ಯಡಿಯೂರಪ್ಪಗೆ “ಗಿರಾಕಿ” ಎಂದು ಜರಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ
ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ್ದಾರೆ.
ಚಿಕ್ಕೊಡಿ: ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ (Basanagouda Patil Yatnal) , ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಮತ್ತೆ ಗುಡುಗಿದ್ದಾರೆ. ಆ ಗಿರಾಕಿ (ಯಡಿಯೂರಪ್ಪ) ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯದ 50 ಕ್ಷೇತ್ರದಲ್ಲಿ ಪ್ರವಾಸ ಮಾಡಿದರೆ ಸಿಎಂ ಬೊಮ್ಮಾಯಿ ಪಲ್ಟಿ ಹೊಡಿತಾರೆ ಎಂದು ಬೆಳಗಾವಿಯಲ್ಲಿ ಮಾತನಾಡಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಬಿಎಸ್‌ವೈ ಪ್ರವಾಸದಿಂದ ಏನೂ ಸುಡುಗಾಡು ಆಗಲ್ಲ. ಮೊನ್ನೆ ಅಧಿವೇಶನದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲಾ ಅಂತಾ ಯಡಿಯೂರಪ್ಪ ಭಾಷಣ ಮಾಡಿದರು, ಹಾಗಾದರೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ವೇಳೆ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ನೀಡಲಿಲ್ಲ ? ಮೀಸಲಾತಿಗಾಗಿ ಸೂಚಿಸಿದ್ದೇನೆ ಅಂದರು, ಸಿಎಂ ಆದವರು ಯಾರಾದರೂ ಸೂಚಿಸುತ್ತಾರಾ ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದರೆ ನೀವು ಪರ್ಮನೆಂಟ್ ಆಗಿ ಮಾಜಿ ಸಿಎಂ ಆಗುತ್ತೀರಿ. ಯಡಿಯೂರಪ್ಪ, ಬೊಮ್ಮಾಯಿ ತಿರುಪತಿಯಲ್ಲಿ ಮೂರು ಪ್ರಮುಖ ಅಂಶ ಮಾತನಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು. ನನ್ನ (ಯಡಿಯೂರಪ್ಪ) ಮಗನ ಮಂತ್ರಿ ಮಾಡಬೇಕು, ಯತ್ನಾಳ ಮಂತ್ರಿ ಮಾಡಬೇಡಿ ಅಂದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ನಮ್ಮನ್ನೆಲ್ಲರೂ ಬಳಸಿಕೊಂಡು ಶೇಕಡ 2ರಷ್ಟು ಇರುವವವರು ಸಿಎಂ ಆದರು. ನನಗೂ ಸಿಎಂ ಆಗಿ ಒಳ್ಳೆಯ ಆಡಳಿತ ನೀಡುವ ತಾಕತ್ ಇದೆ. ನಮ್ಮವರು ಅಂತವರ ಮುಂದೆ ಕೈಕಟ್ಟಿ ನಿಂತು ಮಂತ್ರಿ ಸ್ಥಾನ ಕೇಳುವ ಸ್ಥಿತಿ ಬಂತು. ಕೆಲ ದಿನಗಳ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿ ನನ್ನ ಜೊತೆಗೆ ಕ್ಲೋಸ್ ಡೋರ್ ಮೀಟಿಂಗ್ ಮಾಡಿದರು. ಬಸನಗೌಡ್ರ ನೀವು ಸ್ವಲ್ಪ ಶಾಂತ ಇರಿ, ನಿಮ್ಮನ್ನು ಮಂತ್ರಿ ಮಾಡತಿನಿ ಅಂದರು. ನನಗೇನೂ ಮಂತ್ರಿಸ್ಥಾನ ಕೊಡಬೇಡಿ. ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ಕೊಡಿ ಎಂದೆ. ಚುನಾವಣೆಗೆ 6 ತಿಂಗಳು ಬಾಕಿ ಇದೆ, ಮಂತ್ರಿ ಆಗಲು ನಾನೇನು ಹುಚ್ಚ ಇದ್ದೇನಾ? ಪ್ರಶ್ನಿಸಿದರು.
ಈರಣ್ಣ ಕಡಾಡಿ ಪಂಚಮಸಾಲಿ ಸಮಾಜದವರು ಎಂದು ರಾಜ್ಯಸಭೆಗೆ ಹೋಗಿದ್ದಾರೆ. ನನ್ನ ಮೇಲೆ ಯಾರೋ ನಾಯಕ ಇದಾರೆ ಅನ್ನೋದೇನಿಲ್ಲ. ನನ್ನನ್ನು ಸೋಲಿಸಲು ನಮ್ಮ ಪಕ್ಷದವರೂ ಸೇರಿ ಹಲವರು ಈಗಲೇ ಹಣ ವಿತರಣೆ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಇನ್ನು ಮುಂದೆ ನಮ್ಮ ಸಮಾಜಕ್ಕೆ ಗೌರವ ವೃದ್ಧಿ ಆಗಲಿದೆ. ಎಸ್‌ಸಿ, ಎಸ್‌ಟಿ ಬಳಿಕ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನನಗೆ ಭರವಸೆ ನೀಡಿದ್ದಾರೆ ಎಂದು ಮಾತನಾಡಿದರು.
ಮೀಸಲಾತಿ ಕೊಡಲೇಬೇಕು ಎಂದು ನಾನು ಆಗ್ರಹ ಮಾಡಿದ್ದೇನೆ. ಇಲ್ಲವಾದರೆ ನವೆಂಬರ್ ಮೊದಲ ವಾರದಲ್ಲೇ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಸಮಾಜದ 25 ಲಕ್ಷ ಜನರು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಯತ್ನಾಳ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ