ಕೆಂಪೇಗೌಡ ಪ್ರತಿಮೆ ನಿರ್ಮಾಣದಲ್ಲೂ ಹಣ ಲೂಟಿ; ಡಿಕೆ ಶಿವಕುಮಾರ್ ಗಂಭೀರ ಆರೋಪ

| Updated By: Rakesh Nayak Manchi

Updated on: Nov 12, 2022 | 2:31 PM

ಸರ್ಕಾರದಿಂದ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡ ಪ್ರತಿಮೆ ನಿರ್ಮಾಣದಲ್ಲೂ ಸರ್ಕಾರದಿಂದ ಹಣ ಲೂಟಿ ನಡೆದಿದೆ ಎಂದು ಆರೋಪಿಸಿದರು.

ಕೆಂಪೇಗೌಡ ಪ್ರತಿಮೆ ನಿರ್ಮಾಣದಲ್ಲೂ ಹಣ ಲೂಟಿ; ಡಿಕೆ ಶಿವಕುಮಾರ್ ಗಂಭೀರ ಆರೋಪ
ಕೆಂಪೇಗೌಡ ಪ್ರತಿಮೆ ನಿರ್ಮಾಣದಲ್ಲೂ ಸರ್ಕಾರ ಹಣ ಲೂಟಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ
Follow us on

ಬೆಂಗಳೂರು: ವಿಮಾನ ನಿಲ್ದಾಣದವರಿಂದಲೇ ಕೆಂಪೇಗೌಡ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ ಕರ್ನಾಟಕ ಸರ್ಕಾರ ಯಾಕೆ ಮಾಡಿದೆ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು, ಪ್ರತಿಮೆ ನಿರ್ಮಾಣ ವಿಚಾರದಲ್ಲೂ ಸರ್ಕಾರ ಹಣ ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಯಾಕೆ ಬೇಕಿತ್ತು? ಕಮಿಷನ್ ಹೊಡೆಯಲು ಕೆಂಪೇಗೌಡ ಪ್ರತಿಮೆ (Kempegowda statue) ನಿರ್ಮಾಣ ಮಾಡಿದ್ದಾರೆ. ಚುನಾವಣೆ (Election) ಬಂತು ಬಿರುಸಿನ ಪ್ರಚಾರ ಅಂತಿದ್ದಾರೆ. ಅವರ ಸಂಕಲ್ಪದಂತೆ ಅವರ ಸರ್ಕಾರವನ್ನ ಕಿತ್ತೊಗೆಯುತ್ತಾರೆ. ಪ್ರಧಾನಿಗಳು ಏನಾದರೂ ಕೊಡುಗೆ ಕೊಡುತ್ತಾರೆ ಅಂತ ಅಂದುಕೊಂಡಿದ್ದೆವು ಎಂದರು.

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ನಾವು ಪ್ರಸ್ತಾವನೆ ಕಳಿಸಿದ್ದೆವು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ 2000 ಎಕರೆ ಕೊಟ್ಟಿದ್ದೆವು. ಸರ್ಕಾರ ಹೇಳಿದಿದ್ದರೆ ವಿಮಾನ ನಿಲ್ದಾಣದವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಇವರು ಕಮಿಶನ್ ಹೊಡೆಯೋದಕ್ಕೇನೋ ಮಾಡಿದ್ದಾರೆ. ನಾವು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ಪಕ್ಷದ ಅಜೆಂಡಾ ಹಿನ್ನೆಲೆ ವೋಟಿಗಾಗಿ ಏನು ಬೇಕು ಅದನ್ನ ಮಾಡುತ್ತಿದ್ದಾರೆ. ಗ್ಲೋಬಲ್ ಬೆಂಗಳೂರು, ಗ್ಲೋಬಲ್ ಕರ್ನಾಟಕ ಏನಾದರೂ ಒಂದು ಮೆಸೇಜ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಕೋಟಿ ಕೋಟಿ ನಮಸ್ಕಾರ ಎಂದಿದ್ದೇ ಪ್ರಧಾನಿ ಮೋದಿ ಕೊಡುಗೆ

ನಿನ್ನೆ ನಡೆದ ಕಾರ್ಯಕ್ರಮ ಸಂಪೂರ್ಣ ರಾಜಕಾರಣಕ್ಕೆ ಮೀಸಲಾಗಿದೆ. ಪ್ರತಿಮೆಗಳಿಗೆ ಮಾಲಾರ್ಪಣೆಯಿಂದ ಯಾವುದೇ ಉಪಯೋಗವಿಲ್ಲ. ರಾಜ್ಯಕ್ಕೆ ಯಾವುದಾದರೂ ಯೋಜನೆ ಘೋಷಿಸುತ್ತಾರೆಂಬ ನಿರೀಕ್ಷೆಯಿತ್ತು. ಅದರೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಹೂವಿನ ಹಾರ, ನಮಸ್ಕಾರ ಮಾತ್ರ. ಕೋಟಿ ಕೋಟಿ ನಮಸ್ಕಾರ ಎಂದಿದ್ದೇ ಪ್ರಧಾನಿ ಮೋದಿ ಕೊಡುಗೆ ಎಂದು ಲೇವಡಿ ಮಾಡಿದರು.

ಬಿಜೆಪಿಗೆ ಜನ ಬೆಂಬಲ ಇಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನ ಕರೆಸಿದರು. ಸುತ್ತೋಲೆ ಹೊರಡಿಸಿ ಕಾಲೇಜು ಪ್ರಾಂಶುಪಾಲರಿಗೆ ಟಾಸ್ಕ್ ಕೊಟ್ಟಿದ್ದರು. ಸ್ಟೇಡಿಯಂ ಉದ್ಘಾಟನೆ ಆದರೆ ಕರೆದುಕೊಂಡು ಹೋಗಲಿ, ಪಾಠ ಮಾಡಲಿ. ಕೆಂಪೇಗೌಡರ ಕಾರ್ಯಕ್ರಮಕ್ಕೂ ವಿದ್ಯಾರ್ಥಿಗಳಿಗೂ ಏನು ಸಂಬಂಧ ಎಂಬುದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡಬೇಕು ಎಂದರು.

ನಿರುದ್ಯೋಗ, ಶೇ 40 ಕಮಿಶನ್, ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೆವು. ಒಕ್ಕುಲುತನ ಮಾಡುವವರು ಎಲ್ಲಾ ಸಮುದಾಯದವರೂ ಇದ್ದಾರೆ. ಸ್ವಾಮೀಜಿಗಳ ಬಗ್ಗೆ ನಾನು ಮಾತಾಡಲ್ಲ. ಅವರಿಗೂ ಸ್ವಾಮೀಜಿಗೂ ಏನು ಸಂಬಂಧ ಇದೆಯೋ ಗೊತ್ತಿಲ್ಲ. ನನಗೂ ಸ್ವಾಮೀಜಿಗೂ ಭಕ್ತನಿಗೂ, ಭಗವಂತನಿಗೂ ಇರುವ ಸಂಬಂಧ. ಆ ಪೀಠಕ್ಕೆ ತನ್ನದೇ ಆದ ಗೌರವ ಇದೆ. ರಾಜಕೀಯಕ್ಕೆ ಸ್ವಾಮೀಜಿಗಳ ಬಗ್ಗೆ ನಾನು ಮಾತಾಡಲ್ಲ ಎಂದರು.

ನಾವು ಫೌಂಡೇಶನ್ ಹಾಕಿದ್ದೆವು, ಅವರು ಮನೆ ಕಟ್ಟಿದರು

ಕೆಂಪೇಗೌಡರ ಪ್ರಾಧಿಕಾರ ಮಾಡಿದ್ದು ನಾವು. ಅವರು ಬರೀ ಶೋ ಕ್ರಿಯೇಟ್ ಮಾಡಿದ್ದಾರೆ. ನಮಗೆ ಫೋನೂ ಇಲ್ಲ, ಆಹ್ವಾನವೂ ಕೊಟ್ಟಿಲ್ಲ. ಭೂಮಿ ಪೂಜೆಗೆ ಬಿ.ಎಸ್.ಯಡಿಯೂರಪ್ಪ ಇದ್ದಾಗ ಕರೆದಿದ್ದರು. ಹೀಗಾಗಿ ಅಂದು ಹೋಗಿದ್ದೆವು. ಫೌಂಡೇಶನ್ ನಾವು ಹಾಕಿದ್ದೆವು, ಮನೆ ಅವರು ಕಟ್ಟಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

ಸಚಿವ ಆರ್​.ಅಶೋಕ್ ಅವರನ್ನ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಅವರ ನಡುವೆಯೇ ದೊಡ್ಡ ಯುದ್ಧ ನಡೆಯುತ್ತಿದೆ. ಬಿಜೆಪಿ ನಾಯಕರಿಗೆ ಸಂಸ್ಕಾರವೇ ಇಲ್ಲ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಶಿವಕುಮಾರ್ ಯಾರೂ ಬೇಕಾಗಿಲ್ಲ. ರಾಜಕೀಯಕ್ಕಾಗಿ ಕಾರ್ಯಕ್ರಮ ಮಾಡಿದ್ದಾರೆ ಅಷ್ಟೆ ಎಂದು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಿರುದ್ಧ ಪರೋಕ್ಷವಾಗಿ ಲೇವಡಿ ಮಾಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Sat, 12 November 22