ದಾವಣಗೆರೆ ಸಮ್ಮೇಳನ ಯಶಸ್ವಿಗೆ ಸಾಂಘಿಕ ಪ್ರಯತ್ನ ಕಾರಣ: ಸರ್ವರಿಗೂ ಧನ್ಯವಾದ ತಿಳಿಸಿದ ಶಿವಾನಂದ ತಗಡೂರು
ಭಾನುವಾರ ದಾವಣಗೆರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಸಂಭ್ರಮ, ಸಡಗರ ಮತ್ತು ಅರ್ಥಪೂರ್ಣವಾಗಿ ನಡೆಯುವ ಮೂಲಕ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಈ ಸಮ್ಮೇಳನ ಯಶಸ್ವಿಗೆ ಸಹಕರಿಸಿದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಪ್ರತಿಯೊಬ್ಬ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ದಾವಣಗೆರೆ, ಮಾರ್ಚ್ 3: ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಸಂಭ್ರಮ, ಸಡಗರ ಮತ್ತು ಅರ್ಥಪೂರ್ಣವಾಗಿ ನಡೆಯುವ ಮೂಲಕ ಯಶಸ್ವಿಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು (Shivananda Tagadur) ತಿಳಿಸಿದರು. ಈ ಸಮ್ಮೇಳನ ಯಶಸ್ವಿಗೆ ಸಹಕರಿಸಿದ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಪ್ರತಿಯೊಬ್ಬ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಭಾನುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ನಡೆಯುವ ಮುಂಚೆ ಅನೇಕ ಸವಾಲುಗಳಿದ್ದವು. ಕಟ್ಟ ಕಡೆಯ ಸಂಘದ ಸದಸ್ಯರಿಂದ ಹಿಡಿದು ಪ್ರತಿಯೊಬ್ಬರ ಅಭೂತಪೂರ್ವ ಸಹಕಾರ ನಿರೀಕ್ಷೆಗೂ ಮೀರಿ ಸಿಕ್ಕಿದ್ದರಿಂದ ಸಮ್ಮೇಳನ ಯಶಸ್ವಿಯಾಯಿತು. ಇದಕ್ಕೆ ರಾಜ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವತಿಯಿಂದ ರಾಜ್ಯದ ಸಮಸ್ತ ಪತ್ರಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಕಳೆದ ಮೂರು ದಶಕಗಳಿಂದ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ವ್ಯವಸ್ಥೆ ಒಳಗೊಂಡಂತೆ ಎಂಟು ಹಕ್ಕೊತ್ತಾಯ ಮಾಡಲಾಗಿತ್ತು. ಅದು ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರಿಗೆ ಬಸ್‌ಪಾಸ್ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಅವರು ಈ ಬಾರಿಯ ಬಜೆಟ್‌ನಲ್ಲಿ ಈ ಬೇಡಿಕೆ ಘೋಷಿಸುವ ಮೂಲಕ ಮೂರು ದಶಕಗಳ ಬೇಡಿಕೆ ಈಡೇರಿದೆ. ಅದಕ್ಕಾಗಿ ಸಿಎಂ, ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಪತ್ರಕರ್ತರಿಗೆ ಉಚಿತ ಬಸ್ ಘೋಷಣೆ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಕೆಯುಡಬ್ಲ್ಯೂಜೆ ವತಿಯಿಂದ ಸನ್ಮಾನ
ಪತ್ರಕರ್ತರನ್ನು ಯಶಸ್ವಿನಿ ಯೋಜನೆಗೆ ಸೇರ್ಪಡೆ ಮಾಡುವುದು ಒಳಗೊಂಡಂತೆ ಇತರೆ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಂಘದ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿನ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಎದುರಿಸುತ್ತಿರುವ ವಿವಿಧ ಸವಾಲು, ಸಮಸ್ಯೆಗಳು, ಪರಿಹಾರೋಪಾಯಗಳ ಕುರಿತಂತೆ ನಾಲ್ಕು ಅರ್ಥ ಪೂರ್ಣ ಗೋಷ್ಠಿಗಳು ನಡೆಸಲಾಯಿತು. ಈ ಎಲ್ಲಾ ಗೋಷ್ಠಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜೊತೆಗೆ ಹಿರಿಯ ಪತ್ರಕರ್ತರ ಪ್ರಶಂಸೆಗೆ ಪಾತ್ರವಾಗಿತ್ತು ಎಂದರು.
ಇದನ್ನೂ ಓದಿ: KUWJ ಹೋರಾಟದ ಫಲ: ನನಸಾದ ಪತ್ರಕರ್ತರ ಬಸ್ ಪಾಸ್ ಯೋಜನೆ, ಸಿಎಂಗೆ ಧನ್ಯವಾದ ತಿಳಿಸಿದ ಶಿವಾನಂದ ತಗಡೂರು
ನಾಡಿನ ಎಲ್ಲೆಡೆಯೂ ದಾವಣಗೆರೆ ಸಮ್ಮೇಳನದ ಯಶಸ್ಸಿನ ಬಗ್ಗೆ ಪ್ರಶಂಸನೀಯ ಮಾತುಗಳು ಕೇಳಿ ಬರುತ್ತಿವೆ. ಈ ರೀತಿಯ ಉತ್ತಮ ಪ್ರತಿಕ್ರಿಯೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ವರದಿಗಾರರ ಕೂಟ, ಉಪ ಸಮಿತಿಗಳ ಎಲ್ಲ ಸದಸ್ಯರ ಸಾಂಘಿಕ ಪ್ರಯತ್ನ, ಅತ್ಯುತ್ತಮ ಸಹಕಾರ ಕಾರಣವೂ ಸಮ್ಮೇಳನ ಯಶಸ್ವಿಗೆ ಮುಖ್ಯವಾಗಿದೆ ಎಂದು ಅಭಿಮಾನದಿಂದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ, ಕಾನಿಪ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎ. ಫಕೃದ್ಧೀನ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಕಾನಿಪ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಕಾನಿಪ ಖಜಾಂಚಿ ಎನ್.ವಿ. ಬದರಿನಾಥ್, ಪತ್ರಕರ್ತರಾದ ಮಂಜುನಾಥ್ ಕಾಡಜ್ಜಿ, ನಾಗರಾಜ್ ಬಡದಾಳ್, ಎಂ.ಬಿ. ನವೀನ್ ಕುಮಾರ್, ಜೆ.ಎಸ್. ವೀರೇಶ್ ಮತ್ತಿತರರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:58 pm, Sun, 3 March 24