ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮುಂದುವರಿದ ಕಸರತ್ತು: ನಾಳೆ ರಂಗೇರಲಿದೆ ಬಿಜೆಪಿ, ಕಾಂಗ್ರೆಸ್ ಸಭೆ

| Updated By: Ganapathi Sharma

Updated on: Mar 04, 2024 | 8:25 AM

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟ ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿದೆ. ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಳಗಾವಿ ಜಿಲ್ಲೆಯ ವಿವಿಧ ಪ್ರವಾಸ ನಡೆಸಿ ತಂತ್ರಗಾರಿಕೆ ರೂಪಿಸಲಿದ್ದಾರೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮುಂದುವರಿದ ಕಸರತ್ತು: ನಾಳೆ ರಂಗೇರಲಿದೆ ಬಿಜೆಪಿ, ಕಾಂಗ್ರೆಸ್ ಸಭೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 4: ಲೋಕಸಭೆ ಚುನಾವಣೆಗೆ (Lok Sabha Elections) ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಸತತ ಸಭೆಗಳನ್ನು ನಡೆಸುತ್ತಿವೆ. ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಪಕ್ಷವು ಮಂಗಳವಾರ ಬೆಂಗಳೂರಿನಲ್ಲಿ ಸಭೆ ಹಮ್ಮಿಕೊಂಡಿದ್ದರೆ, ಅತ್ತ ಕಿತ್ತೂರು ಕರ್ನಾಟಕದ ನಾಲ್ಕು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಆ ಭಾಗದಲ್ಲಿ ಸಭೆ ನಡೆಸಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಖುದ್ದು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಿತ್ತೂರು ಕರ್ನಾಟಕದ ನಾಲ್ಕು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಕೇಸರಿ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಯೋಜನೆ ರೂಪಿಸುತ್ತಿದೆ. ಹೀಗಾಗಿ ಜೆಪಿ ನಡ್ಡಾ ಅವರೇ ಇದೀಗ ಎಂಟ್ರಿಕೊಡುತ್ತಿದ್ದಾರೆ. ಇಂದಿನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎರಡು ದಿನ ಪ್ರವಾಸ ಕೈಗೊಂಡಿದ್ದು ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಗೆಲ್ಲಲ್ಲು ಸೂತ್ರ ರಚಿಸಲಿದ್ದಾರೆ.

ಇಂದು ರಾತ್ರಿ ಎಂಟು ಗಂಟೆಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಲಿರುವ ನಡ್ಡಾ, ಮಾರ್ಚ್ 5ರಂದು ನಾಲ್ಕು ಕ್ಷೇತ್ರಗಳ ವಿವಿಧ ಕಡೆ ಸಭೆ ನಡೆಸಲಿದ್ದಾರೆ. ಸರಣಿ ಸಭೆಗಳನ್ನು ನಡೆಸಿ ತಂತ್ರಗಾರಿಕೆ ರೂಪಿಸಲಿದ್ದಾರೆ. ಕೋರ್ ಕಮಿಟಿ ಸಭೆ, ಬುದ್ಧಿಜೀವಿಗಳ ಜತೆ ಸಭೆ, ಪಿಎಂ ಸ್ವಃನಿಧಿಯ ಲಾಭಾರ್ಥಿಗಳ ಸಭೆ ನಡೆಸಲಿದ್ದಾರೆ.

ಚಿಕ್ಕೋಡಿಯಲ್ಲಿ ನಡ್ಡಾ ಅವರು ಬೂತ್​ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ನಡ್ಡಾ ಭೇಟಿ ವೇಳೆ ಟಿಕೆಟ್ ಆಕಾಂಕ್ಷಿಗಳೂ ಹಾಜರಿರಲಿದ್ದಾರೆ. ಟಿಕೆಟ್‌ಗಾಗಿ ನಡ್ಡಾ ಬಳಿ ದುಂಬಾಲು ಬೀಳಲು ಆಕಾಂಕ್ಷಿಗಳು ಸಜ್ಜಾಗಿದ್ದಾರೆ.

ಲೋಕಸಭೆ ಅಭ್ಯರ್ಥಿ ಆಯ್ಕೆ: ಕಾಂಗ್ರೆಸ್ ಮಹತ್ವದ ಸಭೆ

ಮತ್ತೊಂದೆಡೆ, ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರ ನಾಯಕರು ಭಾಗವಹಿಸಲಿದ್ದಾರೆ.

ಈಗಾಗಲೇ ಜಿಲ್ಲಾ ನಾಯಕರ, ಸಚಿವರ, ಸಮೀಕ್ಷಾ ವರದಿಗಳ ಮಾಹಿತಿ ಕಲೆ ಹಾಕಿರುವ ನಾಯಕರು, ನಾಳೆಯ ಸಭೆಯಲ್ಲಿ ಶಾರ್ಟ್​​ಲಿಸ್ಟ್ ಮಾಡಿ ಎಐಸಿಸಿಗೆ ಕಳುಹಿಸುವ ಸಾಧ್ಯತೆ ಇದೆ. ಈಗಾಗಲೇ 20 ಕ್ಕೂ ಹೆಚ್ಚು ಕ್ಷೇತ್ರಗಳ ವರದಿಯನ್ನು ಡಿಸಿಎಂ ಹಾಗೂ ಸಿಎಂ ಸಿದ್ದಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೂರು ದಿನದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್​ಗೆ ರವಾನೆ: ಬಿವೈ ವಿಜಯೇಂದ್ರ

ಅತ್ತ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದ್ದು, ಕರ್ನಾಟಕದ ಅಭ್ಯರ್ಥಿಗಳ ಹೆಸರನ್ನು ಉಲ್ಲೇಖಿಸಿಲ್ಲ. ಮುಂದಿನ ಪಟ್ಟಿಯಲ್ಲಿ ಕರ್ನಾಟಕದ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.

(ವರದಿ: ಪ್ರಸನ್ನ ಗಾಂವ್ಕರ್ ಮತ್ತು ಸಹದೇವ ಮಾನೆ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ