Belagavi News: ಗೋಕಾಕ್ ಸಾಹುಕಾರ್‌ಗೆ ಸೆಡ್ಡು ಹೊಡೆದು ಮಿನಿಸ್ಟರ್ ಆದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಯಾಬಿನೆಟ್ ದರ್ಜೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1998ರಲ್ಲಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಶುರು ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ್ ರಾಜಕೀಯ ಜೀವನವೇ ವಿಶೇಷ. ಬೆಳಗಾವಿಯಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಎದುರು ಹಾಕಿಕೊಂಡು ಗೆದ್ದು ಬೀಗಿದ ಛಲಗಾರ್ತಿಯ ಸ್ಟೋರಿ ಇಲ್ಲಿದೆ.
ಬೆಳಗಾವಿ: 2022ರ ನವೆಂಬರ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ‘ಅಖಾಡ ತೆರೆದಿದೆ, ನಾವು ತಯಾರಿದ್ದೀವಿ. ನೀವೂ ಅಖಾಡಕ್ಕೆ ಧುಮುಕಿ ಎಂದು ಹೇಳಿದ್ದರು. ಹೌದು ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಶತಾಯ ಗತಾಯ ಸೋಲಿಸಬೇಕೆಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಆ್ಯಕ್ಟೀವ್ ಆದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಉತ್ತರವಿದು. ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಕ್ಯಾಬಿನೆಟ್ ದರ್ಜೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1998ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದು ಉನ್ನತ ಸ್ಥಾನಕ್ಕೆ ಏರಿದವರು.
ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವರವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಾಗ ಸಾಮಾನ್ಯ ಕಾರ್ಯಕರ್ತೆಯಾಗಿ ಪ್ರಚಾರ ಮಾಡಿದವರು ಲಕ್ಷ್ಮೀ ಹೆಬ್ಬಾಳ್ಕರ್. ಬಳಿಕ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು. 2013ರಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಲಕ್ಷ್ಮೀ ಹೆಬ್ಬಾಳ್ಕರ್, 2014ರ ಲೋಕಸಭಾ ಕ್ಷೇತ್ರದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ಸೋತರೂ ಮನೆಯಲ್ಲಿ ಕೂರದೇ ಪಕ್ಷ ಸಂಘಟನೆ ಮಾಡಿ 2018ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.
ಇದನ್ನೂ ಓದಿ:Lakshmi Hebbalkar: ಐದೇ ವರ್ಷಗಳಲ್ಲಿ 7.15 ಕೋಟಿ ರೂ. ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್ ಆದಾಯ
ಬದ್ದ ವೈರಿಗಳಾದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್
2018ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ನಿಂತು ಶಾಸಕರಾಗಿ ಆರಿಸಿ ತರುವಲ್ಲಿ ಯಶಸ್ವಿಯಾಗಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಬದ್ಧ ವೈರಿಯಾದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದ ಸಾಹುಕಾರ್ ತಮ್ಮ ಆಪ್ತ ಮರಾಠಾ ಸಮುದಾಯದ ನಾಗೇಶ್ ಮನ್ನೋಳಕರ್‌ಗೆ ಬಿಜೆಪಿ ಟಿಕೆಟ್ ಕೊಡಿಸಿದ್ದರು. ಆದ್ರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 56 ಸಾವಿರ ಮತಗಳ ಅಂತರದಿಂದ ಗೆದ್ದು ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಇತಿಹಾಸ ನಿರ್ಮಿಸಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನು ತಮ್ಮ ಚನ್ನರಾಜ ಹಟ್ಟಿಹೊಳಿಯನ್ನು ಸಹ ರಾಜಕೀಯ ಜೀವನಕ್ಕೆ ಕರೆ ತಂದು ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಲ್ಲಿಸಿ ಆರಿಸಿ ತಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ತಾಲೂಕಿನ ಮೊದಲ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಇತ್ತ ಸಚಿವ ಸ್ಥಾನ ಕಾತರಿ ಆಗುತ್ತಿದ್ದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣು ಮಗು ಜನಿಸಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಅಜ್ಜಿಯಾಗಿ ಡಬಲ್ ಖುಷಿಯಲ್ಲಿದ್ದಾರೆ.
ಲಕ್ಷ್ಮಣ ಸವದಿ ಸೇರಿ 5 ಜನಕ್ಕೆ ಕೈ ತಪ್ಪಿದ ಸಚಿವ ಸ್ಥಾನ
ಇನ್ನು ಸಿದ್ದರಾಮಯ್ಯ ಸಂಪುಟದಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನ ಸಿಗುತ್ತೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಪೈಕಿ ಏಳು ಜನ ಲಿಂಗಾಯತ ಶಾಸಕರು ಇದ್ದು, ಐವರು ಲಿಂಗಾಯತ ಶಾಸಕರ ಮಧ್ಯೆ ಸಚಿವ ಸ್ಥಾನಕ್ಕೆ ಪೈಪೋಟಿ ಇತ್ತು. ಅದರಲ್ಲೂ ಅಥಣಿ ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೇ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಲಕ್ಷ್ಮಣ್ ಸವದಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಹಾಕಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಅತ್ತ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಮತ್ತು ಅಶೋಕ ಪಟ್ಟಣ್, ಮಹಾಂತೇಶ ಕೌಜಲಗಿ ಅವರ ಮಂತ್ರಿಗಿರಿ ಕನಸು ಭಗ್ನವಾಗಿದೆ.
ಸಿದ್ದರಾಮಯ್ಯ ಶಿಷ್ಯ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಳರ್ ಮಾತ್ರ ಬೆಳಗಾವಿ ಜಿಲ್ಲೆಯಿಂದ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದರೂ ಲಕ್ಷ್ಮಣ ಸವದಿ ಎಲ್ಲಿಯೂ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿಲ್ಲ. ಆದರೂ ಸಚಿವ ಸ್ಥಾನ ಕೈ ತಪ್ಪಿದ ಬೆಳಗಾವಿ ಜಿಲ್ಲೆಯ ಶಾಸಕರ ಆಕ್ರೋಶ ಯಾವುದೇ ಸಂದರ್ಭದಲ್ಲೂ ಸ್ಫೋಟಗೊಂಡರು ಅಚ್ಚರಿ ಪಡಬೇಕಿಲ್ಲ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ