ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಹೆಚ್ಡಿಕೆ? ರೆಸಾರ್ಟ್ ರಾಜಕೀಯ ಗುಟ್ಟು ಬಿಚ್ಚಿಟ್ಟ ಜೆಡಿಎಸ್ ನಾಯಕ
ಹೆಚ್ಚುವರಿ ಡಿಸಿಎಂ ಕೂಗು ಕಾಂಗ್ರೆಸ್ ಕೋಟೆಯಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ರೆ, ಅತ್ತ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗೆದರಿವೆ. ಜೆಡಿಎಸ್-ಬಿಜೆಪಿ ಮೈತ್ರಿಯ ಫೈರ್ ಬ್ರ್ಯಾಂಡ್ ಹೆಚ್ಡಿ ಕುಮಾರಸ್ವಾಮಿ ಲೋಕ ಅಖಾಡದಲ್ಲಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಬಿಜೆಪಿ ಜೆಡಿಎಸ್ ಎರಡು ಪಕ್ಷಗಳು ಮೈತ್ರಿಯಾಗಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲೂ ವಿಜಯಪತಾಕೆ ಹಾರಿಸಲು ರೆಸಾರ್ಟ್ ರಣಕಹಳೆ ಊದಿದ್ದು, ಜೆಡಿಎಸ್ ನಾಯಕರೊಬ್ಬರು ಕುಮಾರಸ್ವಾಮಿಯ ರೆಸಾರ್ಟ್ ರಾಜಕೀಯದ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಚಿಕ್ಕಮಗಳೂರು, (ಜನವರಿ 10): ಲೋಕಸಭೆ ಚುನಾವಣೆ (Loksabha Election 2024) ಹತ್ತಿರವಾಗುತ್ತಿದ್ದಂತೆಯೇ ಗೆಲುವಿನ ಸೂತ್ರ ಹೆಣೆಯಲು ದಳ ಕೋಟೆಯಲ್ಲಿ ರೆಸಾರ್ಟ್ ರಾಜಕಾರಣ (resort Politics) ಶುರುವಾಗಿದೆ. ಚಿಕ್ಕಮಗಳೂರು(Chikkamagaluru) ತಾಲೂಕಿನ ಮಲ್ಲೇನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) 10 ರೂಂ ಬುಕ್ ಮಾಡಿ ಪಕ್ಷದ ನಾಯಕರ ಜೊತೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟಕ್ಕೂ ರೆಸಾರ್ಟ್ ರಾಜಕಾರಣ ಹಿಂದಿನ ಕಾರಣ ಕೆದಕುತ್ತಾ ಹೊರಟರೇ ಬೇರೆಯದ್ದೇ ಕಹಾನಿ ತೆರೆದುಕೊಳ್ಳುತ್ತೆ. ಅದುವೇ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ. ಹೌದು..ಕುಮಾರಸ್ವಾಮಿಯ ರೆಸಾರ್ಟ್ ರಾಜಕೀಯದ ಬಗ್ಗೆ ಜೆಡಿಎಸ್ ನಾಯಕ ಭೋಜೇಗೌಡ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ನಾಯಕ ಭೋಜೇಗೌಡ, ಮಂಡ್ಯ, ಹಾಸನ ಜೆಡಿಎಸ್ ನ ಭದ್ರಕೋಟೆ. ನಾವು ಮಂಡ್ಯದಲ್ಲಿ ಸೋತಿರಬಹುದು. ಆದ್ರೆ, ಪುಟ್ಟರಾಜುಗಿಂತ ನಿಖಿಲ್ ಕುಮಾರಸ್ವಾಮಿ 60 ಸಾವಿರ ಜಾಸ್ತಿ ಮತ ಪಡೆದಿದ್ದರು. ನಮ್ಮ ಬೇಸ್ ಇಲ್ಲದೆ ಅಷ್ಟು ಮತಗಳು ಬಂದಿದೆ. ಇನ್ನು ಈ ಬಾರಿ ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಬೇಕು ಎಂದು ಸೋತ ಶಾಸಕರು, ನಮ್ಮ ಕಾರ್ಯಕರ್ತರು ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಇಂದಿನಿಂದ ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ, ಸಮಲತಾ ಬಗ್ಗೆ ಅಚ್ಚರಿ ಹೇಳಿಕೆ
ಮಂಡ್ಯ ಮಾತ್ರವಲ್ಲದೇ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಬೇಕು ಎನ್ನುವುದು ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ನಮಗೆ 4 ರಿಂದ 5 ಸೀಟ್ ಸಿಗುತ್ತೆ, ಅದು ನಮಗೆ ಶುಭ ಸುದ್ದಿಯೇ. 4-5 ರಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ದಿನ ಚರ್ಚೆ ನಡೆಯುತ್ತಿದೆ. ನಮ್ಮ ಶಕ್ತಿಯನ್ನ ಬಿಜೆಪಿಗೆ ಧಾರೆ ಎರೆಯಲು ಚರ್ಚೆಯಾಗುತ್ತಿದೆ ಎಂದು ರೆಸಾರ್ಟ್ ರಾಜಕೀಯದ ಗುಟ್ಟು ಬಿಚ್ಚಿಟ್ಟರು.
ಇನ್ನು ಕಾರ್ಯಕರ್ತರು ಒಗ್ಗೂಡಬೇಕು ಎನ್ನುವುದು ಕುಮಾರಸ್ವಾಮಿಯ ಅಳಲು. ಕಾರ್ಯಕರ್ತರು ಒಗ್ಗೂಡಬೇಕು. ಕಾರ್ಯಕರ್ತರು ಒಗ್ಗೂಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿರುವ ಭೋಜೇಗೌಡ, ಸೀಟು ಹಂಚಿಕೆ ಬಗ್ಗೆ ಈಗಾಗಲೇ ದೊಡ್ಡವರೆಲ್ಲ ಮಾತನಾಡಿದ್ದಾರೆ. ಸಂಕ್ರಾತಿಗೆ ಶುಭ ಸುದ್ದಿ ನೀಡಬಹುದು. ಸೀಟು ಹಂಚಿಕೆ ಲೇಟ್ ಆದ್ರೆ ಕಷ್ಟ ಎಂದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಹೆಚ್ಡಿಕೆ?
ಪ್ರಮುಖವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್ಡಿ ಕುಮಾರಸ್ವಾಮಿಯನ್ನೇ ಸ್ಪರ್ಧಿ ಮಾಡುವಂತೆ ನಾಯಕರು ಪಟ್ಟು ಹಿಡಿದಿದ್ದಾರೆಂತೆ. ಹೀಗಾಗಿ ಕುಮಾರಸ್ವಾಮಿ, ನಾಯಕರ ಜೊತೆ ಸಾಧಕ ಬಾಧಕಗಳನ್ನು ಚರ್ಚೆ ಮಾಡಲು ರೆಸಾರ್ಟ್ ಮೊರೆ ಹೋಗಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಮತ್ತೊಂದೆಡೆ ಬಿಜೆಪಿ ಸಹ ಕುಮಾರಸ್ವಾಮಿಯವರನ್ನು ಲೋಕಸಭೆ ಚುನಾವಣೆ ಸ್ಪರ್ಧೆಗೆ ಇಳಿಸೋ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.ಅಲ್ಲದೇ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿಗೆ ಕೃಷಿ ಮಂತ್ರಿ ಮಾಡಬೇಕು ಎನ್ನುವ ಚರ್ಚೆ ಸಹ ನಡೆದಿದೆ. ಯಾಕಂದ್ರೆ ಹಳೇ ಮೈಸೂರು ಭಾಗದಲ್ಲಿ ಕೃಷಿ ಆಧಾರಿತ ಜನರಿರೋ ಕ್ಷೇತ್ರಗಳೇ ಹೆಚ್ಚಾಗಿವೆ. ಹೆಚ್ಡಿಕೆ ಮಂತ್ರಿ ಆದ್ರೆ ಅದು ಎನ್ಡಿಎಗೆ ಬಲ ಕೊಡುತ್ತೆ ಎನ್ನುವುದು ಸದ್ಯದ ಚರ್ಚೆ. ಆದ್ರೆ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ತೋರಿಸುತ್ತಿಲ್ಲ. ಒಂದು ವೇಳೆ ಅಂಥ ಸನ್ನಿವೇಶ ನಿರ್ಮಾಣವಾದ್ರೆ ರಾಜ್ಯಸಭೆಯಿಂದ ನಾಮನಿರ್ದೇಶನವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ