ಪಾಕಿಸ್ತಾನ್ ಪರ ಘೋಷಣೆ ಆರೋಪ: ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ: ವಿಜಯೇಂದ್ರ ಪ್ರಶ್ನೆ
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆಯೇ ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗ, ಫೆಬ್ರವರಿ 28: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆಯೇ ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ವಿಚಾರವಾಗಿ ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘೋಷಣೆ ಕೂಗಿದ ಜಾಗದಲ್ಲೇ ಒದ್ದು ಆತನನ್ನು ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ರಕ್ಷಿಸುವ 6ನೇ ಗ್ಯಾರಂಟಿ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಕಾಶ್ ರೈ ಅಯೋಗ್ಯ ಎಂದ ಬಿವೈ ವಿಜಯೇಂದ್ರ
ಮಂಗಳೂರಿನಲ್ಲಿ ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ವಿಚಾರವಾಗಿ ಮಾತನಾಡಿದ್ದು, ಪ್ರಕಾಶ್ ರೈ ಅಯೋಗ್ಯ ಎಂದಿದ್ದಾರೆ. ಅಯೋಗ್ಯರ ಮಾತಿಗೆ ಉತ್ತರ ನೀಡಬೇಕಿಲ್ಲ. ಮೋದಿ ಅವರನ್ನ ದೇಶದ ಎಲ್ಲಾ ಜನ ಒಪ್ಪಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ, 400 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಈ ರೀತಿಯ ಉಡಾಫೆಯಾಗಿ ಮಾತಾನಾಡುವವರಿಗೆ ದೇಶದ ಜನ, ರಾಜ್ಯದ ಜನ ಉತ್ತರ ನೀಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ ಜಟಾಪಟಿ: ವಿಧಾನಸಭೆ ಕಲಾಪ ಮತ್ತೊಂದು ದಿನಕ್ಕೆ ವಿಸ್ತರಣೆ
ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಐದನೇ ಅಭ್ಯರ್ಥಿ ಹಾಕಿದ್ದು ಸತ್ಯ ಇದೆ. ಅದಕ್ಕೆ ಕಾರಣ ಇದೆ, ಮುಂದೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಪಾಕ್ ಪರ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಜೆಡಿಎಸ್ ಮೈತ್ರಿ ನಮಗೆ ದೊಡ್ಡ ಶಕ್ತಿ ತಂದು ಕೊಂಡಂತಾಗಿದೆ. ಬರುವ ದಿನಗಳಲ್ಲಿ ಜೆಡಿಎಸ್, ಕುಮಾರಸ್ವಾಮಿ ಜೊತೆ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ನಮ್ಮ ಜೊತೆ ಬಂದಿದ್ದಾರೆ. ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆದಿದೆ. 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾನ್ನಾಗಿಸುತ್ತೇವೆ ಎಂದಿದ್ದಾರೆ.
ನಿನ್ನೆಯ ಘಟನೆ ರಾಜ್ಯದ ಜನರಿಗೆ ತುಂಬಾ ನೋವು ತಂದಿದೆ: ಶಾಸಕ ಅಶ್ವತ್ಥ್ ನಾರಾಯಣ
ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಮಾತನಾಡಿ, ನಿನ್ನೆಯ ಘಟನೆ ರಾಜ್ಯದ ಜನರಿಗೆ ತುಂಬಾ ನೋವು ತಂದಿದೆ. ವಿಧಾನಸೌಧದಲ್ಲಿ ಈ ಘಟನೆ ನಡೆದಿದ್ದು ತುಂಬಾ ಬೇಸರ ಸಂಗತಿ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವ ಯಾರು? ಪತ್ತೆ ಮಾಡಿದ ಬ್ಯಾಡಗಿ ಬಿಜೆಪಿ ಮುಖಂಡರು!
ಸದನದಲ್ಲೂ ಈ ಬಗ್ಗೆ ಸರಿಯಾದ ಉತ್ತರ ನೀಡುವ ಕೆಲಸ ಆಗಲಿಲ್ಲ. ಘಟನೆ ಸಂಬಂಧ ರಾಜ್ಯಪಾಲರು, ರಾಷ್ಟ್ರಪತಿಗೆ ದೂರು ನೀಡಬೇಕು. ನಾಳೆ ಏನು ಮಾಡಬೇಕೆಂದು ವಿಪಕ್ಷ ನಾಯಕರು ತೀರ್ಮಾನಿಸ್ತಾರೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.