ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್​ಹೆಡ್‌ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ

| Updated By: Rakesh Nayak Manchi

Updated on: Jan 20, 2024 | 10:34 PM

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಸಿಎಂ ಇಬ್ರಾಹಿಂ ಅವರು ವರಿಷ್ಠರ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದೀಗ, ಜೆಡಿಎಸ್ ಚಿಹ್ನೆ, ಲೆಟರ್​ಹೆಡ್ ಬಳಸದಂತೆ ಇಬ್ರಾಹಿಂಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್​ಹೆಡ್‌ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ
ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್​ಹೆಡ್‌ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ಆದೇಶ
Follow us on

ಬೆಂಗಳೂರು, ಜ.20: ಜೆಡಿಎಸ್ (JDS) ಚಿಹ್ನೆ, ಲೆಟರ್​ಹೆಡ್ ಬಳಸದಂತೆ ಸಿ.ಎಂ. ಇಬ್ರಾಹಿಂಗೆ (C.M.Ibrahim) ನಗರದ ಸಿಟಿ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶಿಸಿದೆ. ಜೆಡಿಎಸ್​ನಿಂದ ಉಚ್ಚಾಟನೆಯಾದರೂ ಪಕ್ಷದ ಚಿಹ್ನೆ ಬಳಸುತ್ತಿದ್ದರು. ಇದಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್‌ ಹೆಡ್‌ ಬಳಕೆ ಮಾಡುವಂತಿಲ್ಲ. ಜೆಡಿಎಸ್ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. ಇಬ್ರಾಹಿಂ ಅವರಿಗೆ ಮಾತ್ರವಲ್ಲದೆ, ಇಮ್ರಾನ್ ಪಾಷಾ ಮತ್ತಿತರರಿಗೂ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಹೆಚ್​ಡಿಕೆ? ರೆಸಾರ್ಟ್​ ರಾಜಕೀಯ ಗುಟ್ಟು ಬಿಚ್ಚಿಟ್ಟ ಜೆಡಿಎಸ್ ನಾಯಕ

ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಯಾವಾಗ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತೋ ಅಂದಿನಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ಪಕ್ಷದ ವರಿಷ್ಠರ ವಿರುದ್ಧ ಇಬ್ರಾಹಿಂ ಹೇಳಿಕೆಗಳನ್ನು, ಸಭೆಗಳನ್ನು ನಡೆಸಲು ಆರಂಭಿಸಿದ್ದರು.

ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಪಕ್ಷದ ರಾಜ್ಯಾಧ್ಯಕ್ಷ ನಾನ್ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಸಿ.ಎಂ.ಇಬ್ರಾಹಿಂ ಗುಡುಗಿದ್ದರು. ಇಬ್ರಾಹಿಂ ಮಾತಿಗೆ ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರೆ ಜೆಡಿಎಸ್ ನಾಯಕರು ಸಿಡಿಮಿಡಿಗೊಂಡಿದ್ದರು. ಅಲ್ಲದೇ ಕೆಲ ಜೆಡಿಎಸ್ ನಾಯಕರು ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಪಟ್ಟು ಹಿಡಿದಿದ್ದರು. ನಂತರ ನಡೆದ ಜೆಡಿಎಸ್ ಕೋರ್​ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Sat, 20 January 24