ಮೂರು ದಿನದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ಗೆ ರವಾನೆ: ಬಿವೈ ವಿಜಯೇಂದ್ರ
ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಹೈಕಮಾಂಡ್ ಕಳುಹಿಸಿರುವ ಹೆಸರುಗಳನ್ನು ಸಭೆಯ ಮುಂದಿಟ್ಟು ಚರ್ಚಿಸಲಾಗಿದೆ. ವೀಕ್ಷಕರು 28 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. ಕೇಂದ್ರೀಯ ಚುನಾವಣಾ ಸಮಿತಿಗೆ 3-5 ಹೆಸರು ಕಳುಹಿಸಲು ತೀರ್ಮಾನ ಮಾಡಲಾಗಿದೆ. ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗೈರಾಗಿದ್ದಾರೆ.
ಬೆಂಗಳೂರು, ಮಾ.3: ಎರಡು ಮೂರು ದಿನಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು. ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆ ನಿರ್ವಹಣಾ ಸಮಿತಿ ಸಭೆ (BJP Core Committee Meeting) ಕರೆಯಲಾಗಿತ್ತು. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರನ್ನು ಕಳಿಸಿದ್ದೆವು. ವೀಕ್ಷಕರಿಂದ ಬಂದಿರುವ ಹೆಸರುಗಳನ್ನು ಸಭೆಯ ಮುಂದೆ ಇಟ್ಟಿದ್ದೇವೆ. ಸಭೆಯಲ್ಲಿ ಚರ್ಚಿಸಿದ ಹೆಸರುಗಳನ್ನು ವರಿಷ್ಠರಿಗೆ ಕಳಿಸಲು ತೀರ್ಮಾನಿಸಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಬೇಕು. 28 ಕ್ಷೇತ್ರ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳ ಹೆಸರು ಕಳುಹಿಸುವುದು ನಮ್ಮ ಕರ್ತವ್ಯ. ಯಾವ್ಯಾವ ಹೆಸರುಗಳು ಚರ್ಚೆಯಾಗಿದೆಯೋ ಎಲ್ಲವನ್ನೂ ಕಳುಹಿಸುತ್ತೇವೆ. ಹಾಲಿ ಸಂಸದರ ಹೆಸರುಗಳನ್ನೂ ಒಳಗೊಂಡಂತೆ ಪಟ್ಟಿ ಕಳುಹಿಸಲಾಗುತ್ತದೆ ಎಂದರು.
ಬಸವರಾಜ ಬೊಮ್ಮಾಯಿ ಟ್ವೀಟ್
ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರ ಅಧ್ಯಕ್ಷತೆಯಲ್ಲಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ @BSYBJP ಅವರ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿಯಾದ ಶ್ರೀ @AgrawalRMD ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನ @BJP4Karnataka ಕಾರ್ಯಾಲಯದಲ್ಲಿ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ… pic.twitter.com/PBcCE0HfIL
— Basavaraj S Bommai (@BSBommai) March 3, 2024
ಹೈಕಮಾಂಡ್ಗೆ 3-5 ಆಕಾಂಕ್ಷಿಗಳ ಹೆಸರು ರವಾನೆ
ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದ ವೀಕ್ಷಕರು ಹೈಕಮಾಂಡ್ಗೆ ವರದಿ ಸಲ್ಲಿಸಿದ್ದರು. ಅದರಂತೆ ಹೈಕಮಾಂಡ್ ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ವೀಕ್ಷಕರಿಂದ ಸಲ್ಲಿಕೆಯಾದ ಹೆಸರುಗಳ ಬಗ್ಗೆ ಲೋಕಸಭಾ ಚುನಾವಣೆಗೆ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಿತು.
ಇದನ್ನೂ ಓದಿ: Lok Sabha elections: ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವಾರಣಾಸಿಯಿಂದ ಮೋದಿ ಸ್ಪರ್ಧೆ
ಸಭೆಯಲ್ಲಿ ಕೇಂದ್ರೀಯ ಚುನಾವಣಾ ಸಮಿತಿಗೆ ಹಾಲಿ ಸಂಸದರ ಹೆಸರು ಒಳಗೊಂಡಂತೆ 3-5 ಸಂಭಾವ್ಯ ಅಭ್ಯರ್ಥಿಗಳ ಹೆಸರು ಕಳುಹಿಸಲು ತೀರ್ಮಾನ ಮಾಡಲಾಗಿದೆ. 28 ಲೋಕಸಭಾ ಕ್ಷೇತ್ರಗಳಿಗೂ ಹೆಸರು ಶಿಫಾರಸು ಮಾಡಲು ನಿರ್ಧಾರಿಸಲಾಗಿದೆ. ಆದರೆ, ಮೈತ್ರಿ ಪಕ್ಷ ಜೆಡಿಎಸ್ಗೆ ಎಷ್ಟು ಕ್ಷೇತ್ರ ಬಿಟ್ಟು ಕೊಡಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ.
ಬಿಜೆಪಿ ಕೋರ್ ಕಮಿಟಿ ಸಭೆಗೆ ಪ್ರಲ್ಹಾದ್ ಜೋಶಿ ಗೈರು
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗೈರಾಗಿದ್ದಾರೆ. ಇವರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಇವರಲ್ಲದೆ, ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರವಾಲ್, ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ