ಇವತ್ತಿನ ದಿನದಲ್ಲಿ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳ್ಳೇದು; ಬಸವರಾಜ್ ಹೊರಟ್ಟಿ ಬೇಸರ
ರಾಜಕೀಯ ಕಲುಷಿತವಾಗಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು. ಇದೀಗ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ. ನಾಲ್ಕೈದು ಕೋಟಿ ಖರ್ಚು ಮಾಡಿ ಅದನ್ನು ಭೂತ ಬಂಗಲೇ ಮಾಡುವುದು ಸರಿ ಅಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ, ಅ.22: ಇವತ್ತಿನ ದಿನದಲ್ಲಿ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳ್ಳೇದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ(Basavaraj Horatti) ಹೇಳಿದರು. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು ‘ಇವತ್ತಿನ ದಿನಮಾನದಲ್ಲಿ ರಾಜಕೀಯ ಬಗ್ಗೆ ಕಡಿಮೆ ಮಾತಾಡಿದ್ರೆ ಒಳ್ಳೇದು. ಇವತ್ತು ಕಮಿಟ್ಮೆಂಟ್ ಅನ್ನೋದೆ ಇಲ್ಲ. ಜನರೂ ಕೂಡ ಯಾರು ಕೆಲಸ ಮಾಡುತ್ತಾರೆ, ಯಾರಿಗೆ ವೋಟ್ ಹಾಕಬೇಕು ಎನ್ನುವ ಯೋಚನೆಯೂ ಇಲ್ಲ. ದಿನೇ ದಿನೇ ಕಮಿಟ್ಮೆಂಟ್ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬರ, ಅತಿವೃಷ್ಟಿ ಇದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ದಿನೇ ದಿನೆ ಅವರನ್ನ,ಇವರನ್ನ ಬೈಯ್ಯೋದೇ ಆಗಿದೆ. ನಾವು ಕಠಿಣ ಸಂದರ್ಭದಲ್ಲಿ ಇದ್ದೇವೆ, ಆಳುವ ಪಕ್ಷ, ವಿರೋಧ ಪಕ್ಷ ಯಾರೇ ಮಾಡಿದರೂ ಸರಿ ಅಲ್ಲ. ರಾಜಕೀಯ ಕಲುಷಿತವಾಗಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು. ಇದೀಗ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ. ನಾಲ್ಕೈದು ಕೋಟಿ ಖರ್ಚು ಮಾಡಿ ಅದನ್ನು ಭೂತ ಬಂಗಲೇ ಮಾಡುವುದು ಸರಿ ಅಲ್ಲ, ಸುವರ್ಣ ಸೌಧ ಕಟ್ಟಿದ ಮೇಲೆ ಇಲ್ಲಿನ ಜನರ ಸಮಸ್ಯೆ ಆಲಿಸಬೇಕು ಎಂದರು.
ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದಿದ್ದ ಸಚಿವ ಸತೀಶ್ ಜಾರಕಿಹೊಳಿ
ಹೌದು, ನಿನ್ನೆಯಷ್ಟೇ ಡಿಸೆಂಬರ್.4 ರಿಂದ ಡಿ.15 ರವರೆಗೆ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ್ದ ಅವರು, ‘ಈಗಾಗಲೇ ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈ ಬಾರಿ ಅಧಿವೇಶನ ಅದ್ದೂರಿಯಾಗಿ ಮಾಡೋಣ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ