ವಿಧಾನಸಭೆ: 2018ರಲ್ಲಿ ಯಾವ ಪಕ್ಷಕ್ಕೂ ಜನಾದೇಶ ಸಿಕ್ಕಿರಲಿಲ್ಲ. ಜೆಡಿಎಸ್ (JDS) ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಆದರೆ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರು ಎಂದು ವಿಧಾನಸಭೆ ಸದಸ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸಿದ್ದರಾಮಯ್ಯ ಸೋತರು. ಅನೈತಿಕ ರೀತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಆಗಿತ್ತು. ಅದಾಗ್ಯೂ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಬಿಜೆಪಿ ಸರ್ಕಾರ ರಚನೆಯಾಯಿತು. ಜನರ ಮುಂದೆ ಅಗ್ನಿಪರೀಕ್ಷೆಗೆ ಹೋದಾಗ ಬೆಂಬಲ ಸಿಕ್ಕಿತು ಎಂದರು.
ಸಿ.ಟಿ.ರವಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್, ಚುನಾವಣೆಯ ಸೋಲು ಗೆಲುವು ಬಗ್ಗೆ ರವಿ ಹೇಳಿಕೆ ಸರಿಯಲ್ಲ ಎಂದರು. ಈ ವೇಳೆ ವಿಕಲಾಂಗ ಮಗು ಜನನ ಬಗ್ಗೆ ಪ್ರಸ್ತಾಪಿಸಿದ ಸಿ.ಟಿ.ರವಿ, ಹಲವು ವರ್ಷದಿಂದ ಕಾದ ದಂಪತಿಗೆ ವಿಕಲಾಂಗ ಮಗು ಹುಟ್ಟಿತು. ವಿಕಲಾಂಗ ಮಗು ಹುಟ್ಟಿದಾಗ ಮಗುವಿನ ಮಾವ ಲಾಭ ಪಡೆದರು. ಒಂದು ದಿನ ಮಗು ಸತ್ತಾಗ ಮಾವನಿಗೆ ತುಂಬಾ ಬೇಸರ ಆಯ್ತು. ಮಗು ಇದ್ದರೆ ಟಿಕೆಟ್ ಮೂಲಕ ಹಣ ಸಂಪಾದನೆಯಾಗುತ್ತಿತ್ತು. ಕೆಲವರು ವಿಕಲಾಂಗ ಮಗು ಹುಟ್ಟಲಿ ಅಂತಾ ಕಾಯುತ್ತಿದ್ದಾರೆ ಎಂದು ಜೆಡಿಎಸ್ಗೆ ಟಾಂಗ್ ಕೊಟ್ಟರು.
ರಾಜ್ಯಕ್ಕೆ ಒಳ್ಳೆಯ ಮಗು ಹುಟ್ಟುವ ಅಗತ್ಯವಿದೆ. 2004, 2018ರಂತೆ ವಿಕಲಾಂಗ ಮಗು ಹುಟ್ಟಲು ಆಶಿಸಬೇಡಿ ಎಂದರು. ಇನ್ನು, ಸಿ.ಟಿ.ರವಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಂಡೆಪ್ಪ ಕಾಶಂಪುರ, ನಾವು ಬಹುಮತಕ್ಕೆ ಬರುತ್ತೇವೆ ಎಂದರು. ಈ ವೇಳೆ ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ದೇಶದ ಆರ್ಥಿಕತೆಯ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದ ಸಿ.ಟಿ.ರವಿ, ಪಾಕಿಸ್ಥಾನದಲ್ಲಿ ಗೋಧಿ ಹಿಟ್ಟಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಪಾಕಿಸ್ಥಾನ ನೋಡಿ ಅಂತ ಮೊದಲು ಹೇಳುತ್ತಿದ್ದವರು ಈಗ ಏನಂತಾರೆ? ಎಂದು ಪ್ರಶ್ನಿಸಿದರು. ದೇಶದ ಎಲ್ಲಾ ಜನರಿಗೂ ಕೊರೋನಾ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಬಹಳ ಲಾಭವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದೆ. 5300 ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಸ್ಥಿತಿ ಉತ್ತಮವಾಗಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೆ ಉತ್ತಮ. ಡಬಲ್ ಇಂಜಿನ್ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿಗೆ ಪೂರಕ ಆಗಲ್ಲ ಎಂದರು.
ಇದನ್ನೂ ಓದಿ: Malfeasance: ಸದಾ ನೆಹರು ಹೆಸರನ್ನು ಹೇಳುವ ಬಿಜೆಪಿಯ ಗೀಳಿಗೆ ಹೊಸ ಪದ ಪರಿಚಯಿಸಿದ ಶಶಿ ತರೂರ್
ರವಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ನೀವು ವಿದೇಶದ ಪ್ರಧಾನಮಂತ್ರಿಗಳ ಬಗ್ಗೆ ಮಾತಾಡಿದರೆ ಹೇಗೆ?, ರಾಜ್ಯಪಾಲರ ಭಾಷಣದ ಮೇಲೆ ಮಾತಾಡಿ, ನೀವು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಂತ ಎಲ್ಲಾ ಭಾಷಣ ಮಾಡಬೇಡಿ. ನಮ್ಮ ರಾಜ್ಯಪಾಲರ ಭಾಷಣದ ಕುರಿತು ಮಾತಾಡಿ ಎಂದರು.
ಡಬಲ್ ಇಂಜಿನ್ ಸರ್ಕಾರದ ಪ್ರಯೋಜನವೇನು ಅಂತಾ ಹೇಳುತ್ತಿದ್ದೆ. ಶಾಸಕ ಶಿವಲಿಂಗೇಗೌಡರು ಈಗ ಡಬಲ್ ಮೂಡ್ನಲ್ಲಿದ್ದಾರೆ. ಎಣ್ಣೆ ಬರುತ್ತಾ ಇದೆ, ಕಣ್ಣು ಮುಚ್ಚಿಕೊಳ್ಳಬೇಡಿ ಎಂದು ನಾನು ಹೇಳಿದ್ದೆ. ಆದರೆ ಶಾಸಕ ಶಿವಲಿಂಗೇಗೌಡ ಕೇಳಲಿಲ್ಲ. ಶಿವಲಿಂಗೇಗೌಡ ಈಗ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎಂದು ಸಿ.ಟಿ.ರವಿ ಅವರು ಮಾತಿನಲ್ಲೇ ಶಿವಲಿಂಗೇಗೌಡ ಅವರ ಕಾಲೆಳೆದರು. ಈ ವೇಳೆ ಸಿ.ಟಿ.ರವಿಗೆ ತಿರುಗೇಟು ಕೊಟ್ಟ ಶಿವಲಿಂಗೇಗೌಡ, ನಾನು ಚಕ್ರವ್ಯೂಹದಲ್ಲಿ ಸಿಲುಕಿಲ್ಲ, ನಾನು ಅಭಿಮನ್ಯು ಆಗೋದಿಲ್ಲ. ನಾನು ಅರ್ಜುನನ ಪಾತ್ರ ಹಾಕುವುದು ಎಂದರು.
ಜನಬಲ ಇರುವವರೆಗೂ ನಾನು ಅರ್ಜುನನೇ ಆಗುವುದು. ಅಭಿಮನ್ಯು ಆಗಿ ನಾನು ಸಿಕ್ಕಿಹಾಕಿಕೊಳ್ಳಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು. ಅಭಿಮನ್ಯು ಪಾತ್ರ ಏನು? ಕುತಂತ್ರ ಏನು ಅಂತಾ ತಿಳಿದುಕೊಂಡಿದ್ದೇನೆ. ಅಭಿಮನ್ಯುನನ್ನ ಕೊಂದವರು ಯಾರೂ ಅಂತಾ ನನಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು. ಈ ವೇಳೆ ಸಿ.ಟಿ.ರವಿ, ನಿಮ್ಮನ್ನ ಸುತ್ತುವರಿದ ದುರ್ಯೋಧನ ಯಾರು ಅಂತ ನೋಡ್ಕೊಳ್ಳಿ ಎಂದು ಮಾತಿನಲ್ಲೇ ಕಾಲೆಳೆದರು.
ಸಿ.ಟಿ.ರವಿ ದುರ್ಯೋಧನ ಹೇಳಿಕೆಗೆ ಉತ್ತಿರಿಸಿದ ಶಿವಲಿಂಗೇಗೌಡ, ದುರ್ಯೋಧನ ಯಾರೋ ಗೊತ್ತಿಲ್ಲ, ನಾನಂತೂ ಅರ್ಜುನ. ನಾನು ಅರ್ಜುನನ ಪಾತ್ರಧಾರಿ. ನಾನು ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿಲ್ಲ, ನಾನು ಸ್ಪಷ್ಟವಾಗಿದ್ದೇನೆ. ನನ್ನ ಕ್ಷೇತ್ರದ ಜನತೆಗೆ ತೀರ್ಮಾನ ಬಿಟ್ಟಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಆರ್.ಅಶೋಕ್, ನಿನ್ನೆ ಕಾರ್ಯಕ್ರಮದ ವೇದಿಕೆ ಮೇಲೆ ಸುತ್ತಲೂ ಯಾರಿದ್ದರು ಹೇಳಿ? ಕರ್ಣ ಯಾರು? ದುರ್ಯೋಧನ ಯಾರು? ಅಂತಾ ಹೇಳಬಹುದು ನೀವು ಎಂದರು.
ನಾನು ಅಭಿಮನ್ಯು ಪಾತ್ರ ಹಾಕಲ್ಲ, ಜನರ ಬೆಂಬಲ ಇರುವ ತನಕ ನಾನು ಅರ್ಜುನ ಎಂದು ಹೇಳಿದ ಶಿವಲಿಂಗೇಗೌಡ, ಯಾರು ಅರ್ಜುನ ಯಾರು ಅಭಿಮನ್ಯು ಅಂತ ಗೊತ್ತಾಗಲಿದೆ, ದುರ್ಯೋಧನ ಯಾರು ಅಂತ ನನಗೆ ಗೊತ್ತು, ನಾನು ಭೀಮನ ಪಾತ್ರ ಮಾಡಿದವನು. ನಾನು ದುರ್ಯೋಧನ ಪಾತ್ರ ಹಾಕಿಲ್ಲ ಎಂದು ಸಿ.ಟಿ.ರವಿಗೆ ತಿರುಗೇಟು ನೀಡಿದರು. ಈ ವೇಳೆ, ಕೌರವರ ಕಡೆ ಭೀಮ ಇರಲ್ಲ ಎಂದು ಸಿ.ಟಿ.ರವಿ ಹೇಳಿದರು. ಇದಕ್ಕೆ ಶಿವಲಿಂಗೇಗೌಡ, ಪಾಂಡವರು ಯಾರು ಕೌರವರು ಯಾರು ಅಂತ ಗೊತ್ತಾಗಲಿದೆ. ಕ್ಷೇತ್ರದ ಜನರು ಅದನ್ನು ಶೀಘ್ರ ನಿರ್ಧಾರ ಮಾಡಲಿದ್ದಾರೆ ಎಂದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Mon, 13 February 23