Lakshmi Hebbalkar: ಐದೇ ವರ್ಷಗಳಲ್ಲಿ 7.15 ಕೋಟಿ ರೂ. ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್ ಆದಾಯ
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆದಾಯ ಕೇವಲ ಐದು ವರ್ಷಗಳಲ್ಲಿ ಕೋಟ್ಯಂತರ ರೂ. ಹೆಚ್ಚಳವಾಗಿರುವುದು ತಿಳಿದುಬಂದಿದೆ.
ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಆದಾಯ ಕೇವಲ ಐದು ವರ್ಷಗಳಲ್ಲಿ ಕೋಟ್ಯಂತರ ರೂ. ಹೆಚ್ಚಳವಾಗಿರುವುದು ತಿಳಿದುಬಂದಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅವರು, ಆದಾಯ ಹಾಗೂ ಆಸ್ತಿ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು, 7.15 ಕೋಟಿ ರೂ. ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ. 2018ರಲ್ಲಿ 36.58 ಲಕ್ಷ ರೂ. ಆದಾಯ ಹೊಂದಿದ್ದ ಶಾಸಕಿ ಹೆಬ್ಬಾಳ್ಕರ್, 2022ರ ವೇಳೆಗೆ 7.15 ಕೋಟಿ ರೂ. ಆದಾಯ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಅವರ ಆದಾಯ 6.70 ಕೋಟಿ ರೂ. ಹೆಚ್ಚಳವಾದಂತಾಗಿದೆ.
10.86 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 1.90 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 5.63 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದಿದ್ದಾರೆ. ಈ ಪೈಕಿ 72.58 ಲಕ್ಷ ರೂ. ಗೃಹಸಾಲ, 8.19 ಲಕ್ಷ ರೂ. ವಾಹನ ಸಾಲ ಆಗಿದೆ.
ಮೂರು ಅಪರಾಧ ಪ್ರಕರಣ
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮೂರು ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಯಾವ ಪ್ರಕರಣದಲ್ಲಿಯೂ ಈವರೆಗೆ ತೀರ್ಪು ಪ್ರಕಟವಾಗಿಲ್ಲ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸುಳೇಭಾವಿಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ನಂತರ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಜಾತಿ, ಸಮುದಾಯ ಲೆಕ್ಕಕ್ಕೆ ಬರಲ್ಲ, ಕಳೆದ 5 ವರ್ಷಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳಷ್ಟೇ ಗಣನೆಗೆ ಬರುತ್ತವೆ ಮತ್ತು ಅದೇ ಆಧಾರದ ಮೇಲೆ ಜನ ತಮಗೆ ವೋಟು ನೀಡುತ್ತಾರೆ ಎಂದು ಹೇಳಿದ್ದರು. ಲಕ್ಷ್ಮಣ ಸವದಿಯವರು ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಒದಗಿಸಿದೆ ಎಂದ ಅವರು ನಾಳೆಯೇ ತಮ್ಮ ಬದ್ಧ ರಾಜಕೀಯ ವೈರಿ ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್ನಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:08 pm, Tue, 18 April 23