Mysuru Incharge Minister: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಉಸ್ತುವಾರಿ ಯಾರಿಗೆ?
34 ಸ್ಥಾನಗಳು ಭರ್ತಿಯೊಂದಿಗೆ ಈಗ ಸಿದ್ದರಾಮಯ್ಯನವರ ಸಂಪೂರ್ಣ ಸಂಪುಟ ಆಗಿದೆ. ಈಗ ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಹಾಗೂ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಎನ್ನುವುದು ಕುತೂಹಲ. ಅದರಲ್ಲೂ ಸಿಎಂ ತವರು ಜಿಲ್ಲೆ ಮೈಸೂರು ಉಸ್ತುವಾರಿ ಯಾರ ಹೆಗಲಿಗೆ ಎನ್ನುವುದು ಚರ್ಚೆ ಶುರುವಾಗಿದೆ.
ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದರಾಮಯ್ಯ ಸಂಪುಟದ (Siddaramaiah Cabinet) ವಿಸ್ತರಣೆ ಆಗಿದೆ. 24 ಶಾಸಕರು ನಿನ್ನೆ(ಮೇ 27) ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಸೇರಿದಂತೆ ಒಟ್ಟು 34 ಸ್ಥಾನಗಳು ಭರ್ತಿಯೊಂದಿಗೆ ಈಗ ಸಂಪೂರ್ಣ ಸಂಪುಟ ಆಗಿದೆ. ಈಗ ಇನ್ನೇನಿದ್ರೂ ಯಾರಿಗೆ ಯಾವ ಖಾತೆ ಸಿಗುತ್ತೆ ಹಾಗೂ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ(district incharge Ministers) ಎನ್ನುವುದು ಕುತೂಹಲ ಮೂಡಿಸಿದೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಉಸ್ತುವಾರಿ(Mysuru In Charge Minister) ಯಾರ ಪಾಲಾಗಲಿದೆ ಎನ್ನುವುದು ಚರ್ಚೆ ಶುರುವಾಗಿದೆ.
ಹೌದು.. ಮೈಸೂರು ಜಿಲ್ಲೆಯಿಂದ ಟಿ.ನರಸೀಪುರ ಕ್ಷೇತ್ರದ ಶಾಸಕ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಅವರಿಗೆ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಿದೆ. ಇಬ್ಬರೂ ಆರನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದು, ಇವರಿಬ್ಬರ ಮಧ್ಯೆ ಮೈಸೂರು ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ಶುರುವಾಗಿದೆ.
ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ ಚಾಮರಾಜನಗರದಿಂದ ಯಾರೂ ಸಚಿವರಿಲ್ಲ. ಇನ್ನೂ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಕೊಡಗು ಜಿಲ್ಲೆಯಿಂದಲೂ ಯಾರೂ ಸಚಿವರಿಲ್ಲ. ಹೀಗಾಗಿ ಒಬ್ಬರಿಗೆ ಮೈಸೂರು, ಮತ್ತೊಬ್ಬರಿಗೆ ಚಾಮರಾಜನಗರ ಇಲ್ಲ ಕೊಡಗು ಜಿಲ್ಲಾ ಉಸ್ತುವಾರಿ ನೀಡಬಹುದು. ಆದ್ರೆ, ಟಿ. ನರಸೀಪುರದಿಂದ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಬಯಸಿದ್ದ ಡಾ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿ ತೋರಿದ್ದಾರೆ. ಹೀಗಾಗಿ ಮಹದೇವಪ್ಪ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಪಡೆದುಕೊಂಡರೂ ಅಚ್ಚರಿ ಪಡಬೇಕಿಲ್ಲ.
ಇಬ್ಬರೂ ಸಿದ್ದರಾಮಯ್ಯನವರ ಆಪ್ತರೇ
ಮೈಸೂರು ಭಾಗದಲ್ಲಿ 1985 ರಿಂದಲೂ ಸಿದ್ದರಾಮಯ್ಯ, ಡಾ.ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಅವರು ಸೋಲು- ಗೆಲುವಿನಲ್ಲಿ ಜೊತೆಗಾರರು. ಇಬ್ಬರಲ್ಲಿ ಯಾರು ಸಿದ್ದರಾಮಯ್ಯನವರಿಗೆ ಅತ್ಯಾಪ್ತರು ಎಂದು ಬಿಡಿಸಿ ಹೇಳುವುದಾದರೆ ಅದು ಮಹದೇವಪ್ಪ ಅವರು. ಹೀಗಾಗಿ ಮಹದೇವಪ್ಪನವರು ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಯಾವ ಜಿಲ್ಲೆ ಉಸ್ತುವಾರಿ ಕೇಳಿದರೂ ಸಿದ್ದರಾಮಯ್ಯ ಕರುಣಿಸುವ ಸಾಧ್ಯತೆಗಳು ಹೆಚ್ಚಿವೆ.
ಒಟ್ಟಿನಲ್ಲಿ ಮೈಸೂರು ಜಿಲ್ಲೆಯಿಂದ ಇಬ್ಬರು ಸಚಿವರಾಗಿದ್ದು, ಇವರ ಮುಂದೆ ಮೂರು ಜಿಲ್ಲೆಗಳಿವೆ. ಇದರಲ್ಲಿ ಯಾವ ಜಿಲ್ಲೆಯ ಉಸ್ತುವಾರಿ ಯಾರಿಗೆ? ಎಂಬುದು ಕುತೂಹಲ ಕೆರಳಿಸಿದೆ.