‘ಪಠ್ಯದಲ್ಲಿ ಭಗವದ್ಗೀತೆ ಸೇರಿಸಿ ಎಂದು ಹೇಳಿದ್ದೇನೆ ಹೊರತು ಮತಾಂತರ ಮಾಡಿ ಎಂದಿಲ್ಲ’: ಸಿಎಂಗೆ ಹೆಚ್ಡಿಕೆ ಟಾಂಗ್
ಶಿಕ್ಷಣದಲ್ಲಿ ಭಗವದ್ಗೀತೆ ಸೇರ್ಪಡೆಗೆ ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಯುವ ಪೀಳಿಗೆಯಲ್ಲಿ ನೈತಿಕ ಮೌಲ್ಯ, ಬದುಕಿನ ನಿಯಮ ಕಲಿಸಲು ಇದು ಅಗತ್ಯ ಎಂದಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂವಿಧಾನದ ಪೀಠಿಕೆ ಪ್ರಮುಖ ಎಂದರು. ಕುಮಾರಸ್ವಾಮಿ ಬಿಜೆಪಿ ಸೇರಿ ಮನುವಾದಿಯಾಗಿದ್ದಾರೆಂದು ಸಿಎಂ ಟೀಕಿಸಿದರೆ, ಇದೀಗ ಕುಮಾರಸ್ವಾಮಿ ಸಿದ್ದರಾಮಯ್ಯರ ಅಹಿಂದ ಕೊಡುಗೆ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಮಂಡ್ಯ, ಡಿ.6: ಭಗವದ್ಗೀತೆಯನ್ನು (Bhagavad Gita) ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದ್ದರು. ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ ಶಿಕ್ಷಣದ ಪ್ರತೀ ಹಂತದಲ್ಲಿಯೂ ಪಠ್ಯವಾಗಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ ಮಾಡಿರುವ ಬಗ್ಗೆ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ನಾಯಕರು ಹೆಚ್‌ಡಿ ಕುಮಾರಸ್ವಾಮಿ ವಿರೋಧ ಟೀಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಅವರು ಬಿಜೆಪಿ ಜತೆಗೆ ಸೇರಿ ಮನುವಾದಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಸಿಎಂ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಹೇಳಿದ್ದೇನೆ ಹೊರತು, ನಾನೇನು ಮತಾಂತರ ಮಾಡಿ ಎಂದು ಹೇಳಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಮಂಡ್ಯದ ವಿ.ಸಿ.ಫಾರಂನಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಇಂದಿನ ಮಕ್ಕಳ ಬದುಕು, ಸಮಾಜವನ್ನು ಯಾವ ರೀತಿ ಬೆಳೆಸುತ್ತಿದ್ದಾರೆ ಎಂಬುದನ್ನು ನೋಡಬಹುದು. ಇದೆಲ್ಲವನ್ನು ಗಮನಿಸಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವಂತೆ ಹೇಳಿದ್ದೇನೆ. ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ, ಅಣ್ಣ-ತಮ್ಮ ಕೊಲೆ ಮಾಡುವುದು ನಡೆಯುತ್ತಿದೆ. ಬದುಕಿನ ನಿಯಮಾವಳಿ ಕಲಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದಲ್ಲಿ ಕೆಟ್ಟ ಬೆಳವಣಿಗೆ ನಡೆಯುತ್ತಿದೆ. ಈಗಿನ ಸಮಾಜ ವೇಗವಾಗಿ ಬೆಳೆಯುತ್ತಿದೆ, ಈಗಿನ ಮಕ್ಕಳಿಗೆ ತಾಯಿ ಹೃದಯವಿಲ್ಲ. ನಾನು ಚಿಕ್ಕವನಿದ್ದಾಗ ನೋಡಿದ ಸಮಾಜ ಈಗ ಇಲ್ಲ. ಈಗಿನ ಸಮಾಜ, ಸಂಬಂಧ ಸರಿಪಡಿಸುವ ನಿಟ್ಟಿನಲ್ಲಿ ಈ ಮನವಿಯನ್ನು ಮಾಡಿದ್ದೇನೆ. ಸಿದ್ದರಾಮಯ್ಯ ತಲೆಯಲ್ಲಿರುವುದು ಸಮಾಜದಲ್ಲಿ ಘರ್ಷಣೆ ಸೃಷ್ಟಿಸುವುದು. 10 ವರ್ಷಗಳಿಂದ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಮಜಾ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆ ಏನೆಂದು ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರಿಗೆ ಹೆಚ್‌ಡಿ ಕುಮಾಸ್ವಾಮಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. “ಸಿದ್ದರಾಮಯ್ಯ ಅವರೇ ಎಷ್ಟು ಅಹಿಂದ ಸಮಸ್ಯೆ ಬಗೆಹರಿಸಿದ್ದೀರಿ, ಸಣ್ಣ ಜಾತಿಗಳಿಗೆ ನಿಮ್ಮ ಕೊಡುಗೆ ಏನು ನಿಮ್ಮ ಆಡಳಿತದ ಅವಧಿಯಲ್ಲಿ ಯಾರಿಗೆ ಆದ್ಯತೆ ಕೊಟ್ಟಿದ್ದೀರಿ. ಭಗವದ್ಗೀತೆ ಸಾರಾಂಶ ಜನರಿಗೆ ಅವಶ್ಯಕತೆ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಬಾಹಿರ ಚಟುವಟಿಕೆ ಬೆಂಬಲಿಸಿದೆ ಇಂತಹ ಸಂದರ್ಭದಲ್ಲಿ ಭಗವದ್ಗೀತೆ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಡಿಮೆ ಕ್ಷೇತ್ರ ಗೆಲ್ಲಲು ಗ್ಯಾರಂಟಿ ಕಾರಣ ಅಲ್ಲ, ಸತ್ಯ ಬಿಚ್ಚಿಟ್ಟ ಯತ್ನಾಳ್
ಹೆಚ್‌ಡಿ ಕುಮಾರಸ್ವಾಮಿಗೆ ಸಿಎಂ ಹೇಳಿದ್ದೇನು?
ಬಿಜೆಪಿ ಜೊತೆ ಸೇರ್ಪಡೆಗೊಂಡ ನಂತರ ಕುಮಾರಸ್ವಾಮಿ ಮನುವಾದಿ ಆಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಅರಿವಿಗೆ ಬರಬೇಕು. ಅದರಲ್ಲಿಯೂ ಮಕ್ಕಳಿಗೆ ತಮ್ಮ ಹಕ್ಕುಗಳೇನು, ಬಾಧ್ಯತೆಗಳೇನು ಎನ್ನುವುದು ಅರ್ಥ ಆಗಬೇಕು. ಇದರಿಂದಲೇ ಮಕ್ಕಳ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯನ್ನು ಅಳವಡಿಸಿದ್ದೇವೆ ಎನ್ನುವುದರ ಜೊತೆಗೆ ಅಂಬೇಡ್ಕರರ ಸಾಮಾಜಿಕ ನ್ಯಾಯದ ಹೋರಾಟ ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



