ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ, ವರಿಷ್ಠರು ಹೇಳಿದಾಗ ಸಚಿವ ಸಂಪುಟ ಪುನಾರಚನೆ: ಸಿಎಂ ಬೊಮ್ಮಾಯಿ
Basavaraj Bommai: ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಇನ್ನೊಂದು ಪಕ್ಷಕ್ಕೆ ಯಾರೂ ನಮ್ಮಿಂದ ಹೋಗಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ. ಈ ಬಗ್ಗೆ ವರಿಷ್ಠರು ನಮಗೆ ಯಾವುದೇ ಸೂಚನೆ ಕೊಟ್ಟಿಲ್ಲ. ನಮ್ಮ ಪಕ್ಷವನ್ನು ಬಿಟ್ಟು ಯಾರೂ ಕೂಡ ಹೋಗೋದಿಲ್ಲ. ಬೇರೆ ಪಕ್ಷದಿಂದ ಬಿಜೆಪಿಗೆ ಬರೋರನ್ನ ಕಾದು ನೋಡಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕರು ಅವಧಿಗೂ ಮೊದಲೇ ಚುನಾವಣೆ ನಡೆಯಲಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಸಚಿವ ಸಂಪುಟ ವಿಸ್ತರಣೆ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಅವಧಿಪೂರ್ಣ ಚುನಾವಣೆ ಚರ್ಚೆ ಮಾಧ್ಯಮಗಳಲ್ಲಿ ನಡೀತಿದೆ. ನಮ್ಮ ಪಕ್ಷದಲ್ಲಿ ಅವಧಿಪೂರ್ಣ ಚುನಾವಣೆ ಬಗ್ಗೆ ಚರ್ಚೆ ನಡೀತಿಲ್ಲ. ಯಾವುದೇ ಹಂತದಲ್ಲೂ, ಎಲ್ಲೂ ಕೂಡಾ ಪಕ್ಷದಲ್ಲಿ ಚರ್ಚೆ ನಡೀತಿಲ್ಲ. ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಇನ್ನೊಂದು ಪಕ್ಷಕ್ಕೆ ಯಾರೂ ನಮ್ಮಿಂದ ಹೋಗಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ. ವರಿಷ್ಠರ ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗ್ತೀನಿ. ವರಿಷ್ಠರು ಯಾವಾಗ ಹೇಳ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ. ಇದೇ 30, 31 ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಇದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಚಾರಗಳು ಚರ್ಚೆ ಆಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಉಕ್ರೇನ್ ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ; ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ
ಉಕ್ರೇನ್‌ನಲ್ಲಿ ಸಿಲುಕಿದ್ದ ಎಲ್ಲ ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ಬಹುತೇಕ ಎಲ್ಲರನ್ನೂ ಏರ್‌ಲಿಫ್ಟ್ ಮಾಡಿದ್ದಾರೆ. ಉಕ್ರೇನ್‌ನಲ್ಲಿ ಇರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ. ನವೀನ್ ದೇಹ ತರೋ ಬಗ್ಗೆ ಮಾತುಕತೆ ನಡೀತಿದೆ. ಉಕ್ರೇನ್ ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಉಕ್ರೇನ್‌ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಅವಧಿಗೂ ಮುನ್ನವೇ ಚುನಾವಣೆ ಬರುವ ಸಾಧ್ಯತೆ ಇದೆ; ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗುತ್ತಿದೆ: ಹೆಚ್ಡಿ ಕುಮಾರಸ್ವಾಮಿ
ಇದನ್ನೂ ಓದಿ: ನವೀನ್ ಮೃತದೇಹ ಸಿಕ್ಕಿದೆ, ಉಕ್ರೇನಿನ ಶವಾಗಾರದಲ್ಲಿ ಇಡಲಾಗಿದೆ: ಬಸವರಾಜ ಬೊಮ್ಮಾಯಿ ಮಾಹಿತಿ
Published On - 11:41 am, Sun, 13 March 22