Bitcoin ಜಟಾಪಟಿ: ಹಿಟ್​ ಅಂಡ್ ರನ್ ರಾಜಕೀಯ ಶುರು ಮಾಡಿದ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ, ಪ್ರಧಾನಿ ಸೂಚನೆ ಸರಿಯಿಲ್ಲ: ಕಾಂಗ್ರೆಸ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 12, 2021 | 3:34 PM

ಬಿಟ್​ಕಾಯಿನ್ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ? ಆರೋಪಿ ಶ್ರೀಕಿ ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು ಎಂದು ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

Bitcoin ಜಟಾಪಟಿ: ಹಿಟ್​ ಅಂಡ್ ರನ್ ರಾಜಕೀಯ ಶುರು ಮಾಡಿದ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ, ಪ್ರಧಾನಿ ಸೂಚನೆ ಸರಿಯಿಲ್ಲ: ಕಾಂಗ್ರೆಸ್​
ಬಿಜೆಪಿ, ಕಾಂಗ್ರೆಸ್ ಮತ್ತು ಬಿಟ್​ಕಾಯಿನ್
Follow us on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್​ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮೂಲಕ ಹಲವು ಆರೋಪಗಳನ್ನು ಮಾಡಿದೆ. ‘ದಲಿತ ವಿರೋಧಿ ಸಿದ್ದರಾಮಯ್ಯ ಈಗ ಹಿಟ್ ಅಂಡ್ ರನ್ ರಾಜಕೀಯ ಆರಂಭಿಸಿದ್ದಾರೆ’ ಎಂದು ಬಿಜೆಪಿ ದೂರಿದೆ. ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು ಬಿಟ್​ಕಾಯಿನ್ ವಿಚಾರ ತೇಲಿ ಬಿಟ್ಟಿದ್ದಾರೆ. ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸುವ ಸಿದ್ದರಾಮಯ್ಯ ಅವರೇ ದಾಖಲೆ ಬಿಡುಗಡೆ ಮಾಡಲು ಭಯವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಟ್​ಕಾಯಿನ್ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ? ಆರೋಪಿ ಶ್ರೀಕಿ ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು ಎಂದು ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

ಬಿಟ್​ಕಾಯಿನ್ ವಿಚಾರದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ಮಂಡಿಸಿ ಎಂದು ಈಗಾಗಲೇ ಹೇಳಿದ್ದೇನೆ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಈಗಾಗಲೇ ಹೇಳಿದ್ದೇನೆ. ಕಾಂಗ್ರೆಸ್‌ ನಾಯಕರ ಕಪೋಲಕಲ್ಪಿತ ಆರೋಪಗಳಿಗೆ ಮತ್ತೆ ಮತ್ತೆ ಉತ್ತರಿಸುವ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನೂ ಬಿಜೆಪಿ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

ನಿರ್ಲಕ್ಷಿಸಿ ಎಂದು ಪ್ರಧಾನಿಯೇ ಹೇಳಿದರೆ ಹೇಗೆ? ಸಿದ್ದರಾಮಯ್ಯ ಪ್ರಶ್ನೆ
ಬಿಟ್​ಕಾಯಿನ್ ಹಗರಣದ ಮತ್ತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಈ ವಿಚಾರದಲ್ಲಿ ಬಿಜೆಪಿ ನಡೆ ಮತ್ತು ಪ್ರಧಾನಿ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ‘ಬಿಟ್​ಕಾಯಿನ್ ಹಗರಣದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಯುತ್ತಿದೆ. ಇದೀಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದರು. ಅವರಿಗೆ ಪ್ರಕರಣದ ಗಾಂಭೀರ್ಯ ಅರ್ಥವಾಗಿರಬೇಕು’ ಎಂದು ಹೇಳಿದ್ದಾರೆ.

ತನಿಖೆಯ ಹಂತದಲ್ಲಿರುವ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ನಿರ್ಲಕ್ಷಿಸಿ ಎಂದು ಹೇಳಿದ್ದಾರೆ ಎಂದರೆ ಹೇಗೆ? ತನಿಖೆಯನ್ನು ಕೈಬಿಡಿ ಎಂದಾಗುವುದಿಲ್ಲವೇ? ಆರೋಪದ ಬಗ್ಗೆ ತನಿಖೆ ನಡೆಸಿ, ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಲು ಪ್ರಧಾನಿ ಸೂಚಿಸಬೇಕು. ಅದುಬಿಟ್ಟು ನಿರ್ಲಕ್ಷಿಸಿ ಎಂದು ಪ್ರಧಾನಿಯೇ ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಿಯ ಏಕಪಕ್ಷೀಯ ತೀರ್ಮಾನವೇ ಅಂತಿಮವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್​ ಪ್ರಕರಣ ಮುಖ್ಯವಲ್ಲ ಎಂದ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ಚರ್ಚಿಸಿದ್ದು ಏಕೆ?- ಪ್ರಿಯಾಂಕ್ ಖರ್ಗೆ
ಇದನ್ನೂ ಓದಿ: ಚಪ್ಪಲಿಯೂ ಇಲ್ಲದೆ ಆಟೋ ಹತ್ತಿದ್ದ ಬಿಟ್​ಕಾಯಿನ್​ ಆಸಾಮಿ ಶ್ರೀಕಿಯ ಸ್ಟಾರ್​ ಜಾತಕ ಇಂದು ಟಿವಿ9 ತೆರೆದಿಡ್ತಿದೆ! ನೋಡಿ

Published On - 3:29 pm, Fri, 12 November 21