಂಡ್ಯದ ಮದ್ದೂರು ಹಾಗೂ ಮಳವಳ್ಳಿಯಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ಸಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ.
ಟಿಕೆಟ್ ಘೋಷಣೆಯ ಮುನ್ನವೆ ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಟಾಕ್ ವಾರ್ ಶುರುವಾಗಿದೆ. ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ಮತ್ತು ಹಾಲಿ ಶಾಸಕ ಶ್ರೀನಿವಾಸ್ ಮಾನೆ ನಡುವೆ ಮಾತಿನ ಸಮರ ಶುರುವಾಗಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿ ಹೊರಗಡೆಯಿಂದ ಬಂದವರಿಗೆ ಟಿಕೆಟ್ ಕೊಡಬೇಡಿ. ಒಂದು ವೇಳೆ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ರೆ ನಾನು ಬಂಡಾಯ ಸ್ಪರ್ದಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ ನಾನು ಬಂಡಾಯ ಸ್ಪರ್ದೆ ಮಾಡಿ ಶ್ರೀನಿವಾಸ್ ಮಾನೆ ಯನ್ನ ಮನೆಗೆ ಕಳುಹಿಸ್ತೀನಿ ಎಂದು ಕಾಂಗ್ರೆಸ್ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಹೇಳಿಕೆ ನೀಡಿದ್ದಾರೆ.
ಯಲಹಂಕ ಶಾಸಕರ ವಿರುದ್ಧ ದಾಸನಪುರ ಕಾಂಗ್ರೆಸ್ ಬ್ಲಾಕ್‌ನಿಂದ ಐಜಿಪಿಗೆ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್ ಆಕಾಂಕ್ಷಿ ನಾಗರಾಜ್ ಗೌಡರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಮಾದನಾಯಕನಹಳ್ಳಿ ಪಕ್ಷದ ಕಚೇರಿ ಉದ್ಘಾಟನೆ ವೇಳೆ ನಡೆದ ಭಾಷಣದ ವೇಳೆ ಬೆದರಿಕೆ ಹಾಕುವಂತೆ ವಿಶ್ವನಾಥ್ ಮಾತನಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮ, ರಾಯಬಾಗ ಮತ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚ ರತ್ನ ಯಾತ್ರೆ ನಡೆಯಲಿದೆ. ಬೆಳಗ್ಗೆ ಹತ್ತು ಗಂಟೆಗೆ ತೋರಣಹಳ್ಳಿ ಗ್ರಾಮದಿಂದ ಯಾತ್ರೆ ಆರಂಭವಾಗಲಿದೆ.
ಇಂದು ವಿಜಯಪುರ ಜಿಲ್ಲೆಗೆ ‘ಕೈ’ ಪ್ರಜಾಧ್ವನಿ ಯಾತ್ರೆ ಆಗಮಿಸಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ವಿಜಯಪುರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ಬೆಳಗ್ಗೆ 11.30ಕ್ಕೆ ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಬಳಿಕ ಇಂಡಿ ಪಟ್ಟಣದಲ್ಲಿ, ಸಂಜೆ ಚಡಚಣದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
ಇಂದು ರಾಜ್ಯಕ್ಕೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರಾದ ಮೋಹನ್ ಪ್ರಕಾಶ್, ಸದಸ್ಯರಾದ ನೀರಜ್, ಮೊಹಮ್ಮದ್ ಜಾವೇದ್, ಸಪ್ತಗಿರಿ ಆಗಮಿಸಲಿದ್ದು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ಟಿಕೆಟ್ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಫೆಬ್ರವರಿ 13ರಂದು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಲಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಹಿನ್ನೆಲೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಪುತ್ತೂರಿನ ತೆಂಕಿಲದ ವಿವೇಕಾನಂದ ಶಾಲಾ ಆವರಣದಲ್ಲಿ ಸಮಾವೇಶ ನಡೆಯಲಿದ್ದು ಬೃಹತ್ ಗಾತ್ರದ ಮೂರು ಜರ್ಮನ್ ಮಾದರಿ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಸುವರ್ಣ ಸಂಭ್ರಮ, ಕೃಷಿಕ ಸಹಕಾರಿಗಳ ಮಹಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Amit Shah: ಅಮಿತ್ ಶಾ ಭೇಟಿ ಹಿನ್ನಲೆ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಇಂದು ಮದ್ಯ ಮಾರಾಟ ಮಳಿಗೆ ಬಂದ್#AmitShah #Dakshinakannada #Puttur #Mangaluru #KarnatakaElections2023 #politics https://t.co/C8K3GXlgwy
— TV9 Kannada (@tv9kannada) February 11, 2023
Published On - 8:58 am, Sat, 11 February 23