ಮಂತ್ರಿ ಆಗಲು ನಾನು ಯೋಗ್ಯನಿಲ್ಲ; ಸಿಎಂ ಆಗಲು ಮಾತ್ರ ಯೋಗ್ಯ ಎಂದು ಅನಿಸಿರಬೇಕು: ಬಸನಗೌಡ ಪಾಟೀಲ್ ಯತ್ನಾಳ್

| Updated By: ganapathi bhat

Updated on: Sep 24, 2021 | 10:55 PM

Basanagouda Patil Yatnal: ಬಿ.ಎಸ್. ಯಡಿಯೂರಪ್ಪಗೆ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಬಾರದು ಅಂತಿತ್ತು. ಅವರಿಗೆ ವಿಧಾನಸಭೆಯಲ್ಲಿ ಉತ್ತರಿಸಬಾರದೆಂಬುದೇ ಇತ್ತು. ಆಗ ಗೃಹ ಸಚಿವರಾದ್ದ ಬೊಮ್ಮಾಯಿ ಉತ್ತರವನ್ನ ಕೊಟ್ಟರು. ಕೊನೆಗೂ ಎಲ್ಲಿಯೂ ಮೀಸಲಾತಿಯ ಆಶ್ವಾಸನೆ ಕೊಡಲಿಲ್ಲ.

ಮಂತ್ರಿ ಆಗಲು ನಾನು ಯೋಗ್ಯನಿಲ್ಲ; ಸಿಎಂ ಆಗಲು ಮಾತ್ರ ಯೋಗ್ಯ ಎಂದು ಅನಿಸಿರಬೇಕು: ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್​ ಯತ್ನಾಳ್
Follow us on

ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್‌ಗೆ ಸಚಿವಸ್ಥಾನ ಸಿಗದ ವಿಚಾರವಾಗಿ ಬೆಳಗಾವಿಯಲ್ಲಿ ಸ್ವತಃ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಬಹುಶಃ ಮಂತ್ರಿಯಾಗಲು ನಾನು ಯೋಗ್ಯ ಇಲ್ಲವೆಂದು ಅನಿಸಿರಬೇಕು. ಯತ್ನಾಳ್​ ಸಚಿವನಾಗಲು ಯೋಗ್ಯವಿಲ್ಲ ಎಂದು ಅನಿಸಿರಬೇಕು. ಯತ್ನಾಳ್ ಸಿಎಂ ಆಗಲು ಮಾತ್ರ ಯೋಗ್ಯವೆಂದು ಅನಿಸಿರಬೇಕು ಎಂದು ವಿಭಿನ್ನ ಉತ್ತರ ನೀಡಿದ್ದಾರೆ. ರಾಜಕಾರಣದಲ್ಲಿ ಯಾವಾಗಲೂ ಆಸೆ ಇಟ್ಟುಕೊಂಡಿರಬೇಕು. ಬಸವರಾಜ ಬೊಮ್ಮಾಯಿ ಮೇಲೆ ನಮಗೆ 99 ಪರ್ಸೆಂಟ್ ಭರವಸೆ ಇದೆ. ಅದು ಮುಖಭಾವದ ಮೇಲೆಯೇ ಗೊತ್ತಾಗುತ್ತದೆ ಎಂದು ಯತ್ನಾಳ್​ ತಿಳಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪಗೆ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಬಾರದು ಅಂತಿತ್ತು. ಅವರಿಗೆ ವಿಧಾನಸಭೆಯಲ್ಲಿ ಉತ್ತರಿಸಬಾರದೆಂಬುದೇ ಇತ್ತು. ಆಗ ಗೃಹ ಸಚಿವರಾದ್ದ ಬೊಮ್ಮಾಯಿ ಉತ್ತರವನ್ನ ಕೊಟ್ಟರು. ಕೊನೆಗೂ ಎಲ್ಲಿಯೂ ಮೀಸಲಾತಿಯ ಆಶ್ವಾಸನೆ ಕೊಡಲಿಲ್ಲ. ಆಶ್ವಾಸನೆ ಕೊಡಬೇಡ ಅಂತಾ ಯಡಿಯೂರಪ್ಪ ಹೇಳಿದ್ದರು. ಬಿಎಸ್​​ವೈ ಹೇಳಿದ್ದರು ಎಂದು ಬೊಮ್ಮಾಯಿ ನನಗೆ ಹೇಳಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಶ್ಯಾಡೋ ಆಗಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಬೊಮ್ಮಾಯಿ ಸ್ವತಂತ್ರ ನಿರ್ಣಯ ಕೈಗೊಳ್ಳುವ ರಾಜಕಾರಣಿ. ಬೊಮ್ಮಾಯಿ ಪೂರ್ತಿ ರಬ್ಬರ್ ಸ್ಟ್ಯಾಂಪ್ ಆಗ್ತಾರೆಂಬ ಕಲ್ಪನೆ ಬಿಡಿ. ಒಂದು ವಾರದಲ್ಲಿ ನಿಮಗೆ ಗೊತ್ತಾಗುತ್ತೆ, ಒಂದು ನಿರ್ಧಾರ ಆಗೋದಿದೆ. ಅವರು ಶ್ಯಾಡೋ ಇಲ್ಲ, ಹೈಕಮಾಂಡ್ ಏನು ಹೇಳ್ತಾರೋ ಅದನ್ನ ಕೇಳುತ್ತಾರೆ ಅಂತಾ ಗೊತ್ತಾಗುತ್ತೆ. ಪಂಚಮಸಾಲಿ ಸಮಾಜಕ್ಕೆ ಅಷ್ಟೇ ಅಲ್ಲ ಕೆಲವೊಂದು ಸಮಾಜಕ್ಕೆ ಅನ್ಯಾಯ ಆಗಿತ್ತು ನಿಜ. ಯಾವುದೇ ಸಮಾಜಕ್ಕೆ ಮೋಸ ಮಾಡಬಾರದು. ಮೋಸ ಮಾಡಿದ್ರೆ ಭಗವಂತ ಶಿಕ್ಷೆ ಕೊಟ್ಟೆ ಕೊಡ್ತಾನೆ ಎಂದು ಹೇಳಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಕಿತ್ತು. ನ್ಯಾ. ಸುಭಾಷ್ ಆಡಿ ನೇತೃತ್ವದಲ್ಲಿ ಕಮಿಟಿ ಮಾಡಿ ಸದಸ್ಯರ ನೇಮಕ ಮಾಡಿರಲಿಲ್ಲ. ಆರು ತಿಂಗಳವರೆಗೂ ಮೀಸಲಾತಿ ಮಾಡ್ತೀನಿ ಅಂತಾ ಮೋಸ ಮಾಡಿದ್ದಾರೆ. ಅದು ಶಾಪವಲ್ಲವೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.

ಅಧಿಕಾರ ಮತ್ತು ಹಣದ ಆಸೆ ತೋರಿಸಿ ವ್ಯಕ್ತಿಯಿಂದ ಷಡ್ಯಂತ್ರ: ಅ.1 ರಂದು ಯಾರೆಂದು ಬಹಿರಂಗಪಡಿಸುತ್ತೇನೆ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ವಿಚಾರವಾಗಿ ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಪಾದಯಾತ್ರೆ ಶುರುವಾದಾಗಲೂ ನಿಲ್ಲಿಸಬೇಕೆಂದು ಷಡ್ಯಂತ್ರ ಇತ್ತು. ನಾನು ಅವರ ಮಾತು ಕೇಳಲಿಲ್ಲ ಎಂದು ಷಡ್ಯಂತ್ರ ಮಾಡಿದ್ರು. ಪಾದಯಾತ್ರೆ ಬೆಂಗಳೂರಿಗೆ ಬರುತ್ತಿದ್ದಂತೆ ಮುಖವಾಡ ಕಳಚಿತು. ಅವರ ಬಣ್ಣ ಬಯಲಾಗಿ ಸಮಾಜಕ್ಕೆ ಅವರು ವಿಲನ್​​ ಆದರು. ಅಧಿಕಾರ ಮತ್ತು ಹಣದ ಆಸೆ ತೋರಿಸಿ ವ್ಯಕ್ತಿಯಿಂದ ಷಡ್ಯಂತ್ರ ಇತ್ತು. ಅವರು ಯಾರೆಂದು ಅ.1 ರಂದು ನಾನು ಬಹಿರಂಗಪಡಿಸುತ್ತೇನೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನನಗೆ ಕಿರುಕುಳ ಕೊಡ್ತಿರುವ ವಿಚಾರ ನಾನು ಪ್ರಸ್ತಾಪಿಸಿರಲಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರ ಹೆಸರು ಬಹಿರಂಗಪಡಿಸ್ತೇನೆ. ಅ.1ರಂದು ಅಭಿಯಾನ ಸಮಾರೋಪದಲ್ಲಿ ಹೆಸರು ಹೇಳ್ತೇನೆ ಎಂದು ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ: ಅಕ್ಟೋಬರ್ 1ರಿಂದ ಸತ್ಯಾಗ್ರಹ ನಡೆಸಲು ತೀರ್ಮಾನ- ಬಸವ ಜಯಮೃತ್ಯುಂಜಯಶ್ರೀ

ಇದನ್ನೂ ಓದಿ: ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ

Published On - 10:52 pm, Fri, 24 September 21